ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ಜನವರಿ 26ರಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರಾಲಿಗೆ ಅವಕಾಶ ನೀಡುವ ಕುರಿತು ದೆಹಲಿ ಪೊಲೀಸರು ನಿರ್ಧಾರ ತೆಗೆದುಕೊಳ್ಳಬೇಕು, ಇದೊಂದು ಕಾನೂನು ಸುವ್ಯವಸ್ಥೆಯ ವಿಚಾರವಾಗಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ(ಜನವರಿ 18, 2021) ಆದೇಶ ನೀಡಿದೆ.
ಗಣರಾಜ್ಯೋತ್ಸವ(ಜನವರಿ 26)ದಂದು ರೈತರು ನಡೆಸಲು ತೀರ್ಮಾನಿಸಿದ್ದ ಟ್ರ್ಯಾಕ್ಟರ್ ರಾಲಿ ನಡೆಸದಂತೆ ಆದೇಶ ನೀಡಬೇಕೆಂದು ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು.
“ರೈತರ ಟ್ರ್ಯಾಕ್ಟರ್ ರಾಲಿಗೆ ಸಂಬಂಧಿಸಿದಂತೆ” ತೀರ್ಮಾನ ಕೈಗೊಳ್ಳಲು ದೆಹಲಿ ಪೊಲೀಸರಿಗೆ ಎಲ್ಲಾ ರೀತಿಯ ಅಧಿಕಾರವಿದೆ. ಯಾರಿಗೆ ಒಳಪ್ರವೇಶಿಸಲು ಅನುಮತಿ ನೀಡಬೇಕು, ಎಷ್ಟು ಮಂದಿ ಇದ್ದಾರೆ ಹೀಗೆ ಇವೆಲ್ಲವೂ ಕಾನೂನು ಸುವ್ಯವಸ್ಥೆಯ ವಿಚಾರವಾಗಿದ್ದು, ಈ ಬಗ್ಗೆ ಪೊಲೀಸರೇ ನಿರ್ಧರಿಸಬೇಕು. ನಾವು ಈ ಬಗ್ಗೆ ಮೊದಲು ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಸಿಜೆಐ ಎಸ್ ಎ ಬೋಬ್ಡೆ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಆದೇಶ ನೀಡಿದೆ.
“ಇದೊಂದು ಅಪರೂಪದ ಸನ್ನಿವೇಶವಾಗಿದೆ. ಅಲ್ಲದೇ ಈ ನಿಟ್ಟಿನಲ್ಲಿ ನ್ಯಾಯಾಲಯ ಆದೇಶ ಹೊರಡಿಸಬಹುದು” ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಪೊಲೀಸರ ಅಧಿಕಾರಗಳೇನು, ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ? ನಾವು ಇದನ್ನೆಲ್ಲಾ ಹೇಳಲು ಸಾಧ್ಯವಿಲ್ಲ ಎಂದು ಸಿಜೆಐ ಹಾಗೂ ಜಸ್ಟೀಸ್ ಗಳಾದ ಎಲ್ ಎನ್ ರಾವ್ ಮತ್ತು ವಿನೀತ್ ಸರನ್ ನೇತೃತ್ವದ ಪೀಠ ತಿಳಿಸಿದೆ.
ರೈತರ ಟ್ರ್ಯಾಕ್ಟರ್ ರಾಲಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿ, ವಾದ ಆಲಿಸಿದ ಸುಪ್ರೀಂಕೋರ್ಟ್ ಜನವರಿ 20ಕ್ಕೆ ಅರ್ಜಿ ವಿಚಾರಣೆ ಮುಂದೂಡಿರುವುದಾಗಿ ತಿಳಿಸಿದೆ.