ಆಳಂದ: ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಇಲಾಖೆ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಸಾಧಿಸುವುದು ಅವಶ್ಯಕವಾಗಿದೆ ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳ ಅನುಷ್ಠಾನಕ್ಕಾಗಿ ಕರೆದ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯವಿವಾಹ ತಡೆಗೆ ಒಂದೇ ಇಲಾಖೆ ಜವಾಬ್ದಾರಿಯಲ್ಲ. ಸಂಬಂಧಿತ ಎಲ್ಲ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದರಲ್ಲದೇ, ಮಕ್ಕಳ ಹಕ್ಕುಗಳ ಸಮಿತಿ ಪಂಚಾಯಿತಿ ಮಟ್ಟದಲ್ಲಿ ರಚಿಸಬೇಕು ಎಂದು ತಾಪಂ ಅಧಿಕಾರಿಗಳಿಗೆ ಸೂಚಿಸಿದರು.
ಆಕಸ್ಮಿಕವಾಗಿ ನಡೆಯುವ ಬಾಲ್ಯ ವಿವಾಹವಾದ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರೇ ವಯಸ್ಸಿನ ದೃಢೀಕರಣ ಪತ್ರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಾಬಾಯಿ ಅಕ್ಕಿ ಸಲಹೆ ನೀಡಿದರು.
ತಾಪಂ ಇಒ ಡಾ| ಸಂಜಯ ರೆಡ್ಡಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಅನುಷ್ಠಾನಕ್ಕೆ ಪೂರಕವಾಗುವಂತೆ ಮಕ್ಕಳ ಕಾವಲು ಸಮಿತಿ ರಚನೆ, ಮಕ್ಕಳ ಹಕ್ಕುಗಳ ಸಭೆ ನಡೆಸುವುದು ಹಾಗೂ ಶಾಲೆ ಮಟ್ಟದಲ್ಲಿ ಕ್ಲಬ್ ರಚನೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿ, ಸಮಸ್ಯೆ ಇತ್ಯರ್ಥಕ್ಕೆ ಆದೇಶಿಸಲಾಗುವುದು ಎಂದು ತಿಳಿಸಿದರು.
ಸಿಡಿಪಿಒ ಶಿವಮೂರ್ತಿ ಕುಂಬಾರ ಮಾತನಾಡಿ, ಪ್ರಧಾನಮಂತ್ರಿ ಮಾತೃ ವಂದನ ಯೋಜನೆ ಅಡಿಯಲ್ಲಿ ಯೋಜನೆ ಪ್ರಾರಂಭದಿಂದ 14051 ಫಲಾನುಭವಿಗಳು ಲಾಭ ಪಡೆದಿದ್ದಾರೆ ಎಂದರು. ಬಾಲಕಾರ್ಮಿಕ ತಡೆ ಜಾಗೃತಿ ಕುರಿತು ತಹಶೀಲ್ದಾರರು ಪೋಸ್ಟರ್ ಬಿಡುಗಡೆಗೊಳಿಸಿದರು.
ಸಮಾಜ ಕಲ್ಯಾಣಾಧಿಕಾರಿ ಮೋನಮ್ಮ ಸುತಾರ, ಕ್ಷೇತ್ರ ಪಿಆರ್‌ಇಡಿ ಸುಭಾಶ್ಚಂದ್ರ, ಪಿಎಸ್‌ಐ ತಿರುಮಲ್ಲೇಶ, ಸಂತೋಷ ಕುಲಕರ್ಣಿ, ಪುರಸಭೆ ವ್ಯವಸ್ಥಾಪಕ ಶಂಭುಲಿಂಕ ಕಿನ್ನೆ, ಸುರೇಖಾ, ಬೇಬಿನಂದಾ ಪಾಟೀಲ, ಮೇಲ್ವಿಚಾರಕಿ ಮೀನಾಕ್ಷಿ ಹಿರೇಮಠ, ಭಾಗೀರಥಿ ಯಲಶೆಟ್ಟಿ, ಕವಿತಾ ಮುಚ್ಚಳಂಬಿ, ನೇಹಾ ಜಾಗೀದಾರ್, ಮಹಾದೇವ ವಚ್ಚೇ, ಕಸ್ತೂರಬಾಯಿ ಮುನ್ನೋಳ್ಳಿ ಇದ್ದರು.