Advertisement

ಇತರೆ ಇಲಾಖೆ ಜೊತೆ ಸಮನ್ವಯ ಅಗತ್ಯ

06:35 PM Oct 25, 2020 | Suhan S |

ವಿಜಯಪುರ: ಅಲ್ಪಸಂಖ್ಯಾತ ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಕಡ್ಡಾಯವಾಗಿ ಶೇ. 15ರಷ್ಟು ಅನುದಾನದ ಯೋಜನೆ ರೂಪಿಸಿದೆ. ಹೀಗಾಗಿ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಅಲ್ಪಸಂಖ್ಯಾತರ ಸಮುದಾಯದ ಜನರು ಮುಖ್ಯವಾಹಿನಿಗೆ ಬರಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಜಾರಿಗೆ ತರುವುದು, ಅನುಷ್ಠಾನ ಮಾಡುವುದು ಇಂದಿನ ಅಗತ್ಯವಾಗಿದೆ. ಸರ್ಕಾರದ ಸೌಲಭ್ಯಗಳು ಅರ್ಹರನ್ನು ತಲುಪಿದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಯೂ ಸಾಧ್ಯ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಅನುಪಾತ ಪಾಲಿಸುವಂತೆ ಸೂಚಿಸಿದರು.

ಅದರಂತೆ ಅಲ್ಪಸಂಖ್ಯಾತರ ಸಮುದಾಯದವರಿಗೆ ಸರ್ಕಾರದ ವಿವಿಧ ಯೋಜನೆಗಳ ಅರಿವು ಅಗತ್ಯವಾಗಿದ್ದು, ಅಂತಹ ಯೋಜನೆಗಳಬಗ್ಗೆ ಸಮುದಾಯದವರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾಅಲ್ಪಸಂಖ್ಯಾತರ ಇಲಾಖೆಯು ಇತರ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅವರು ತಿಳಿಸಿದರು.

ನೋಡಲ್‌ ಅಧಿಕಾರಿ ಸುರೇಶ್‌ ಕೋಕರೆ, ಎಲ್ಲ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ರೈತರ ಬೆಳೆ ಹಾನಿಗೆ ಶೀಘ್ರ ಪರಿಹಾರ ನೀಡಲು ಒತ್ತಾಯ :

Advertisement

ತಾಳಿಕೋಟೆ: ದೇವರ ಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಭಾಗದಲ್ಲಿ ಮಳೆ ಹಾಗೂ ಕಳಪೆಮಟ್ಟದ ಕಾಲುವೆ ನಿರ್ಮಾಣದಿಂದ ನೂರಾರು ಎಕರೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಈ ವಿಷಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್‌ ಮುಖಂಡ ರಾಜುಗೌಡಪಾಟೀಲ ಆರೋಪಿಸಿದ್ದಾರೆ.

ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ತುರ್ತುಗತಿಯಲ್ಲಿ ಪರಿಹಾರ ಒದಗಿಸುವಂತಹ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಕಲಕೇರಿ ಗ್ರಾಮವು ಈ ಮೊದಲೇ ಹೋಬಳಿ ಕೇಂದ್ರವಾಗಿ ರಚನೆಯಾಗಿತ್ತು. ಅದನ್ನು ರಾಜಕೀಯ ಹಿತಾಶಕ್ತಿಗೋಸ್ಕರ ತೆಗೆದುಹಾಕಲಾಗಿದೆ. ಕಲಕೇರಿ ಗ್ರಾಮದಲ್ಲಿ ಪೊಲೀಸ್‌ ಠಾಣೆಯಿದೆ. ರೈತ ಸಂಪರ್ಕ ಕೇಂದ್ರ ಹಾಗೂ ನಾಡಕಚೇರಿಯೂ ಈ ಮೊದಲು ಇತ್ತು. ಹೋಬಳಿ ತೆಗೆದು ಹಾಕಿದ್ದರ ಪರಿಣಾಮ ನಾಡಕಚೇರಿಯೂ ಹೋಗಿದೆ. ಕಲಕೇರಿ ತಾಲೂಕು ಕೇಂದ್ರವಾಗಬೇಕೆಂಬುದು ಮೊದಲಿನಿಂದಲೂ ಅಲ್ಲಿಯ ಜನರು ಹೋರಾಟ ಮಾಡುತ್ತಾ ಬಂದಿದ್ದರು. ಆದರೆ ಇದ್ದ ಹೋಬಳಿ ಕೇಂದ್ರವನ್ನೂ ಕಿತ್ತುಹಾಕಿರುವುದರಿಂದ ಅಲ್ಲಿಯ ಜನರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ ಕೂಡಲೇ ಹೋಬಳಿ ಕೇಂದ್ರವನ್ನಾಗಿ ರಚನೆ ಮಾಡಬೇಕು. ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ ಪ್ರಾರಂಭಿಸಬೇಕು. ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಬೇಸತ್ತಿರುವ ಜನರು ಅ. 28ರಂದುಬೃಹತ್‌ ಹೋರಾಟ ಹಮ್ಮಿಕೊಂಡಿದ್ದಾರೆ. ಕಲಕೇರಿಯಿಂದ ತಾಳಿಕೋಟೆ ಪಟ್ಟಣದವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹೋರಾಟಕ್ಕೆ ಜೆಡಿಎಸ್‌ ಕಾರ್ಯಕರ್ತರು ಬೆಂಬಲ ಸೂಚಿಸಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next