Advertisement

ದಾಯಾದಿಗಳ ಕಟ್ಟಡ ಕಲಹ 

04:49 PM Sep 13, 2018 | |

ಹುಬ್ಬಳ್ಳಿ: ಬೆಂಗಳೂರಿನ ‘ಕಟ್ಟಡ ಕದನ’ದ ಕಾನೂನು ಸಮರದಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್‌, ಮುಂಬಾಗಿಲು ತೆರೆದು ‘ದಳ’ಪತಿಗಳನ್ನು ಹೊರ ಹಾಕಿತ್ತು. ಈಗ ಹುಬ್ಬಳ್ಳಿಯಲ್ಲೂ ಅಂಥದೇ ಒಂದು ಕಿತ್ತಾಟ ಜೆಡಿಎಸ್‌ ಹಾಗೂ ಜೆಡಿಯು ಮಧ್ಯೆ ನಡೆದಿದೆ. ಗಮನಾರ್ಹ ಸಂಗತಿ ಎಂದರೆ ಮೂಲದಲ್ಲಿ ಈ ಕಟ್ಟಡ ಕೂಡ ಕಾಂಗ್ರೆಸ್‌ಗೆ ಸೇರಿತ್ತು!

Advertisement

ಇಲ್ಲಿನ ಲ್ಯಾಮಿಂಗ್ಟನ್‌ ರಸ್ತೆಯಲ್ಲಿರುವ ಸಿಟಿ ಸರ್ವೆ ನಂಬರ್‌ 4628ರ ಸುಮಾರು 1080 ಚದರ ಯಾರ್ಡ್‌ ವಿಸ್ತೀರ್ಣದ ಜಾಗದಲ್ಲಿ ಪ್ರಸ್ತುತ ಸಂಯುಕ್ತ ಜನತಾದಳ(ಜೆಡಿಯು) ಸುಪರ್ದಿಯಲ್ಲಿದೆ. ಇದರಲ್ಲಿ ತಮ್ಮದೂ ಪಾಲು ಇದೆ. ಈ ಹಿಂದೆ ಇದು ನಮ್ಮ ಪಕ್ಷಕ್ಕೆ ಸೇರಿದ ಕಚೇರಿ ಆಗಿತ್ತು ಎಂದು ಜಾತ್ಯತೀತ ಜನತಾದಳ(ಜೆಡಿಎಸ್‌)ದವರು ಕಚೇರಿಗೆ ಆಗಮಿಸಿ, ತಮ್ಮ ಪಕ್ಷದ ನಾಮಫ‌ಲಕ, ಬಾವುಟ ಹಾಕಿ ಪ್ರತಿಭಟಿಸಿದ್ದಾರೆ. ಕಟ್ಟಡದಿಂದ ಪಾಲಿಕೆಗೆ ಪಾವತಿಸಬೇಕಾದ ಆಸ್ತಿಕರ ಸುಮಾರು 15,87,655 ರೂ. ಇದ್ದು, ಬಾಕಿ ಪಾವತಿಸುವಂತೆ ಪಾಲಿಕೆಯವರು ಜೆಡಿಯು ಹಾಗೂ ಜೆಡಿಎಸ್‌ ಮಹಾನಗರ ಜಿಲ್ಲಾಧ್ಯಕ್ಷರಿಗೆ ನೋಟಿಸ್‌ ಜಾರಿ ಮಾಡಿರುವುದೇ ಇದೀಗ ಹೊಸ ವಿವಾದ ಹುಟ್ಟು ಹಾಕುವಂತೆ ಮಾಡಿದೆ. ಅಲ್ಲದೆ ತಮಗೂ ಪಾಲು ನೀಡಿ ಎಂಬ ಜೆಡಿಎಸ್‌ ಮನವಿಗೆ ಜೆಡಿಯುನವರು ಒಪ್ಪದಿರುವುದು ಜೆಡಿಎಸ್‌ನ ಅಸಮಾಧಾನಕ್ಕೆ ಕಾರಣವಾಗಿದೆ.

ಮೂಲತಃ ಕಾಂಗ್ರೆಸ್‌ ಕಚೇರಿ: ಇಲ್ಲಿನ ಲ್ಯಾಮಿಂಗ್ಟನ್‌ ರಸ್ತೆಯಲ್ಲಿರುವ ಪ್ರಸ್ತುತ ಜೆಡಿಯು ಕಚೇರಿಯಾಗಿರುವ ಕಟ್ಟಡ, ಮೂಲತಃ ಕಾಂಗ್ರೆಸ್‌ ಪಕ್ಷದ ಕಚೇರಿಯಾಗಿತ್ತು. ಕಾಂಗ್ರೆಸ್‌ ಇಬ್ಭಾಗವಾಗಿ ಇಂದಿರಾ ಕಾಂಗ್ರೆಸ್‌ ಹಾಗೂ ಸಂಸ್ಥಾ ಕಾಂಗ್ರೆಸ್‌ ಆಗಿದ್ದಾಗ ಈ ಭಾಗದಲ್ಲಿ ಪ್ರಾಬಲ್ಯ ಪಡೆದಿದ್ದ ಸಂಸ್ಥಾ ಕಾಂಗ್ರೆಸ್‌ನವರು ಕಚೇರಿಯನ್ನು ತಮ್ಮ ಸುಪರ್ದಿಗೆ ಪಡೆದಿದ್ದರು. ಮುಂದೆ ಸಂಸ್ಥಾ ಕಾಂಗ್ರೆಸ್‌ನ ಬಹುತೇಕರು ಜನತಾ ಪರಿವಾರಕ್ಕೆ ಸೇರಿದ್ದರಿಂದ ಈ ಕಚೇರಿ ಜನತಾ ಪರಿವಾರದ ಕಚೇರಿಯಾಗಿ ಮಾರ್ಪಟ್ಟಿತ್ತು. ಜನತಾ ಪರಿವಾರ ಇಬ್ಭಾಗವಾಗಿ ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳ ಎಂದು ಇಬ್ಭಾಗವಾದಾಗ ಸಂಯುಕ್ತ ಜನತಾದಳದ ನಾಯಕರು ಕಚೇರಿಯನ್ನು ತಮ್ಮ ಸುಪರ್ದಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಸಂಯುಕ್ತ ಜನತಾದಳದಲ್ಲೇ ಇದ್ದ ಅನೇಕ ನಾಯಕರು ಬಿಜೆಪಿ ಸೇರಿದ್ದರು. 2008ರಲ್ಲಿ ಜನತಾ ಪರಿವಾರದಿಂದ ಬಿಜೆಪಿಗೆ ಹೋಗಿದ್ದ ಹಲವರು ಈ ಕಚೇರಿ ಬಿಜೆಪಿಗೆ ಬಿಟ್ಟುಕೊಡಬೇಕೆಂದು ಒತ್ತಾಯ ಮಾಡಿ ಕಚೇರಿ ಸ್ವಾಧೀನಕ್ಕೆ ಮುಂದಾಗಿದ್ದರಾದರೂ, ಜನತಾ ಪರಿವಾರ ನಾಯಕರು ಅದನ್ನು ಬಿಟ್ಟು ಕೊಡದೆ ತಮ್ಮಲ್ಲಿಯೇ ಉಳಿಸಿಕೊಂಡಿದ್ದರು. ಇಲ್ಲಿಯವರೆಗೂ ಅದು ಜೆಡಿಯು ಸುಪರ್ದಿಯಲ್ಲಿಯೇ ಇದೆ.

2002-03ರಿಂದ ಕರಬಾಕಿ: ಜೆಡಿಯು ಕಚೇರಿ ಇರುವ ಕಟ್ಟಡದ ಆಸ್ತಿಕರ ಬಾಕಿ ಸುಮಾರು 15.87ಲಕ್ಷ ರೂ. ಇದ್ದು, ಅದರ ಪಾವತಿ ಕುರಿತಾಗಿ ಪಾಲಿಕೆಯವರು ಜೆಡಿಯು ಹಾಗೂ ಜೆಡಿಎಸ್‌ ಮಹಾನಗರ ಜಿಲ್ಲಾಧ್ಯಕ್ಷರಿಗೆ ನೋಟಿಸ್‌ ನೀಡಿರುವುದು ಎರಡೂ ಪಕ್ಷಗಳ ನಡುವೆ ಹೊಸ ವಿವಾದ ಸೃಷ್ಟಿಸಿದೆ. ಪಾಲಿಕೆಗೆ 2002-03ರಿಂದ ಈ ಕಟ್ಟಡದ ಆಸ್ತಿಕರ ಬಾಕಿ ಉಳಿಯುತ್ತಲೇ ಬಂದಿದ್ದು, ನಡುವೆ ಅಲ್ಪಸ್ವಲ್ಪ ಹಣ ಪಾವತಿ ಮಾಡಲಾಗಿದ್ದರೂ ಕರ ಬಾಕಿ, ಬಡ್ಡಿ ಹಾಗೂ ದಂಡ ಹೀಗೆ ಸೇರಿ ಅದರ ಬಾಕಿ ಮೊತ್ತ 15 ಲಕ್ಷ ರೂ. ದಾಟಿದೆ. 2002-03ರಲ್ಲಿ ಕಚೇರಿ ಕಟ್ಟಡ ಬಾಕಿ 21,750ರೂ. ಇತ್ತು. ಅನಂತರದಲ್ಲಿ ಅದಕ್ಕೆ ಮಾಸಿಕ ಶೇ.2ರಷ್ಟು ಬಡ್ಡಿ, ದಂಡ ಸೇರಿ ಇದೀಗ ಅದು 15 ಲಕ್ಷ ರೂ.ಗೆ ಬಂದು ನಿಂತಿದೆ. ಅಲ್ಪಸ್ವಲ್ಪ ಎಂದು ಇದುವರೆಗೆ ಒಟ್ಟಾರೆ 1.20 ಲಕ್ಷ ರೂ.ನಷ್ಟು ಆಸ್ತಿಕರ ಪಾವತಿ ಮಾಡಲಾಗಿದೆ ಎಂಬುದು ಪಾಲಿಕೆ ಕಂದಾಯ  ಭಾಗದ ಅಧಿಕಾರಿಗಳ ಅನಿಸಿಕೆ.

Advertisement

ಇದರ ನಡುವೆ ಜೆಡಿಎಸ್‌ನವರು ಜೆಡಿಯು ಮುಖಂಡರನ್ನು ಭೇಟಿ ಮಾಡಿ, ಆಸ್ತಿ ನೋಂದಣಿ ದಾಖಲೆಯಲ್ಲಿ ಕಚೇರಿ ಕಟ್ಟಡ ಜನತಾ ದಳಕ್ಕೆ ಸೇರಿದ್ದು ಎಂದಿದ್ದು, ಅದರಲ್ಲಿ ಜೆಡಿಯು ಎಂದು ಇಲ್ಲ. ನಮಗೂ ಅರ್ಧ ಜಾಗ ನೀಡಿ, ಆಸ್ತಿ ಕರ ಬಾಕಿ ಬೇಕಾದರ ಪಾವತಿ ಮಾಡುತ್ತೇವೆ ಎಂದು ಮನವಿ ಮಾಡಿದ್ದು, ಇದಕ್ಕೆ ಜೆಡಿಯು ಮುಖಂಡರು ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ. ಕಚೇರಿಯಲ್ಲಿ ತಮಗೂ ಪಾಲಿದೆ ಎಂದು ಜೆಡಿಎಸ್‌ ಯುವ ಘಟಕದವರು ಜೆಡಿಯು ಕಚೇರಿಗೆ ನುಗ್ಗಿ ಪಕ್ಷದ ಬ್ಯಾನರ್‌, ಬಾವುಟ ಕಟ್ಟಿದ್ದರಾದರೂ, ಗಣೇಶ ಹಬ್ಬದ ನಂತರ ಎರಡೂ ಕಡೆಯವರು ಸೇರಿ ಚರ್ಚಿಸಿ ಇತ್ಯರ್ಥ ಪಡಿಸಿಕೊಳ್ಳೋಣ ಎಂದು ನಿರ್ಧರಿಸಲಾಗಿದೆ.

ಕಚೇರಿ ನಮ್ಮ ಸುಪರ್ದಿಯಲ್ಲಿದ್ದು, 2008ರಲ್ಲಿ ಬಿಜೆಪಿಯವರು ಕಚೇರಿ ಸುಪರ್ದಿಗೆ ಬಂದಾಗಲೂ ಆದನ್ನು ತಡೆದು ಉಳಿಸಿಕೊಂಡಿದ್ದೇವೆ. ಆಸ್ತಿ ಕರ ಬಾಕಿ ಕುರಿತು ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ. ಕರ ಪಾವತಿಗೆ ಅವಕಾಶ ನೀಡಿ, ರಿಯಾಯ್ತಿ ನೀಡಿ ಎಂದು ಕೇಳಿದ್ದೇವೆ. ಅಲ್ಲದೆ 2009ರಿಂದ ಮಾಸಿಕ 5 ಸಾವಿರ ರೂ.ಗಳ ಹಣ ಪಾವತಿ ಮಾಡುತ್ತ ಬಂದಿದ್ದೇವೆ. ಇದೀಗ ಇದ್ದಕ್ಕಿದ್ದಂತೆ ಜೆಡಿಎಸ್‌ನವರು ಕಚೇರಿಯಲ್ಲಿ ನಮಗೆ ಪಾಲು ಇದೆ ಎಂದು ಬಂದಿರುವುದು ಸರಿಯಲ್ಲ. ಇದರ ಹಿಂದೆ ಕಾಣದ ಕೈಗಳ ಕೈವಾಡದ ಶಂಕೆ ಇದೆ.
. ಶ್ರೀಶೈಲಗೌಡ ಕಮತರ, ಮಹಾನಗರ ಜಿಲ್ಲಾಧ್ಯಕ್ಷ ಜೆಡಿಯು

ಕಚೇರಿ ಕಟ್ಟಡ ಆಸ್ತಿ ನೋಂದಣಿ ದಾಖಲೆಯಲ್ಲಿ ಜನತಾದಳ ಎಂದಿದೆ ವಿನಃ ಜೆಡಿಯು ಎಂದಿಲ್ಲ. ನಮಗೂ ಸ್ವಂತ ಕಟ್ಟಡ ಇಲ್ಲ. ಕಚೇರಿ ಜಾಗದಲ್ಲಿ ನಮಗೂ ಅರ್ಧ ಭಾಗ ನೀಡಿ, ಕಟ್ಟಡ ಕಟ್ಟಿಕೊಳ್ಳುತ್ತೇವೆ, ಆಸ್ತಿಕರ ಬಾಕಿ ಪಾವತಿಸುತ್ತೇವೆ ಎಂದು ಮನವಿ ಮಾಡಿದರೂ ಜೆಡಿಯು ಮುಖಂಡರು ಸ್ಪಂದಿಸಿಲ್ಲ. ಆಸ್ತಿ ಕರ ಬಾಕಿ ನೋಟಿಸ್‌ ನಮಗೂ ಬಂದಿದೆ. ಸೆ.30ರೊಳಗೆ ವಿವಾದ ಇತ್ಯರ್ಥ ಪಡಿಸಿಕೊಳ್ಳುತ್ತೇವೆ. 
. ರಾಜಣ್ಣಾ ಕೊರವಿ,
  ಮಹಾನಗರ ಜಿಲ್ಲಾಧ್ಯಕ್ಷ ಜೆಡಿಎಸ್‌

ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next