ಬಾಲಸೋರ್:ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ಹಿನ್ನೆಲೆ ಒಡಿಶಾ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇಂದು (ಜೂ.03) ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.
ಘಟನಾ ಸ್ಥಳಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಆಗಿದ್ದೇನು?: ನಿನ್ನೆ (ಜೂ.02) ಸಂಜೆ 7.30ಕ್ಕೆ ಹೊರಟಿದ್ದ ಪಶ್ಚಿಮ ಬಂಗಾಲದ ಶಾಲಿಮರ್ ಸ್ಟೇಶನ್ ಮತ್ತು ಚೆನ್ನೈ ನಡುವೆ ಸಂಚರಿಸುವ ಕೋರಮಂಡಲ್ ಎಕ್ಸ್‌ಪ್ರಸ್ ಬಹಾನಾಗ ರೈಲು ನಿಲ್ದಾಣ ಸಮೀಪಿಸುತ್ತಲೇ ಏಕಾಏಕಿ ಹಳಿ ತಪ್ಪಿತು. ಈ ಪೈಕಿ 10-12 ಬೋಗಿಗಳು ಪಕ್ಕದ ಹಳಿಯ ಮೇಲೆ ಬಿದ್ದವು. ಆ ಹಳಿಯಲ್ಲಿ ಅದೇ ಸಮಯದಲ್ಲಿ ಯಶವಂತಪುರದಿಂದ ಬರುತ್ತಿದ್ದ ರೈಲು, ಬಿದ್ದಿದ್ದ ಬೋಗಿಗಳಿಗೆ ಢಿಕ್ಕಿ ಹೊಡೆಯಿತು. ಅನಂತರ ಬಂದ ಗೂಡ್ಸ್ ರೈಲು ಕೂಡ ಇದಕ್ಕೆ ಢಿಕ್ಕಿಯಾಯಿತು. ಇದರಿಂದಾಗಿ ಸಾವು- ನೋವು ಹೆಚ್ಚಾಯಿತು ಎಂದು ಒಂದು ಮೂಲಗಳು ತಿಳಿಸಿವೆ. ಆದರೆ ಘಟನೆ ಹೇಗಾಯಿತು ಎಂಬ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿಲ್ಲ. ಘಟನ ಸ್ಥಳಕ್ಕೆ ತತ್‌ಕ್ಷಣವೇ ಹಲವು ಆ್ಯಂಬುಲೆನ್ಸ್ ಮತ್ತು ಬಸ್‌ಗಳನ್ನು ಕಳುಹಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
Related Articles
700 ಮಂದಿ ಕಾರ್ಯಾಚರಣೆ
ರಾಷ್ಟ್ರೀಯ ವಿಪತ್ತು ದಳ, ಒಡಿಶಾ ವಿಪತ್ತುದಳಕ್ಕೆ ಸೇರಿದ 600ರಿಂದ 700 ಮಂದಿ ರಕ್ಷಣ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಡೀ ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬಂದಿಯ ಜತೆ ಸ್ಥಳೀಯರೂ ಕೈಜೋಡಿಸಿದ್ದಾರೆ.
ಹಲವು ಟ್ರೈನುಗಳು ರದ್ದು, ಕೆಲವು ಮಾರ್ಗ ಬದಲಾವಣೆ
ಭಾರೀ ದುರಂತ ನಡೆದಿದ್ದು ಗೊತ್ತಾದ ಕೂಡಲೇ ಹಲವು ರೈಲುಗಳ ಸಂಚಾರ ರದ್ದಾಗಿದೆ. ಕೆಲವು ರೈಲುಗಳು ತಮ್ಮ ಮಾರ್ಗವನ್ನೇ ಬದಲಿಸಿಕೊಂ ಡಿವೆ. ಸೀಲ್ದಾಹ್-ಪುರಿ ತುರಾಂತೊ ಎಕ್ಸ್‌ಪ್ರೆಸ್ ಶುಕ್ರವಾರ ರಾತ್ರಿ 8ಕ್ಕೆ ಹೊರಡಬೇಕಿತ್ತು. ಅದು ರದ್ದಾಗಿದೆ. ವಿವಿಧ ಮಾರ್ಗಗಳಿಗೆ ತೆರಳಬೇಕಿದ್ದ ಒಟ್ಟು 12 ರೈಲುಗಳ ಕಾರ್ಯಾಚರಣೆ ರದ್ದಾಗಿದೆ. ಒಟ್ಟು ಐದು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
ಸಹಾಯವಾಣಿ ಸಂಖ್ಯೆ:
8249591559
7978418322
03326382217