ಜೇವರ್ಗಿ: ದೇಶದ ವಿವಿಧೆಡೆ ನೋಡಿದಾಗ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆಹೆಚ್ಚಾಗುತ್ತಿದೆ. ಕಲಬುರಗಿ ಜಿಲ್ಲೆ ಹೆಚ್ಚು ಸೊಂಕಿತರನ್ನು ಹೊಂದುತ್ತಿದ್ದು, ಸೋಂಕು ನಿಯಂತ್ರಣಕ್ಕೆ ತರಲು ಜನರ ಸಹಕಾರ ಮುಖ್ಯವಾಗಿದೆ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ತಾಲೂಕಿನ ಯಾಳವಾರ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಆರಂಭಿಸಲಾದ ಕೋವಿಡ್ ಕೇರ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ಸೋಂಕಿತರ ಯೋಗಕ್ಷೇಮ ವಿಚಾರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಧರ್ಮಸಿಂಗ್ ಫೌಂಡೇಷನ್ ವತಿಯಿಂದ ಮಂಚ, ಗಾದಿ, ಬೆಡ್‌ಸಿಟ್, ಹೊದಿಕೆ ಸೇರಿದಂತೆ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪರಣಗಳು ಹಾಗೂ ಸಾಮಗ್ರಿಗಳನ್ನು ಪೂರೈಸಲಾಗಿದೆ. ಧರ್ಮಸಿಂಗ್ ಫೌಂಡೇಷನ್ ವತಿಯಿಂದಲೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಿಗೆ ಉಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಾವು ಒಬ್ಬ ವೈದ್ಯರಾಗಿ ಸಾಮಾಜಿಕ ಸೇವೆಗೆ ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಧರ್ಮಸಿಂಗ್ ಫೌಂಡೇಶನ್ ವತಿಯಿಂದ ಕೋವಿಡ್ ಕೇರ್ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಕ್ಷೇತ್ರದ ಜನತೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.
ಯಾಳವಾರ ಕೋವಿಡ್ ಕೇರ್ ಕೇಂದ್ರದಲ್ಲಿ 86 ಜನ ಸೋಂಕಿತರು ದಾಖಲಾಗಿದ್ದು, ಅದರಲ್ಲಿ ಈಗಾಗಲೆ 63 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 23 ಜನ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕೇಂದ್ರದಲ್ಲಿ ಮೂರು ಜನ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಸಿದರಾಯ ಭೋಸಗಿ, ತಾಲೂಕು ಆರೋಗ್ಯಾಧಿ ಕಾರಿ ಡಾ| ಸಿದ್ದು ಪಾಟೀಲ, ಮುಖಂಡರಾದ ಕಾಶಿರಾಯಗೌಡ ಯಲಗೋಡ, ನೀಲಕಂಠ ಅವಂಟಿ, ಸಲೀಂ ಕಣ್ಣಿ, ಪರಶುರಾಮ ಪಾಟೀಲ, ದಿನೇಶ ಠಾಕೂರ ಇದ್ದರು.