Advertisement

ಹೆದ್ದಾರಿ ಯೋಜನೆಗಳಲ್ಲಿ ಸಮನ್ವಯ ಸಾಧಿಸಿ: ಗಡ್ಕರಿ

09:24 PM Sep 08, 2022 | Team Udayavani |

ಬೆಂಗಳೂರು: ವಿವಿಧ ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳ ನಡುವೆ ಸಮನ್ವಯ, ಸಂವಹನ, ಸಹಕಾರ ಅತ್ಯಗತ್ಯವಾಗಿದೆ. ಅನಗತ್ಯ ವೆಚ್ಚ, ಶ್ರಮ ತಪ್ಪುತ್ತದೆ. ಸಮಯವೂ ಉಳಿತಾಯ ಆಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡ “ಮಂಥನ್‌’ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ಕರ್ನಾಟಕ ಅತಿಹೆಚ್ಚು ಎಥೆನಾಲ್‌ ಉತ್ಪಾದಿಸುವ ರಾಜ್ಯವಾಗಿದೆ. ಡೀಸೆಲ್‌ ಮತ್ತಿತರ ಮಾಲಿನ್ಯ ಉಂಟುಮಾಡುವ ಇಂಧನಕ್ಕೆ ಪರ್ಯಾಯವಾಗಿ ಇದನ್ನು ಬಳಸಿಕೊಂಡು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸಲು ವಿಪುಲ ಅವಕಾಶಗಳಿವೆ. ಈ ದಿಸೆಯಲ್ಲಿ ಪ್ರಯತ್ನಗಳು ಆಗಬೇಕು ಎಂದರು.

“ರಸ್ತೆಗಳ ವಿಸ್ತರಣೆ ಅಥವಾ ಅಭಿವೃದ್ಧಿಗಾಗಿ ಮರಗಳ ಹನನ ತಪ್ಪಿಸಲು ಟ್ರೀ ಬ್ಯಾಂಕ್‌ ಸ್ಥಾಪಿಸುವಂತೆ ಸಲಹೆ ಮಾಡಲಾಗಿದೆ. ಇದರಡಿ ಮರಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ರಸ್ತೆಗಳುದ್ದಕ್ಕೂ ಹೆಚ್ಚು ಹಸಿರು ವಲಯ ನಿರ್ಮಿಸುವ ಅವಶ್ಯಕತೆ ಇದೆ. ಇದರಿಂದ ವಾಹನಗಳು ಉಗುಳುವ ಇಂಗಾಲವನ್ನು ಮರಗಳು ತೆಗೆದುಕೊಳ್ಳುತ್ತವೆ. ಆ ಮೂಲಕ ವಾಯುಮಾಲಿನ್ಯ ಪ್ರಮಾಣ ತಗ್ಗಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಹಾಗೂ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್‌ (ನಿವೃತ್ತ) ವಿ.ಕೆ. ಸಿಂಗ್‌ ಮಾತನಾಡಿ, ರಾಜ್ಯಗಳ ಸಾರಿಗೆ ಸಂಸ್ಥೆಗಳು ಸಾಧ್ಯವಾದಷ್ಟು ಡೀಸೆಲ್‌ ಆಧಾರಿತ ವಾಹನಗಳಿಂದ ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್‌ ವಾಹನಗಳತ್ತ ಮುಖಮಾಡಬೇಕು ಎಂದು ಹೇಳಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್‌ ಅರಮನೆ ಮಾತನಾಡಿ, 2047ರ ವೇಳೆಗೆ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸುವುದು ಇಲಾಖೆ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎರಡು ದಿನಗಳ ಮಂಥನ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ ಎಂದರು.

Advertisement

ಸಚಿವರಾದ ಸಿ.ಸಿ. ಪಾಟೀಲ್‌, ಬಿ. ಶ್ರೀರಾಮುಲು, ಸಂಸದರಾದ ಪಿ.ಸಿ. ಮೋಹನ್‌, ತೇಜಸ್ವಿಸೂರ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥೆ ಅಲ್ಕಾ ಉಪಾಧ್ಯಾಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next