Advertisement

Watch: ಯಕ್ಷಗಾನದಲ್ಲೂ ಕೊರೊನಾ ಜಾಗೃತಿ; ಸಾಲಿಗ್ರಾಮ ಮೇಳದಿಂದ ವಿಶಿಷ್ಠ ಪ್ರಚಾರಾಂದೋಲನ

09:57 AM Mar 18, 2020 | Nagendra Trasi |

ಕೋಟ: ಯಕ್ಷಗಾನ ಕಲೆ ಮನೋರಂಜನೆಯ ಜತೆ-ಜತೆಗೆ ಜನರಲ್ಲಿ ಧಾರ್ಮಿಕ, ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮವಾಗಿ ಶತಮಾನಗಳಿಂದ ಬೆಳೆದು ಬಂದಿದೆ.  ಇಲ್ಲಿ ಪ್ರದರ್ಶನವಾಗುವ ಪೌರಾಣಿಕ, ಸಾಮಾಜಿಕ ಪ್ರಸಂಗಗಳು ಮನೋರಂಜನೆ, ಜ್ಞಾನದ  ಜತೆಗೆ ಜನರಿಗೆ ಉತ್ತಮ ಸಾಮಾಜಿಕ ಸಂದೇಶವನ್ನು ನೀಡುತ್ತವೆ.

Advertisement

ಅದೇ ರೀತಿ ಕೊರೊನಾ ಎಂಬ ಮಹಾಮಾರಿ ವೈರಸ್ ವಿಶ್ವದಲ್ಲಿ ಸಾವಿರಾರು ಮಂದಿಯ ಪ್ರಾಣಾಹುತಿ ಪಡೆದು ಸಾಮಾಜಿಕ ಪಿಡುಗಾಗಿ ಮುನ್ನುಗ್ಗುತ್ತಿರುವ ಹಾಗೂ ಸರಕಾರ, ಆಡಳಿತ ವ್ಯವಸ್ಥೆ ಇದನ್ನು  ತಡೆಗಟ್ಟುವ ನಿಟ್ಟಿನಲ್ಲಿ ಸಮರೋಪಾಡಿಯಲ್ಲಿ  ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಬಡಗುತಿಟ್ಟಿನ ಹೆಸರಾಂತ ಡೇರೆ ಮೇಳವಾದ ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯು  ತನ್ನ ಯಕ್ಷಗಾನ ಪ್ರದರ್ಶನಗಳಲ್ಲಿ  ಕೊರೊನಾ ವೈರಸ್ ಬಗ್ಗೆ  ಜನಸಾಮಾನ್ಯರಿಗೆ ಜಾಗೃತಿ ಸಂದೇಶದ ಪ್ರಚಾರಾಂದೋಲನವನ್ನು ಒಂದು ವಾರದಿಂದ ಮೇಳದ ಚಂದ್ರಮುಖಿ‌ ಸೂರ್ಯಸಖಿ ಪ್ರಸಂಗದ ಮಧ್ಯದಲ್ಲಿ  ನೀಡುತ್ತಿದ್ದು ಸಾವಿರಾರು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಯಾವುದೇ ಯಕ್ಷಗಾನ ಪ್ರದರ್ಶನದ ಮಧ್ಯದಲ್ಲಿ ಸೇವಾಕರ್ತರು ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಸಮರ್ಪಿಸಿ, ಮೇಳದ ಮುನ್ನೋಟವನ್ನು ತಿಳಿಸುವ ಪರಿಪಾಠವಿದೆ. ಇದೀಗ ಈ ಮುನ್ನೋಟದ ಜತೆಗೆ ಎರಡು ನಿಮಿಷಗಳ ಕಾಲ ಕೊರೊನಾ ವೈರಸ್ ಕುರಿತು ಎಚ್ಚರಿಕೆ ಸಂದೇಶವನ್ನು ಪ್ರೇಕ್ಷಕರಿಗೆ ನೀಡುವ ಕಾರ್ಯವನ್ನು ಮೇಳ ಮಾಡುತ್ತಿದ್ದು,  ಪ್ರಧಾನ ವೇಷಧಾರಿಯಾದ ಬಳ್ಕೂರು ಕೃಷ್ಣಯ್ಯಾಜಿಯವರು ಭಾಷಣದ ಮೂಲಕ, ಕೊರೊನಾ ಖಾಯಿಲೆ ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

ಆದರೆ ವಿಶ್ವವನ್ನು ಅವಲೋಕಿಸಿದಾಗ ಭಾರತದಲ್ಲಿ ಇದರ ಪ್ರಮಾಣ ಸಾಕಷ್ಟು ಕಡಿಮೆ ಇದೆ ಎನ್ನುವುದೇ ಸಂತಸದ ಸಂಗತಿ.ಆದರೆ ನಾವು ಮೈಮರೆಯುವಂತಿಲ್ಲ, ಕೆಮ್ಮ, ಜ್ವರ, ನೆಗಡಿ ಮುಂತಾದ ಲಕ್ಷಣಗಳಿದ್ದರೆ ಜಾಗೃತಿವಹಿಸಬೇಕು ಹಾಗೂ ಅಂತವರಿಂದ ದೂರ ಇರಬೇಕು. ತಂಪು ಪಾನೀಯ ಮುಂತಾದ ವಸ್ತುಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಆಹಾರ ಸೇವಿಸುವಾಗ ಆಗಾಗ ಕೈತೊಳೆದುಕೊಳ್ಳಬೇಕು, ಆರೋಗ್ಯದ ಸಮಸ್ಯೆಯಾದರೆ ತಪಾಸಣೆಗೆ ಒಳಪಡಬೇಕು ಎಂದು ಭಾಷಣದ ಮೂಲಕ ಜನರಿಗೆ ಜಾಗೃತಿ ಸಂದೇಶ ತಿಳಿಸುತ್ತಿದ್ದಾರೆ.

ಯಕ್ಷಗಾನ ಅತ್ಯಂತ ಜನಸಾಮಾನ್ಯರ ಮಾಧ್ಯಮವಾಗಿರುವುದರಿಂದ ಹಾಗೂ ಸಾಮಾಜಿಕ ಮಾಧ್ಯಮ, ಟಿ.ವಿ. ಪತ್ರಿಕೆಗಳನ್ನು ಅವಲೋಕಿಸದಿರುವ  ಎಷ್ಟೋ ಮಂದಿ ಗ್ರಾಮಂತರ ಭಾಗದ ಸಾಮಾನ್ಯ ಜನರು ಇದನ್ನು ನೋಡುವುದರಿಂದ ಅವರು ಈ ಬಗ್ಗೆ ಎಚ್ಚರವಾಗಬೇಕು ಹಾಗೂ  ಸರಕಾರದ ಜಾಗೃತಿ ಪ್ರಚಾರಕ್ಕೆ  ನಮ್ಮಿಂದಾದ ಅಳಿಲು ಸೇವೆಯನ್ನು  ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ಈ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು  ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ತಿಳಿಸಿದ್ದಾರೆ.

Advertisement

*ಸ್ಟೋರಿ, ವೀಡಿಯೋ: ರಾಜೇಶ್ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next