ಪ್ರವಾಹದಿಂದಾಗಿ ಕೊಡಗು ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಇಡೀ ಕೊಡಗು ಮಂದಿ ಅಕ್ಷರಶಃ ಬೀದಿಗೆ ಬಂದಿದ್ದಾರೆ. ರಾಜ್ಯದೆಲ್ಲೆಡೆ ಸಂತ್ರಸ್ಥರ ನೆರವಿಗೆ ಸಹಾಯ ಹರಿದುಬರುತ್ತಿದೆ. ಈಗಾಗಲೇ ಚಿತ್ರರಂಗದ ಅನೇಕ ನಟ-ನಟಿಯರು ತೊಂದರೆಗೆ ಒಳಗಾಗಿರುವ ಜನರ ಸಹಾಯಕ್ಕೆ ನಿಂತಿದ್ದಾರೆ. ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಂತ್ರಸ್ಥರ ನೆರವಿಗೆ ನಿಂತಿದೆ.
ಚಿತ್ರೋದ್ಯಮದ ಪರವಾಗಿ ಸಿಎಂ ಪರಿಹಾರ ನಿಧಿಗೆ 20 ಲಕ್ಷ ರೂ. ದೇಣಿಗೆ ನೀಡಲು ತೀರ್ಮಾನಿಸಿದೆ. ಅತ್ತ ಕೇರಳದಲ್ಲೂ ಪ್ರವಾಹ ಹೆಚ್ಚಾಗಿ ಬದುಕು ಕಳೆದುಕೊಂಡಿರುವ ಜನರಿಗೆ ನೆರವಾಗಿ, 5 ಲಕ್ಷ ರೂ. ದೇಣಿಗೆ ನೀಡುತ್ತಿದೆ. ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ತೊಂದರೆಗೊಳಪಟ್ಟಿರುವ ಸಂತ್ರಸ್ಥರ ನೆರವಿಗೆ ಧಾವಿಸಲು ತೀರ್ಮಾನಿಸಲಾಗಿದೆ.
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, “ಪ್ರವಾಹ ಹೆಚ್ಚಾಗಿರುವುದರಿಂದ ಕೊಡಗು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ತೊಂದರೆಗೆ ಸಿಲುಕಿರುವ ಜನರ ಕಷ್ಟಕ್ಕೆ ನೆರವಾಗಲು ಮಂಡಳಿ ನಿರ್ಧರಿಸಿ, ಚಿತ್ರೋದ್ಯಮದ ಪರವಾಗಿ ಸಿಎಂ ಪರಿಹಾರ ನಿಧಿಗೆ 20 ಲಕ್ಷ ರೂ. ದೇಣಿಗೆ ನೀಡಲು ತೀರ್ಮಾನಿಸಲಾಗಿದೆ. ಕೇರಳ ಸಂತ್ರಸ್ಥರಿಗೂ 5 ಲಕ್ಷ ದೇಣಿಗೆ ನೀಡುತ್ತಿದ್ದೇವೆ.
ಇನ್ನು ಮುಂದಿನ ದಿನಗಳಲ್ಲಿ ಚಿತ್ರೋದ್ಯಮದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುವ ಬಗ್ಗೆ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ದೊಡ್ಡದ್ದಾಗಿ ಏನು ಮಾಡಬಹುದು ಎಂಬ ಕುರಿತು ಇನ್ನು ಮೂರ್‍ನಾಲ್ಕು ದಿನಗಳಲ್ಲಿ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಈ ಹಿಂದೆಯೂ ಚಿತ್ರರಂಗ ಇಂತಹ ತೊಂದರೆಗೆ ಒಳಪಟ್ಟ ಜನರ ನೆರವಿಗೆ ಧಾವಿಸಿತ್ತು.
ಡಾ.ರಾಜಕುಮಾರ್ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ದೇಣಿಗೆ ಸಂಗ್ರಹಿಸಲಾಗಿತ್ತು. ಈ ಬಗ್ಗೆ ಈಗಾಗಲೇ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರ ಜೊತೆ ಮಾತುಕತೆ ನಡೆಸಿದ್ದೇವೆ. ಅವರ ನೇತೃತ್ವದಲ್ಲಿ ಏನು ಮಾಡಬೇಕೆಂಬುದನ್ನು ಸದ್ಯದಲ್ಲೇ ತೀರ್ಮಾನಿಸಲಾಗುವುದು’ ಎನ್ನುತ್ತಾರೆ ಚಿನ್ನೇಗೌಡ. ಸದ್ಯದಲ್ಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಕೊಡುವ ಕುರಿತು ಹೇಳಿದ ಅವರು, “ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭೇಟಿಗೆ ಸಮಯ ಕೇಳಿದ್ದೇವೆ.
ಅವರು ಭೇಟಿಗೆ ಅವಕಾಶ ಮಾಡಿಕೊಟ್ಟ ದಿನ ಮಂಡಳಿಯ ಪದಾಧಿಕಾರಿಗಳೊಂದಿಗೆ ತೆರಳಿ, ಚೆಕ್ ನೀಡಲಾಗುವುದು. ಈಗಾಗಲೇ ಚಿತ್ರರಂಗದ ಅನೇಕ ನಟ, ನಟಿಯರು ಸಂತ್ರಸ್ಥರ ನೆರವಿಗೆ ಧಾವಿಸಿದ್ದಾರೆ. ಅವರ ಬದುಕನ್ನು ಪುನಃ ಕಟ್ಟಿಕೊಡುವ ಸಣ್ಣ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಚಿನ್ನೇಗೌಡರು ಮನವಿ ಮಾಡಿದ್ದಾರೆ.