Advertisement

ಈ ವರ್ಷ ಉತ್ತರಕ್ಕೆ ಜೋಳ, ದಕ್ಷಿಣಕ್ಕೆ ರಾಗಿ ಡೌಟು!

02:59 PM Jan 04, 2022 | Team Udayavani |

ಸಿಂಧನೂರು: ಒಂದೇ ವಿಧದ ಆಹಾರ ಪದ್ಧತಿಯ ದುಷ್ಪರಿಣಾಮ ತಪ್ಪಿಸಲು ಉತ್ತರ ಕರ್ನಾಟಕ ಭಾಗದ ಜನರಿಗೆ ಜೋಳ, ದಕ್ಷಿಣ ಕರ್ನಾಟಕದ ಜನರಿಗೆ ರಾಗಿ ವಿತರಿಸುವ ಸರ್ಕಾರ ಉದ್ದೇಶಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

Advertisement

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗುವ ಕೃಷಿ ಉತ್ಪನ್ನವನ್ನೇ ಪಡಿತರರಿಗೆ ವಿತರಿಸಲು ಅವಕಾಶ ಪಡೆದುಕೊಂಡಿದ್ದರೂ ಈ ಯೋಜನೆ ಪ್ರಸಕ್ತ ಸಾಲಿನಲ್ಲಿ ಯಶಸ್ಸು ಕಾಣುವ ನಿರೀಕ್ಷೆಗಳು ಮಂಕಾಗಿವೆ.

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆಗೆದ ಮೇಲೂ ಭತ್ತ ಹಾಗೂ ರಾಗಿ, ಜೋಳವನ್ನು ಮಾರಾಟ ಮಾಡಲು ಹೆಸರು ನೋಂದಾಯಿಸಲಿಕ್ಕೆ ಮುಂದೆ ಬಾರದ ಹಿನ್ನೆಲೆಯಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಇದುವರೆಗೆ ಏಳು ರೈತರು ಜೋಳ ಮಾರಾಟಕ್ಕೆ ಮುಂದಾಗಿದ್ದರೆ, ರಾಗಿ 133, ಭತ್ತ 38 ಸಾವಿರ ರೈತರು ಮಾತ್ರ ಸರ್ಕಾರದ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಸರದಿಗೆ ಹೋಗಿದ್ದಾರೆ. ಸರ್ಕಾರ ನಿಗದಿಪಡಿಸಿದ ಗುರಿಗೂ ನೋಂದಣಿ ಪ್ರಮಾಣಕ್ಕೂ ಭಾರೀ ವ್ಯತ್ಯಾಸ ಇರುವುದರಿಂದ ಖರೀದಿ ಪ್ರಮಾಣ ಕುಸಿತವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಹಿನ್ನಡೆ ಸಾಧ್ಯತೆ

Advertisement

ಕಳೆದ ವರ್ಷ 2 ಲಕ್ಷ ಟನ್‌ ಭತ್ತ, 4.74 ಟನ್‌ ರಾಗಿ, 80 ಸಾವಿರ ಟನ್‌ ಜೋಳ ಖರೀದಿ ಮಾಡಿದ್ದರಿಂದ ಏಪ್ರಿಲ್‌ ನಿಂದಲೇ ಪಡಿತರರಿಗೆ ಜೋಳ ಮತ್ತು ರಾಗಿಯನ್ನು ಹಂಚಿಕೆ ಮಾಡಲಾಗಿತ್ತು. ಸ್ಥಳೀಯವಾಗಿ ಬೆಳೆಯುವ ಕೃಷಿ ಉತ್ಪನ್ನಕ್ಕೂ ಮಾನ್ಯತೆ ನೀಡಿ, ಪಡಿತರರು ಇಷ್ಟಪಡುವ ಆಹಾರ ಧಾನ್ಯ ಕೊಡಲಾಗಿತ್ತು. ಸರ್ಕಾರದ ಉದ್ದೇಶವೂ ಈಡೇರಿತ್ತು. ಉತ್ತರ ಕರ್ನಾಟಕದ ಪಡಿತರರಿಗೆ ಜೋಳ, ದಕ್ಷಿಣ ಕರ್ನಾಟಕದವರಿಗೆ ರಾಗಿ ಕೊಟ್ಟಿದ್ದರಿಂದ ಸಂತಸಗೊಂಡಿದ್ದರು. ಈ ಎರಡು ಉತ್ಪನ್ನವನ್ನು ಸರ್ಕಾರ ಖರೀದಿ ಮಾಡಲು ಷರತ್ತಿನ ತೊಡಕು ಎದುರಾಗಿರುವುದರಿಂದ ಇದರ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಗಳು ಕ್ಷೀಣಿಸಿವೆ.

ಸಹಜವಾಗಿಯೇ ಮುಂದಿನ ಬಾರಿ ಜೋಳ, ರಾಗಿ ಭಾಗ್ಯಕ್ಕೆ ಕತ್ತರಿ ಬೀಳುತ್ತದೆಂಬ ಅನುಮಾನ ಬಲಗೊಂಡಿದೆ. ನಿರ್ಬಂಧಕ್ಕೆ ಬೆದರಿದ ರೈತರು ರಾಗಿ, ಜೋಳ ಪ್ರತಿಯೊಬ್ಬ ರೈತ ತಲಾ 20 ಕ್ವಿಂಟಲ್‌ ಮಾರಾಟ ಮಾಡಬಹುದು. ಭತ್ತವಾದರೆ 40 ಕ್ವಿಂಟಲ್‌ ಕೊಡಬಹುದು ಎಂಬ ನಿರ್ಬಂಧವನ್ನು ಈ ಬಾರಿ ಸರ್ಕಾರ ಹಾಕಿದೆ. ಸಹಜವಾಗಿಯೇ ಇದು ರೈತರನ್ನು ಖರೀದಿ ಕೇಂದ್ರದಿಂದ ದೂರ ಮಾಡಿದಂತಾಗಿದೆ.

ತಮ್ಮ ಬಳಿಯ ಅಲ್ಪ ಉತ್ಪನ್ನವನ್ನು ಮಾತ್ರ ಸರ್ಕಾರಕ್ಕೆ ಕೊಡಲು ರೈತರು ಆಸಕ್ತಿ ತೋರುತ್ತಿಲ್ಲ. ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದ ರೈತರು ನೋಂದಾಯಿಸಿದ್ದರೆ, ಈ ಸಂಖ್ಯೆ 38 ಸಾವಿರಕ್ಕೆ ಏರಿಕೆಯಾಗಿದೆ.

ರಾಯಚೂರು-ಬಳ್ಳಾರಿ ಜಿಲ್ಲೆಯಲ್ಲಿ ಹೇರಳವಾಗಿ ಜೋಳ ಬೆಳೆಯಲಾಗುತ್ತಿದ್ದರೂ ಇಲ್ಲಿನ ರೈತರು ಖರೀದಿ ಕೇಂದ್ರಕ್ಕೆ ಹೋಗಿಲ್ಲ. 7 ರೈತರು ಮಾತ್ರ ತಮ್ಮ ಹೆಸರು ನೋಂದಾಯಿಸಿ ಷರತ್ತು ಸಡಿಲಿಕೆಯ ನಿರೀಕ್ಷೆಯಲ್ಲಿದ್ದಾರೆ.

ಭೌಗೋಳಿಕವಾಗಿ ಜನರ ಆಹಾರ ಪದ್ಧತಿಯ ಅನುಸಾರ ಜೋಳ, ರಾಗಿ ಕೊಡಲಾಗಿತ್ತು. ಈ ವರ್ಷವೂ ಕೊಡಬೇಕು. ಮೊದಲು ಖರೀದಿಗೆ ಹಾಕಿರುವ ಷರತ್ತು ತೆಗೆದು ಹಾಕಬೇಕು. ಆಂಧ್ರ, ತೆಲಂಗಾಣ ಮಾದರಿಯನ್ನು ರಾಜ್ಯದಲ್ಲಿ ಸರ್ಕಾರ ಅನುಸರಿಸಬೇಕು. ಹಂಪನಗೌಡ ಬಾದರ್ಲಿ, ಎಂಎಸ್ಐಎಲ್ ಮಾಜಿ ಅಧ್ಯಕ್ಷರು, ಸಿಂಧನೂರು

ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next