ಆಳಂದ: ಹಿಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾದ ಹಿನ್ನೆಲೆಯಲ್ಲಿ ಭರದಿಂದ ಬಿತ್ತನೆ ಕೈಗೊಂಡಿದ್ದ ಬೀಳಿ ಜೋಳದ ಬೆಳೆ ಇನ್ನೇನು ಕೈಗೆ ಬರಲಿದೆ ಎಂಬ ಆಶಾದಾಯಕ ಪರಿಸ್ಥಿತಿಯಲ್ಲಿ ಈಚೆಗೆ ಅಕಾಲಿಕವಾಗಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ನೆಲಕ್ಕುರುಳಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.
ಅಲ್ಲಲ್ಲಿ ತೋಟಗಾರಿಕೆ ಬೆಳೆ ಟೋಮ್ಯಾಟೋ, ಸವತೆ, ಕಲ್ಲಂಗಡಿ, ದ್ರಾಕ್ಷಿ, ಬಾಳೆ, ಕಬ್ಬಿನ ಬೆಳೆಗೆ ಸ್ವಲ್ಪ ಧಕ್ಕೆಯಾಗಿದೆ ಎಂದು ವರದಿಯಾಗಿದೆ. ತಾಲೂಕಿನ ಸರಸಂಬಾ, ಖಜೂರಿ, ಸಾಲೇಗಾಂವ, ಪಡಸಾವಳಿ, ನಿರಗುಡಿ, ಆಳಂದ ವಲಯ ತೀರ್ಥ, ಲಾಡಚಿಂಚೋಳಿ, ಕಡಗಂಚಿ ಸೇರಿ ಇನ್ನಿತರ ಭಾಗದಲ್ಲಿ ಬೆಳೆದು ತೆನೆ ಕಟ್ಟಿದ ಜೋಳ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೆಲಕ್ಕುರುಳಿ ಹಾನಿಯಾಗಿದೆ. ಬೆಳೆ ಮಧ್ಯದಲ್ಲಿ ಅರ್ಧದಷ್ಟು ಹಾನಿಗೀಡಾದರೆ, ಇನ್ನರ್ಧದಷ್ಟು ಬೆಳೆ
ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.
ಕೆಲ ಭಾಗದ ಹೊಲಗಳಲ್ಲಿ ಶೇ. 80ರಷ್ಟು ಜೋಳ ನೆಲಕ್ಕುರಳಿ ಹಾನಿಯಾಗಿದೆ. ನೋಡಲು ಅಲ್ಲಲ್ಲಿ ಜೋಳದ ದಂಟು ಕಾಣಿಸುತ್ತಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಗೋಳಾಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಹಾನಿ ಮಾಹಿತಿ ಕಲೆ ಹಾಕುವ ಕಾರ್ಯ ನಡೆದಿಲ್ಲ. ರೈತರು ತೊಗರಿ ಮಾರಾಟಕ್ಕೆ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಮಾರಿದ ತೊಗರಿ ಹಣ ಯಾವಾಗ ಬರುತ್ತದೆ ಎಂಬ ಸಂಕಷ್ಟದ ನಡುವೆ ಜೋಳದ ಬೆಳೆ ನಷ್ಟವಾಗಿರುವುದು ಮತ್ತಷ್ಟು ಕಂಗಾಲಾಗಿಸಿದೆ.
ತಾಲೂಕಿನ ಐದು ಹೋಬಳಿ ಕೇಂದ್ರಗಳಾದ ಆಳಂದ, ಖಜೂರಿ, ನರೋಣಾ, ನಿಂಬರಗಾ, ಮಾದನಹಿಪ್ಪರಗಾದಲ್ಲಿ ಒಟ್ಟು ಬೀಳಿ ಜೋಳ ನೀರಾವರಿ 800 ಹೆಕ್ಟೇರ್ ಮತ್ತು ಖುಷ್ಕಿಯಲ್ಲಿ 34500 ಹೆಕ್ಟೇರ್ ಬಿತ್ತನೆಯಾಗಿದೆ. ಆದರೆ
ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಅನೇಕರ ಹೊಲದಲ್ಲಿ ನೆಲಕ್ಕುರುಳಿದ ಜೋಳವನ್ನು ಜಾನುವಾರುಗಳಿಗೆ ಮೇವಿಗಾದರು ಆಗುತ್ತದೆ ಎಂದು ದುಬಾರಿ ಕೂಲಿಯಾಳಗಳಿಂದ ಸಂಗ್ರಹಿಸುತ್ತಿರುವುದು ಕಂಡು ಬರತೊಡಗಿದೆ.
ಹಿಂಗಾರು ಬೆಳೆ ಕ್ಷೇತ್ರ: ಕೃಷಿ ಇಲಾಖೆ ಅಂದಾಜಿನಂತೆ ತಾಲೂಕಿನ ನೀರಾವರಿ 4395 ಹೆಕ್ಟೇರ್ ಹಾಗೂ ಖುಷ್ಕಿಯಲ್ಲಿ 72618 ಹೆಕ್ಟೇರ್ ಸೇರಿ 77013 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಜೋಳ, ಗೋದಿ, ಮುಸುಕಿನ ಜೋಳ, ಕಡಲೆ,
ಹುರುಳಿ, ಸೂರ್ಯಕಾಂತಿ, ಅಗಸೆ, ಶೇಂಗಾ ಬಿತ್ತನೆ ಮಾಡಲಾಗಿದೆ. ಆದರೆ ಕುಸುಬೆ, ಕಡಲೆ, ಶೇಂಗಾ ಬೆಳೆಗೆ ನೀರಿನ ಕೊರತೆ ಹಾಗೂ ಬೆಳೆದ ನಿಂತ ಜೋಳ ನೆಲಕ್ಕುರಳಿರುವುದು ಉತ್ಪಾದನೆಯಲ್ಲಿ ಕುಂಠಿವಾಗಲಿದೆ ಎಂದು ಅಂದಾಜಿಸಲಾಗಿದೆ.