Advertisement

ಕೊಡವ, ಹಾಲಕ್ಕಿ , ಸೋಲಿಗ ಮಹಿಳೆಯರ ಸಾಂಪ್ರದಾಯಿಕ ಉಡುಗೆ

07:13 PM Nov 14, 2019 | mahesh |

ಬೆಡಗಿನ ನಾಡು ಕೊಡಗಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆ- ಸೀರೆ. ಕೊಡಗಿನ ಮಹಿಳೆಯರು ಉಡುವ ಸೀರೆಯ ವಿಧಾನ ವಿಶಿಷ್ಟವಾಗಿದೆ.

Advertisement

ಕೊಡಗಿನ ಮಹಿಳೆಯರ ಈ ಸೀರೆ ತೊಡುವ ಸಂಪ್ರದಾಯ ಅಗಸ್ತ್ಯ ಮಹರ್ಷಿ ಹಾಗೂ ಋಷಿಪತ್ನಿ ಕಾವೇರಿ, ನದಿಯಾಗಿ ಹರಿಯುವ ಕಥೆಯೊಂದಿಗೆ ಮೇಳೈಸಿಕೊಂಡಿದೆ. ಅಂತೆಯೇ ಬೆಟ್ಟಗುಡ್ಡಗಳಿಂದ ಒಡಗೂಡಿರುವ ಈ ಪ್ರದೇಶದಲ್ಲಿ ಈ ಸಾಂಪ್ರದಾಯಿಕ ವಿಧಾನದಲ್ಲಿ ಉಡುವ ಸೀರೆ ಆರಾಮದಾಯಕವೂ ಆಗಿದೆ. ಸೀರೆ, ಕುಪ್ಪಸ ಹಾಗೂ ತಲೆಯ ಮೇಲೆ ಧರಿಸುವ ವಸ್ತ್ರ ಇವುಗಳೊಂದಿಗೆ ವಿಶೇಷ ಪಾದರಕ್ಷೆ (ಶೂ) ಹಾಗೂ ಪಾದಕವಚ (ಸಾಕ್ಸ್‌) ಕೂಡ ಸಾಂಪ್ರದಾಯಕ ಉಡುಗೆಗೆ ಮೆರುಗು ನೀಡುತ್ತವೆ.

ಮುಖ್ಯವಾಗಿ ವಧುವಿನ ಸಾಂಪ್ರದಾಯಿಕ ಉಡುಗೆಯಲ್ಲಿ ಕೆಂಪು ಬಣ್ಣದ ಸೀರೆಗಳಿಗೆ ಪ್ರಾಧಾನ್ಯ ಹೆಚ್ಚು. ಸೀರೆಯೊಂದಿಗೆ, ಕುಪ್ಪಸ ಹಾಗೂ ಶಿರೋವಸ್ತ್ರವೂ ಅದೇ ರಂಗಿನಿಂದ ಕೂಡಿರುವುದೇ ಹೆಚ್ಚು. ಆರಂಭದಲ್ಲಿ ಹತ್ತಿಯ ಸೀರೆಗಳಿಗೆ ಪ್ರಾಧಾನ್ಯವಿದ್ದರೂ ಇಂದು ರೇಶಿಮೆ ಸೀರೆಯೊಂದಿಗೆ ವೈವಿಧ್ಯಮಯ ವಸ್ತ್ರ ಸಂಯೋಜನೆಯೊಂದಿಗೆ ಸೀರೆಗಳು ಜನಪ್ರಿಯವಾಗಿವೆ. ಹಾಲಕ್ಕಿ ವಕ್ಕಲಿಗರು ಹಾಗೂ ಸಿದ್ಧಿ ಜನಾಂಗದವರು ಉತ್ತರಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ವಾಸವಾಗಿರುವ 400 ವರ್ಷಕ್ಕೂ ಮೀರಿದ ಸಾಂಪ್ರದಾಯಿಕ ಬದುಕಿನ ಹಿನ್ನೆಲೆ ಉಳ್ಳವರು.

ಹಾಲಕ್ಕಿ ಜನಾಂಗದವರು ಆಫ್ರಿಕಾದ ಮಾಸೈಮಾರಾ ಜನಾಂಗದ ಜನತೆ ಹಾಗೂ ಜನಜೀವನದ ಹಿನ್ನೆಲೆ ಹೊಂದಿದ್ದಾರೆ. ಉತ್ತರ ಕನ್ನಡದ ಪಶ್ಚಿಮ ಘಟ್ಟದ ತಪ್ಪಲಲ್ಲಿ ಅಲ್ಲಲ್ಲಿ ವಾಸಿಸುವ ಹಾಲಕ್ಕಿ ಮಹಿಳೆಯರು ಸಾಂಪ್ರದಾಯಿಕವಾಗಿ ಉಡುವ ತೊಡುಗೆ ತುಂಬ ಸರಳ. ಆದರೆ ಬಹಳವೇ ವಿಶಿಷ್ಟ. ಸರಾಂಗವನ್ನು ಹೋಲುವಂತೆ ಸೀರೆಯನ್ನು ಮೈಯ ಸುತ್ತ ಸುತ್ತುತ್ತಾರೆ. ಕುಪ್ಪಸವಿಲ್ಲದಿದ್ದರೂ ಸೀರೆಯನ್ನೇ ಸುತ್ತಿ ಕೊರಳಿನಿಂದ ಬೆನ್ನಿನವರೆಗೆ ಸೆರಗು ಆವರಿಸುವಂತೆ ಬಳಸಿ ಬಲಬದಿಯಲ್ಲಿ ಸೀರೆಗೆ ಗಂಟು ಹಾಕುತ್ತಾರೆ. ಅವರು ಮಾಡುವ ಅಧಿಕ ಕಷ್ಟದ ಕೆಲಸಗಳಿಗೆ, ಅವರು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಅವರ ಈ ವಿಶಿಷ್ಟ ಬಗೆಯ ಸೀರೆಯ ವಿನ್ಯಾಸ ಸಾಂಪ್ರದಾಯಿಕವಾಗಿ ಮಹತ್ವ ಪಡೆದುಕೊಂಡಿದೆ.

ಸರಳ ಜೀವನಕ್ಕೆ ಒಡ್ಡಿಕೊಂಡಿರುವ ಈ ಮಹಿಳೆಯರು ಸೀರೆಗೆ ತಕ್ಕಂತೆ ವಿಶಿಷ್ಟ ಆಭರಣ ಧರಿಸುತ್ತಾರೆ. ಕುತ್ತಿಗೆಯ ಸುತ್ತ ಹಲವು ಮಣಿಗಳ ಹಾರಗಳನ್ನು ಧರಿಸುತ್ತಾರೆ. ಅದು ತುಂಬಾ ಭಾರವಿರುವುದು, ಆಕರ್ಷಕವಾಗಿರುವುದು ಹಾಗೂ ಉದ್ದವಾಗಿರುವುದು ವಿಶಿಷ್ಟ. ಇಂದು ಇಂತಹ ಮಣಿಗಳನ್ನು ಮತ್ತು ಹಾರಗಳನ್ನು ಹಾಲಕ್ಕಿ ಸಾಂಪ್ರದಾಯಿಕ ಆಧುನಿಕ ಮಹಿಳೆಯರು ಬದಲಾದ ತಮ್ಮ ದಿರಿಸಿನೊಂದಿಗೂ ಧರಿಸುತ್ತಾರೆ. ಬಲ ತೋಳಿಗೆ ಅಧಿಕ ದಪ್ಪವಾಗಿರುವ ವಿಶೇಷ ಮೆಟಲ್‌ನಿಂದ ಮಾಡಿರುವ ಬಾಜೂಬಂಧ (ತೋಳಿನ ಆಭರಣ) ಧರಿಸುತ್ತಾರೆ. ಕಾಡಿನಲ್ಲಿ ದೊರೆವ ಅರಣ್ಯ ಉತ್ಪತ್ತಿ ಹಾಗೂ ತಪ್ಪಲು ಪ್ರದೇಶದಲ್ಲಿ ಕೃಷಿಯ ಜೀವನದಲ್ಲಿ ಭಾಗಿಯಾಗುವ ಈ ಮಹಿಳೆಯರು ತಮ್ಮದೇ ಶೈಲಿಯ ಹಾಲಕ್ಕಿ ಹಾಡುಗಳಿಂದಲೂ ಜನಪ್ರಿಯ. ಈ ಉಡುಗೆಗೆ ಮೆರುಗು ನೀಡುವಂತೆ ಭಾರವಾದ ಮೂಗಿನ ನತ್ತು ಹಾಗೂ ಕಿವಿಯ ಆಭರಣಗಳಿವೆ!

Advertisement

ಹೀಗೆ, ಹಾಲಕ್ಕಿ ಮಹಿಳೆಯರ ಉಡುಗೆ-ತೊಡುಗೆಯು ವಿಶಿಷ್ಟ ಸಂಸ್ಕೃತಿಯ ದ್ಯೋತಕವಾಗಿದೆ. ಇಂದಿನ ಕಾಲದಲ್ಲಿ ಸಾಂಪ್ರದಾಯಿಕ ಉಡುಗೆಗಳೂ ಮರೆಯಾಗುತ್ತಿರುವುದು ಹಾಲಕ್ಕಿ ಹಿರಿಯ ಮಹಿಳೆಯರಿಗೆ ಬೇಸರದ ಸಂಗತಿ ಮಾತ್ರವಲ್ಲ ಈ ಜನಾಂಗವೇ ವೇಗವಾಗಿ ನಶಿಸುತ್ತಿರುವುದು ಸಾಮಾಜಿಕವಾಗಿಯೂ ಸೊರಗುತ್ತಿರುವುದೂ ಬೇಸರದ ಸಂಗತಿ. ಒಂದೊಂದು ಜನಾಂಗದ ಜೀವನ ಶೈಲಿಯ ಪರಿಪೂರ್ಣತೆಯನ್ನು ಸಾಂಸ್ಕೃತಿಕ ಸಿರಿವಂತಿಕೆಯನ್ನು ಅರಿಯಲು ಉಡುಗೆ-ತೊಡುಗೆ ಬಲು ಮುಖ್ಯ ಎಂಬುದು ಹಾಲಕ್ಕಿ ಸಾಂಪ್ರದಾಯಿಕ ಉಡುಗೆಯ ಅಧ್ಯಯನದಿಂದ ದಿಟವಾಗಿದೆ.

ಸೋಲಿಗ ಹಾಗೂ ಸಿದ್ಧಿ ಜನಾಂಗದ ಮಹಿಳೆಯರೂ ಪಾರಂಪರಿಕ ಉಡುಗೆಯ ಸಿರಿತನ ಹಾಗೂ ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿದ್ದಾರೆ. ಕರ್ನಾಟಕದ ಬಿಳಿಗಿರಿರಂಗನ ಬೆಟ್ಟದ ಪ್ರದೇಶದಲ್ಲಿ ಹಾಗೂ ಚಾಮರಾಜ ನಗರದ ಜಿಲ್ಲಾ ಪ್ರದೇಶದಲ್ಲಿ ಬರುವ ಮಲೆಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ಈ ಮಹಿಳೆಯರು ವಾಸಿಸುತ್ತಾರೆ.

ಸೋಲಿಗ ಮಹಿಳೆಯರು ಸರಳ ಸೀರೆಯನ್ನೇ ಸಾಂಪ್ರದಾಯಿಕ ರೀತಿಯಲ್ಲಿ ಉಡುತ್ತಾರೆ. ಅವರು ತಮ್ಮದೇ ಆದ ವಿಶಿಷ್ಟ ಹಾಡು ಹಾಗೂ ನೃತ್ಯಗಳಿಗೆ ಪ್ರಸಿದ್ಧ. ಅಂತೆಯೆ ಕಾಡಿನಲ್ಲಿ ವಾಸಿಸುವ ಅಳಿಯುತ್ತಿರುವ ಈ ಜನಾಂಗದ ಮಹಿಳೆಯರು ಸಾಂಪ್ರದಾಯಿಕವಾಗಿ ಹಲವು ಮೂಲಿಕೆಗಳ ಉಪಯೋಗ, ಮರಮಟ್ಟುಗಳ ಕುರಿತಾದ ಜ್ಞಾನವನ್ನೂ ಹೊಂದಿದ್ದಾರೆ.

ಸರಳ ಜೀವನ ನಡೆಸುವ ಸಿದ್ಧಿ ಜನಾಂಗದ ಮಹಿಳೆಯರು ಸರಳ ಸೀರೆಯನ್ನು ತೊಟ್ಟು ಸೆರಗನ್ನೂ ತಲೆಯ ಮೇಲೂ ಹೊದ್ದುಕೊಳ್ಳುತ್ತಾರೆ. ಈ ಜನಾಂಗದ ಮಹಿಳೆಯರು ಸಾಂಪ್ರದಾಯಿಕ ನೃತ್ಯ ಹಾಗೂ ಹಾಡುಗಳಿಂದಾಗಿ ಜನಪ್ರಿಯವಾಗಿದ್ದಾರೆ. ನೃತ್ಯದ ಸಮಯದಲ್ಲಿ ಉಡುವ ದಿರಿಸುಗಳೂ ಸಾಂಪ್ರದಾಯಿಕವಾಗಿದ್ದು ನಿತ್ಯದ ಉಡುಗೆಯಿಂದ ಭಿನ್ನ ಹಾಗೂ ವಿಶೇಷವಾಗಿರುತ್ತದೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next