Advertisement

ಸದನದಲ್ಲೂ ಪ್ರತಿಧ್ವನಿಸಿದ ಕೊರೊನಾ ಆತಂಕ

10:15 AM Mar 15, 2020 | Lakshmi GovindaRaj |

ವಿಧಾನಸಭೆ: ಕೊರೊನಾ ವೈರಸ್‌ ಸದನದಲ್ಲೂ ಪ್ರತಿಧ್ವನಿಸಿತು. ಕಲಬುರಗಿಯಲ್ಲಿ ಸಂಭವಿಸಿರುವ ದೇಶದಲ್ಲೇ ಮೊದಲ ಸಾವಿನ ಪ್ರಕರಣ, ಸಾರ್ವಜನಿಕರಲ್ಲಿ ಮೂಡಿರುವ ಭೀತಿ ಕುರಿತು ಪಕ್ಷಾತೀತವಾಗಿ ಆತಂಕ ವ್ಯಕ್ತವಾಯಿತು. ರಾಜ್ಯ ಸರ್ಕಾರ ಕೊರೊನಾ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರ ಜತೆಗೆ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.

Advertisement

ಜನಜಾಗೃತಿ ಮೂಡಿಸಿ, ಜನರಲ್ಲಿ ಆತಂಕ ನಿವಾರಿಸಿ, ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡ ಬೇಕು ಎಂಬ ಒಕ್ಕೊರಲ ಒತ್ತಾಯವೂ ಕೇಳಿ ಬಂತು. ಶೂನ್ಯ ವೇಳೆಯಲ್ಲಿ ಕಲಬುರಗಿ ಭಾಗದ ಶಾಸಕರು ವಿಷಯ ಪ್ರಸ್ತಾಪಿಸಿದಾಗ ಎಲ್ಲ ಸದಸ್ಯರು ಪಕ್ಷಾತೀತ ವಾಗಿ ತಮ್ಮ, ತಮ್ಮ ಭಾಗಗಳಲ್ಲಿ ಸಾರ್ವಜನಿಕರಲ್ಲಿ ಉಂಟಾ ಗಿರುವ ಭಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಜನರ ಆತಂಕ ನಿವಾರಿಸಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೊರೊನಾ ಕುರಿತು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಕಲಬುರಗಿ ಪ್ರಕರಣದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ವೈಫ‌ಲ್ಯ ಹೆಚ್ಚಾಗಿದೆ. ಕೊರೊನಾ ಲಕ್ಷಣ ಕಂಡು ಬಂದ ನಂತರ ಅವರ ಮನವೊಲಿಸಿ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿ ಚಿಕಿತ್ಸೆ ಕೊಡಿಸಬೇಕಿತ್ತು. ನಂತರವೂ ಹೈದರಾಬಾದ್‌ಗೆ ಕಳುಹಿಸಲಾಗಿದೆ. ಅಲ್ಲಿ ಐದಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿರಾಕರಿಸಲಾಗಿದೆ.

ಅಲ್ಲಿಂದ ಮತ್ತೆ ವಾಪಸ್‌ ಬರುವಾಗ ಸಾವು ಸಂಭವಿಸಿದೆ. ಹೀಗಾಗಿ, ಅಧಿಕಾರಿಗಳ ವೈಫ‌ಲ್ಯವೂ ಇದೆ ಎಂದು ದೂರಿದರು. ಕಾಂಗ್ರೆಸ್‌ನ ಜಮೀರ್‌ ಅಹಮದ್‌, ಭೀಮಾ ನಾಯಕ್‌, ಡಾ.ಅಂಜಲಿ ನಿಂಬಾಳ್ಕರ್‌, ಆನಂದ್‌ ನ್ಯಾಮ ಗೌಡ, ಬಿಜೆಪಿಯ ದತ್ತಾತ್ರೇಯ ಪಾಟೀಲ್‌ ರೇವೂರ, ರಾಜಕುಮಾರ್‌ ಪಾಟೀಲ್‌, ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ್‌, ವೆಂಕಟರಾವ್‌ ನಾಡಗೌಡ ಸೇರಿ ಹಲವು ಸದಸ್ಯರು ಮಾತನಾಡಿ, ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಲಬುರಗಿ ಜಿಲ್ಲಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಯಾವುದೇ ರೀತಿಯ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ಕೊಡು ತ್ತಿಲ್ಲ. ಮೊಬೈಲ್‌ ಫೋನ್‌ ಕರೆಯನ್ನು ಸಹ ಸ್ವೀಕರಿಸು ವುದಿಲ್ಲ. ಸಾವು ಪ್ರಕರಣದ ನಂತರ ಇಡೀ ಜಿಲ್ಲೆಯಲ್ಲಿ ಆತಂಕ ವ್ಯಾಪಿಸಿದೆ ಎಂದು ಪ್ರಿಯಾಂಕ್‌ ಖರ್ಗೆ, ಅಜಯ್‌ಸಿಂಗ್‌, ಖನೀಜ್‌ ಫಾತೀಮಾ ಹೇಳಿದರು.

Advertisement

ಪ್ರವಾಸಿ ತಾಣಗಳ ಮೇಲೆ ನಿಗಾ ಅಗತ್ಯ: ಹಂಪಿಗೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಅವರ ಮೇಲೆ ನಿಗಾ ಇಡಬೇಕು. ಬೈಲಕುಪ್ಪೆಗೆ ಚೀನಾ ಕಡೆ ಯಿಂದ ಹೆಚ್ಚಿನವರು ಬಂದು ಹೋಗುತ್ತಾರೆ. ಆ ಪ್ರದೇಶ ದಲ್ಲಿ ನಿಗಾ ಇಡಬೇಕು. ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ವಿದೇಶಿ ಪ್ರವಾಸಿಗರಷ್ಟೇ ಅಲ್ಲದೆ, ಎಲ್ಲ ಪ್ರಯಾ ಣಿಕರ ತಪಾಸಣೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂತು.

ಸಿಎಂ ಉತ್ತರ: ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ ಅವರು ಖುದ್ದು ಈ ಕುರಿತು ಉತ್ತರಿಸಿ, ರಾಜ್ಯದ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿಪಕ್ಷ ಸದಸ್ಯರ ಎಲ್ಲ ಸಲಹೆ, ಸೂಚನೆ ಪಡೆದು ನಿರಂತರವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೊರೊನಾ ವೈರಸ್‌ ಪತ್ತೆ ಪ್ರಯೋಗಾಲಯ ಸ್ಥಾಪನೆ, ಕಿಟ್‌ ವ್ಯವಸ್ಥೆ, ಅಗತ್ಯ ಔಷಧ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ವ್ಯವಸ್ಥೆ ಎಲ್ಲದಕ್ಕೂ ಕ್ರಮ ಕೈಗೊಳ್ಳಲಾಗಿದೆ.

ಕಲಬುರಗಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮೃತ ವ್ಯಕ್ತಿಯ ಕುಟುಂಬ ದವರು, ಅವರ ಜತೆ ವಿಮಾನದಲ್ಲಿ ಪ್ರಯಾಣಿಸಿ ದವರು, ಅವರನ್ನು ಸಂಪರ್ಕಿಸಿದವರು ಸೇರಿದಂತೆ ಎಲ್ಲರ ತಪಾಸಣೆ ನಡೆಸಲಾಗಿದೆ. ನಾಲ್ವರನ್ನು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವರ ಜತೆಯೂ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು. ಕೊರೊನಾ ವೈರಸ್‌ಗೆ ದೇಶದಲ್ಲೇ ಮೊದಲ ಸಾವು ಪ್ರಕರಣ ನಮ್ಮ ರಾಜ್ಯದಲ್ಲಿ ನಡೆದಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.

1.20 ಲಕ್ಷ ಜನರ ತಪಾಸಣೆ – ಸಚಿವ ಶ್ರೀರಾಮುಲು: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೇರೆ ದೇಶದಿಂದ ಬಂದ 85 ಸಾವಿರ ಪ್ರಯಾಣಿಕರು, ಮಂಗಳೂರು ವಿಮಾನ ನಿಲ್ದಾಣದಲ್ಲಿ 30 ಸಾವಿರ ಪ್ರಯಾಣಿಕರು, ಮಂಗಳೂರು ಬಂದರಿನಲ್ಲಿ 5 ಸಾವಿರ ಮಂದಿಯ ತಪಾಸಣೆ ಸೇರಿ ಒಟ್ಟು 1.20 ಲಕ್ಷ ಜನರ ತಪಾಸಣೆ ಮಾಡಲಾಗಿದೆ. 575 ಜನರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ, ಸೇನಾ ಆಸ್ಪತ್ರೆಗಳಲ್ಲಿ ತುರ್ತು ಸ್ಥಿತಿ ನಿಭಾಯಿಸಿ, ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಬೇರೆ, ಬೇರೆ ದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವವರ ರಕ್ಷಣೆಗೆ ಕೇಂದ್ರ ವಿದೇಶಾಂಗ ಸಚಿವಾಲಯದ ಜತೆ ಸಂಪರ್ಕ ಸಾಧಿಸಲಾಗಿದೆ. ಚಿಕಿತ್ಸೆ ಮತ್ತಿತರ ಸೇವೆಗಳ ಸಂಬಂಧ ಕೇಂದ್ರ ಆರೋಗ್ಯ ಸಚಿವರ ಜತೆಯೂ ನಿರಂತರ ಸಂಪರ್ಕದಲ್ಲಿದ್ದೇನೆ. ದಿನದ 24 ಗಂಟೆಯೂ ಕೆಲಸ ಮಾಡಲು ನಾನು ಸಿದ್ಧನಿದ್ದು, ಅಧಿಕಾರಿಗಳಿಗೂ ಈ ಬಗ್ಗೆ ನಿರ್ದೇಶನ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next