Advertisement

ಜಾಗತಿಕ ಆರ್ಥಿಕತೆಯ ಮೇಲೂ ಕೊರೊನಾ ದಾಳಿ

10:22 AM Feb 23, 2020 | mahesh |

ಕೊರೊನಾ ವೈರಸ್‌ ಕಾರಣದಿಂದಾಗಿ ದೇಶದ ಕಟ್ಟಡ ನಿರ್ಮಾಣ, ವಾಹನ, ಕೆಮಿಕಲ್ಸ್‌ ಮತ್ತು ಔಷಧ ವಲಯಗಳಿಗೆ ಧಕ್ಕೆಯಾಗುವ ನಿರೀಕ್ಷೆಯಿದೆ. ದೇಶದ 28% ದಷ್ಟು ಆಮದಿನ ಮೇಲೆ ಕೊರೊನಾ ಪ್ರಭಾವ ಬೀರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ದೇಶಕ್ಕೆ ಅಗತ್ಯವಿರುವ ಆಮದು ವಸ್ತುಗಳನ್ನು ಚೀನಾವನ್ನು ಬಿಟ್ಟು ಬೇರೆ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಬಹುದು. ಇದರ ಪರಿಣಾಮ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ವೆಚ್ಚ ಹೆಚ್ಚಾಗಬಹುದು.

Advertisement

ಮೊದಲೆಲ್ಲಾ ರಾಷ್ಟ್ರಗಳು ತಮ್ಮ ರಾಷ್ಟ್ರದ ಗಡಿ ವಿಸ್ತಾರವನ್ನು ಮಾಡುವ ಮೂಲಕ ತಮ್ಮ ಅಧಿಪತ್ಯವನ್ನು ಸಾಧಿಸಲು ಹಂಬಲಿಸುತ್ತಿದ್ದುದು ನಮಗೆಲ್ಲಾ ಗೊತ್ತಿದ್ದ ವಿಷಯವೇ. ಕಾಲಕ್ರಮೇಣ ರಾಷ್ಟ್ರಗಳ ಬಯಕೆಗಳಲ್ಲಿ ಬದಲಾವಣೆಯಾಯಿತು. ಗಡಿ ವಿಸ್ತರಣೆಯ ಬದಲು ವ್ಯಾಪಾರವನ್ನು ವಿಸ್ತಾರಗೊಳಿಸುವ, ತಮ್ಮ ಸರಕುಗಳಿಗೆ, ಸೇವೆಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ತಮ್ಮ ಅಧಿಪತ್ಯವನ್ನು ಸ್ಥಾಪಿಸುವ ಹಂಬಲ ಜಗತ್ತಿನ ರಾಷ್ಟ್ರಗಳಿಗೆ. ಹಾಗೆಯೇ ಇವತ್ತು ರಾಷ್ಟ್ರಗಳು ಜತೆಗೂಡುವುದು ಗಡಿ ವಿಸ್ತರಣೆಗಲ್ಲ. ಬದಲಾಗಿ ವ್ಯಾಪಾರದ ವಿಸ್ತರಣೆಗೆ. ಇದರ ಪರಿಣಾಮವೇ ಜಾಗತೀಕರಣ.

ಜಾಗತೀಕರಣದ ಈ ಯುಗದಲ್ಲಿ ಉತ್ಪಾದನಾಂಗಗಳ ಚಲನೆ ಬಹಳ ಸರಾಗ. ಶ್ರಮ ಮತ್ತು ಬಂಡವಾಳ ಕಡಿಮೆ ಗಳಿಕೆಯ ಪ್ರದೇಶದಿಂದ ಹೆಚ್ಚು ಗಳಿಕೆಯ ಪ್ರದೇಶಕ್ಕೆ ಚಲಿಸುವುದು ಇವತ್ತು ಸಾಮಾನ್ಯ ಸಂಗತಿ. ಬಂಡವಾಳಸ್ಥನೊಬ್ಬ ತನ್ನಲ್ಲಿರುವ ಹಣವನ್ನು ತನ್ನ ಮೂಗಿನಡಿಯಲ್ಲೇ ಹೂಡಬೇಕೆಂದು ಬಯಸುವುದಿಲ್ಲ. ಎಲ್ಲಿಯಾದರೂ ಎಷ್ಟು ದೂರದ ದೇಶವಾದರೂ ಪರವಾಗಿಲ್ಲ ಲಾಭ ಬರೋಬ್ಬರಿ ಬಂದರೆ ಸಾಕು. ಶ್ರಮದ ಚಲಾವಣೆಯೂ ಅಷ್ಟೆ. ಬೆಳಗ್ಗೆ ಮುಂಬೈ, ಮಧ್ಯಾಹ್ನ ಲಂಡನ್‌, ಸಾಯಂಕಾಲ ಮತ್ತೂಂದೆಡೆ. ತೊಂದರೆ ಇಲ್ಲ ಗಳಿಕೆ ಒಳ್ಳೆಯದಿದ್ದರೆ ಅಷ್ಟೇ ಸಾಕು.

ಜಾಗತೀಕಣ ಮಾರುಕಟ್ಟೆಯಲ್ಲಿ ಜಾಗತೀಕರಣದ ಫ‌ಲವಾಗಿ ವಸ್ತುಗಳು, ಬಂಡವಾಳ ಶ್ರಮ, ಸೇವೆಗಳು, ಹೊಸ ಆಲೋಚನೆಗಳು ಬಹಳ ವೇಗವಾಗಿ ಚಲಿಸುತ್ತವೆ. ಇದು ಬಾರ್ಡರ್‌ಲೆಸ್‌ ಜಗತ್ತಿನ ಕರಾಮತ್ತು. ಜೊತೆಗೆ ಭಯಾನಕ ರೋಗಗಳು ಸಹ ಬಹಳ ವೇಗವಾಗಿ ಜಗತ್ತಿನಾದ್ಯಂತ ಹರಡುತ್ತಿವೆ. ಜಗತ್ತಿನ ಯಾವುದೋ ಖಂಡದ ಯಾವುದೋ ಮೂಲೆಯಲ್ಲಿನ ರೋಗಗಳು ಜಗತ್ತಿನಾದ್ಯಂತ ಶ್ರಮದೊಂದಿಗೆ ವಿಮಾನದಲ್ಲೋ, ಹಡಗಿನಲ್ಲೋ ಜಗತ್ತಿನಾದ್ಯಂತ ಚಲಿಸಿ ಜಗತ್ತಿನ ರಾಷ್ಟ್ರಗಳ ಆರ್ಥಿಕತೆಯನ್ನೇ ಆತಂಕಕ್ಕೀಡು ಮಾಡುತ್ತಿರುವ ವಿದ್ಯಮಾನಗಳು ಆಗಾಗ ಕೇಳುತ್ತಿದ್ದೇವೆ. ನೋಡುತ್ತಿದ್ದೇವೆ. ಲೋಕಲ್‌ ಡಿಸೀಸ್‌ಗಳು ಗ್ಲೋಬಲ್‌ ಡಿಸೀಸ್‌ಗಳಾಗಿವೆ. ಈ ಎಲ್ಲಾ ರೋಗಗಳು ಎಂದೂ ಕೇಳದ ತಿಳಿಯದ ರೋಗಗಳಾಗಿವೆ. 20002ರಲ್ಲಿ ಸಾರ್ಸ್‌ ಎಂಬ ಭಯಾನಕ ರೋಗವು ಚೀನಾದಲ್ಲಿ ಹುಟ್ಟಿಕೊಂಡಿತು. ನಂತರ ಈ ರೋಗವು ಜಗತ್ತಿನ ಸುಮಾರು 30 ರಾಷ್ಟ್ರಗಳಿಗೆ ಹಬ್ಬಿತು. ಸಾರ್ಸ್‌ ರೋಗವು ಚೀನಾದ ಒಟ್ಟು ಆಂತರಿಕ ಉತ್ಪನ್ನದ ದರದ ಗತಿಯನ್ನು 1.1% ದಿಂದ 2.6% ದಷ್ಟು ಪ್ರಮಾಣದಲ್ಲಿ ಕುಗ್ಗಿಸಿತ್ತು. ಈಗ ಕೊರೊನಾ ವೈರಸ್‌ ಸರದಿ. ಇತ್ತೀಚಿನ ವರದಿಗಳ ಪ್ರಕಾರ ಚೀನಾದಲ್ಲಿ ಈ ವೈರಸ್‌ ಸೋಂಕಿತರ ಸಂಖ್ಯೆ 66,000 ದ ಗಡಿ ದಾಟಿದೆ. ಇದು ಜಗತ್ತಿನ ಲೆಕ್ಕಾಚಾರವಷ್ಟೇ. ಇನ್ನು ಲೆಕ್ಕವಿಲ್ಲದ್ದೆಷ್ಟೋ?

ಜಗತ್ತಿನ ಕಾರ್ಖಾನೆ, ವರ್ಕ್‌ಶಾಪ್‌, ಅಭಿವೃದ್ಧಿಯ ಇಂಜಿನ್‌ ಎಂದೆಲ್ಲಾ ಬಣ್ಣಿಸುವ ಚೀನಾದಲ್ಲಿ ಮತ್ತೂಂದು ಭಯಾನಕ ರೋಗ ಕಾಣಿಸಿಕೊಂಡಿದೆ. ಈ ಕೊರೊನಾ ವೈರಸ್‌ ಹಾವಳಿ ಆರ್ಥಿಕ ಹಿಂಜರಿತದ ಮತ್ತೂಂದು ರೂಪವೇ ಎಂಬಂತೆ ಅನಿಸುತ್ತಿದೆ. ಜಗತ್ತಿನ ಯಾವುದಾದರೊಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಹಿಂಜರಿಕೆ ಅನಿಸುತ್ತಿದೆ. ಜಗತ್ತಿನ ಯಾವುದಾದರೊಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಹಿಂಜರಿಕೆ ಕಾಣಿಸಿಕೊಂಡರೆ ಜಗತ್ತಿನ ಇತರ ರಾಷ್ಟ್ರಗಳೆಲ್ಲಾ ಆತಂಕ ಸ್ಥಿತಿ. ಇವತ್ತು ಹಿಂಜರಿಕೆಯ ಜಾಗವನ್ನು ಕೊರೊನಾ ವೈರಸ್‌ ಆಕ್ರಮಿಸಿದಂತಿದೆ. 2019ರಲ್ಲಿ ನಮ್ಮ ದೇಶಕ್ಕೆ ಸುಮಾರು 10.9 ಮಿಲಿಯನ್‌ ವಿದೇಶಿ ಪ್ರವಾಸಿಗರು ಭಾರತದಲ್ಲಿ ಪ್ರವಾಸ ಮಾಡಿದ್ದರು. ಇದರಲ್ಲಿ 3.12% ದಷ್ಟು ಪ್ರವಾಸಿಗರು ಚೀನಾದವರು. ಈ ಪ್ರಮಾಣ ಕಡಿಮೆ ಇರಬಹುದು. ಆದರೂ ಚೀನಾ-ಭಾರತದ ವ್ಯಾಪಾರ ಸಂಬಂಧದ ಫ‌ಲವಾಗಿ ಈ ಪ್ರಮಾಣ ಮುಂದೆ ಏರಬಹುದು. ಕೊರೊನಾ ಈ ಕ್ಷೇತ್ರದ ಬೆಳವಣಿಗೆಗೆ ತಡೆಯೊಡ್ಡಬಹುದು. ಇವತ್ತು ಚೀನಾ ಮತ್ತು ವಿದೇಶದಿಂದ ಬರುವ ನಮ್ಮವರನ್ನು ಸಂಶಯದ ದೃಷ್ಟಿಯಿಂದ ನೊಡಬೇಕಾದ ಸಂದಿಗ್ಧತೆ ಒದಗಿ ಬಂದಿದೆ. ಇತ್ತೀಚಿನವರೆಗೂ ಚೀನಾದ ಅಗ್ಗದ ವಸ್ತುವನ್ನು ಬಳಸುತ್ತಿದ್ದ ಮಂದಿಗೆ ನಿರಾಸೆ ಖಂಡಿತ. ಹಾಗೆಯೇ ಅಗ್ಗದ ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಮತ್ತಷ್ಟು ಬಲಗೊಳ್ಳುತ್ತಿರುವ ಈ ಸಂದಿಗ್ಧ ಸ್ಥಿತಿಯಲ್ಲಿ ವೈರಸ್‌ ಹಾವಳಿ ಚೀನಾದ ವಸ್ತುಗಳ ಮೇಲಿರುವ ನಮ್ಮ ವ್ಯಾಮೋಹ ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಕುಸಿದ ಭೀತಿಯಲ್ಲಿರುವ ಭಾರತಕ್ಕೆ ಮತ್ತೂಂದು ಆತಂಕ.

Advertisement

ಕೊರೊನಾ ವೈರಸ್‌ ಕಾರಣದಿಂದಾಗಿ ದೇಶದ ಕಟ್ಟಡ ನಿರ್ಮಾಣ, ವಾಹನ, ಕೆಮಿಕಲ್ಸ್‌ ಮತ್ತು ಔಷಧ ವಲಯಗಳಿಗೆ ಧಕ್ಕೆಯಾಗುವ ನಿರೀಕ್ಷೆಯಿದೆ. ದೇಶದ 28% ದಷ್ಟು ಆಮದಿನ ಮೇಲೆ ಕೊರೊನಾ ಪ್ರಭಾವ ಬೀರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ದೇಶಕ್ಕೆ ಅಗತ್ಯವಿರುವ ಆಮದು ವಸ್ತುಗಳನ್ನು ಚೀನಾವನ್ನು ಬಿಟ್ಟು ಬೇರೆ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಬಹುದು. ಇದರ ಪರಿಣಾಮ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ವೆಚ್ಚ ಹೆಚ್ಚಾಗಬಹುದು. ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ, ಬೆಲೆ ಏರಿಕೆ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ. ಭಾರತದ ಒಟ್ಟು ವ್ಯಾಪಾರದ ಪ್ರಮಾಣವು ಸುಮಾರು 408 ಬಿಲಿಯನ್‌ ಡಾಲರ್‌ನಷ್ಟಿದ್ದದ್ದು ಇದು 2019ರಲ್ಲಿ ಸುಮಾರು 18 ಪಟ್ಟು ಹೆಚ್ಚಾಗಿದೆ ಅಂದರೆ ಸುಮಾರು 87 ಬಿಲಿಯನ್‌ ಡಾಲರಿನಷ್ಟು ಭಾಗಗಳು ಚೀನಾದಿಂದ ಆಮದಾಗುತ್ತಿದೆ. ಕೊರೊನಾ ವೈರಸ್‌ ಹಾವಳಿ ಈ ಕ್ಷೇತ್ರಕ್ಕೆ ನುಂಗಲಾರದ ತುತ್ತಾಗಬಹುದು. ಭಾರತವು ಸ್ಮಾರ್ಟ್‌ ಫೋನ್‌ಗೆ ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ ಅಂಶ ಗಮನಾರ್ಹ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೂ ಕೊರೊನಾ ವೈರಸ್‌ ಬೆದರಿಕೆ ಒಡ್ಡಿದೆ. ಇಳಿಯುತ್ತಿರುವ ಚೀನಾದ ಕಚ್ಚಾ ತೈಲದ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಕೆಳಕ್ಕೆ ತಳ್ಳಬಹುದು. ಈಗಾಗಲೇ ಕಚ್ಚಾ ತೈಲದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಕಚ್ಚಾ ತೈಲದ ಬೆಲೆ ಇಳಿಕೆಯ ಸುದ್ದಿ ಭಾರತಕ್ಕೆ ಸಂತಸದ ವಿಷಯ. ಸಾಧಕಗಳು ಮತ್ತು ಬಾಧಕಗಳು ಹಲವಾರಿವೆ. ಈ ವೈರಸ್‌ ಜಗತ್ತಿನ ಮತ್ತು ಭಾರತದ ಆರ್ಥಿಕತೆಯ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಬಹುದು ಎಂಬುದು ಚೀನಾವು ಈ ರೋಗವನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳ ಮೇಲೆ ಅವಲಂಬಿಸಿದೆ.

ಈ ರೋಗವನ್ನು ತ್ವರಿತಗತಿಯಲ್ಲಿ ನಿರ್ಮೂಲನ ಮಾಡಲು ಚೀನಾ ದೇಶವು ಯಶಸ್ವಿಯಾದರೆ ಜಗತ್ತಿನ ಆರ್ಥಿಕತೆಯ ಮೇಲೆ ಬೀರಬಹುದಾದ ಬಾಧಕಗಳು ನಿವಾರಣೆಯಾದಂತೆಯೇ. ಪ್ರಪಂಚದಲ್ಲಿ ಇವತ್ತು ಯುದ್ಧದ ಬದಲು ಈ ಭಯಾನಕ ರೋಗಗಳು ಮನುಕುಲದ ಮೇಲೆ ಯುದ್ಧ ಸಾರಿದೆಯೋ ಎಂಬಂತೆ ಅನಿಸುತ್ತದೆ. ಈ ಜಾಗತೀಕರಣದ ಯುಗದಲ್ಲಿ ಸಮಸ್ಯೆ ಬೇರೆಯವರಲ್ಲಿ ನಮ್ಮನೆಯಲ್ಲಿಲ್ಲ, ಗಾಬರಿಪಡಬೇಕಾಗಿಲ್ಲ, ನಮ್ಮ ಮನೆಗೆ ಬರುವಾಗ ನೋಡಿಕೊಳ್ಳುವ ಎಂಬ ಮನೋಭಾವನೆ ಯಾವತ್ತೂ ಸಲ್ಲದು. ಜಗತ್ತಿನ ರಾಷ್ಟ್ರಗಳು ಎಷ್ಟು ಏಕೀತತ್ವವಾಗಿವೆಯೆಂದರೆ ಬೇರೆಯವರ ಸಮಸ್ಯೆ ನಮಗೂ ಬರಬಹುದೆಂಬ ಆಲೋಚನೆಯೇ ಪರಿಹಾರ ಕಂಡುಕೊಳ್ಳುವಲ್ಲಿ ಸಾಧ್ಯವಾಗಬಹುದು. ಜಾಗತೀಕರಣದಿಂದಾಗ ಬಹುದಾದ ಅವಘಡಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರು ವುದೊಂದೇ ಜಗತ್ತಿನ ರಾಷ್ಟ್ರಗಳಿಗೆ ಉಳಿದಿರುವ ದಾರಿ. ಇಂತಹ ಆಕಸ್ಮಿಕ ಘಟನೆಗಳ ಜೊತೆಗೂ ಅಭಿವೃದ್ಧಿ ಸಾಧಿಸುವುದು ನಿಜವಾದ ಅಭಿವೃದ್ಧಿ.

(ಲೇಖಕರು ನಿಟ್ಟೆಯ ಡಾ.ಎನ್‌.ಎಸ್‌.ಎ.ಎಂ. ಪ್ರಥಮ ದರ್ಜೆ ಕಾಲೇಜಿನ ಇಕಾನಾಮಿಕ್ಸ್‌ ಡಿಪಾರ್ಟ್‌ಮೆಂಟ್‌ನ ಪ್ರೊಫೆಸರ್‌)

ಡಾ. ರಾಘವೇಂದ್ರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next