Advertisement

ಸಮಾಜದ ಅಭಿವೃದ್ಧಿಗೆ ಸಹಕಾರ ಸಂಸ್ಥೆಗಳು ಸಹಕಾರಿ

04:16 PM Sep 01, 2022 | Team Udayavani |

ಬಾಗಲಕೋಟೆ: ಮನುಷ್ಯ ಸಂಘ ಜೀವಿ, ಪರಸ್ಪರ ಸಹಕಾರ ಹಾಗೂ ವಿಶ್ವಾಸದಿಂದ ಸಾಗಿದರೆ ಜೊತೆಯಾಗಿ ಸಾಗಿದಾಗ ಮಾತ್ರ ವಿಕಾಸ ಸಾಧ್ಯ. ಹೀಗಾಗಿ ಸಮಾಜದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಘಗಳು ಪೂರಕವಾಗಿವೆ ಎಂಬುದನ್ನು ವಿಜಯ ಎಂ.ಆರ್‌.ಎನ್‌. ಸೌಹಾರ್ದ ಸಹಕಾರಿ ನಿರೂಪಿಸಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಮುಧೋಳದ ನಿರಾಣಿ ಶುಗರ್ಸ್‌ ಆವರಣದಲ್ಲಿ ನಡೆದ ವಿಜಯ ಹಾಗೂ ವಿಶಾಲ ಸೌಹಾರ್ದ ಸಹಕಾರಿ, ಪ್ರಜ್ವಲ್‌ ವಿವಿಧೋದ್ದೇಶಗಳ ಸಹಕಾರಿ ಸಂಘ ಹಾಗೂ ಎಂ.ಆರ್‌.ಎನ್‌. (ನಿರಾಣಿ) ಫೌಂಡೇಶನ್‌ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ನಿರಾಣಿ ಸಮೂಹದ 3 ಸಹಕಾರಿ ಸಂಸ್ಥೆಗಳು ರೈತರ, ಕಾರ್ಮಿಕರ ಹಾಗೂ ಎಲ್ಲ ಸಹಕಾರಿ ಸದಸ್ಯರ ಸಹಕಾರದಿಂದ ಸದೃಢವಾಗಿ ಬೆಳೆದಿವೆ. ಈ ಬೆಳವಣಿಗೆ ಮೂಲಕ ನಮ್ಮ ಭಾಗದಲ್ಲಿ ಆದ ಆರ್ಥಿಕ ಪ್ರಗತಿ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಆಧುನಿಕ ಬ್ಯಾಂಕಿಂಗ್‌ ಸೌಲಭ್ಯಗಳನ್ನು ರೈತ ಸಮೂಹಕ್ಕೆ ಪರಿಚಯಿಸುವಲ್ಲಿ ವಿಜಯ ಸೌಹಾರ್ದ ಸಹಕಾರಿ ಯಶಸ್ಸು ಕಂಡಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಬಾಗಲಕೋಟೆ ಜಿಲ್ಲೆ ಬೆಳ್ಳಿಹಬ್ಬ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಬಾದಾಮಿ ತಾಲೂಕಿನಲ್ಲಿ 1 ಲಕ್ಷ ಎಕರೆಗೆ
ನೀರೊದಗಿಸುವ ನೀರಾವರಿ ಯೋಜನೆಗಳು ಕಾರ್ಯ ಪ್ರಗತಿಯಲ್ಲಿರುವುದು ಖುಷಿ ತಂದಿದೆ. ಮುಂದಿನ 2 ವರ್ಷಗಳಲ್ಲಿ ಬಾದಾಮಿ ತಾಲೂಕಿನಲ್ಲಿ 2 ಸಾವಿರ ಎಕರೆ ಕೈಗಾರಿಕಾ ಪ್ರದೇಶ, ಬಾಗಲಕೋಟೆ-ಬಾದಾಮಿ 2 ಸ್ಥಳಗಳಿಗೆ ಅನುಕೂಲವಾಗಲು ವಿಮಾನ ನಿಲ್ದಾಣ ನಿರ್ಮಾಣ, ಖಜ್ಜಿಡೋಣಿವರೆಗೂ ತಲುಪಿದ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಪೂರ್ಣಗೊಳಿಸಿದರೆ ಮಹಾರಾಷ್ಟ್ರಕ್ಕೆ ರೈಲು ಸಂಪರ್ಕ ಮತ್ತು ಜಮಖಂಡಿ, ಮುಧೋಳ ಮಾರ್ಗವಾಗಿ ಪೂನಾ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಹೊಸ ಮಾರ್ಗ ಅನುಷ್ಠಾನ ಸೇರಿದಂತೆ ಎಲ್ಲ ಮಹತ್ವಾಕಾಂಕ್ಷಿ ಯೋಜನೆಗಳು ಪೂರ್ಣಗೊಂಡು ಕೈಗಾರಿಕರಣ ಬಲವರ್ಧನೆ ಮಾಡಲಾಗುವುದು ಎಂದು ಹೇಳಿದರು.

ವಿಜಯ ಸಹಕಾರಿಯ ವಾರ್ಷಿಕ ವರದಿ ವಾಚನ ಮಾಡಿದ ಎಂ.ಎಚ್‌. ಪತ್ತೇನ್ನವರ ಮಾತನಾಡಿ, 2021-21ನೇ ಹಣಕಾಸು ವರ್ಷದಲ್ಲಿ ಸಹಕಾರಿಯು 25 ಸಾವಿರ ಕೋಟಿ ವಾರ್ಷಿಕ ವಹಿವಾಟು ನಡೆಸಿ, 1425 ಕೋಟಿ ಠೇವಣಿ ಹೊಂದಿದ್ದು, 1200 ಕೋಟಿ ಸಾಲ ವಿತರಿಸುವ ಜೊತೆಗೆ 300 ಕೋಟಿ ಹಣ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿಲಾಗಿದೆ.

Advertisement

ಸಹಕಾರಿಯು 4.90 ಕೋಟಿ ಲಾಭಗಳಿಸುವ ಮೂಲಕ ಕರ್ನಾಟಕದಲ್ಲಿಯೇ ಅತ್ಯ ಧಿಕ ಶೇ. 25 ಡಿವಿಡೆಂಟ್‌ ಘೋಷಿಸಿದ ಏಕೈಕ ಸಂಸ್ಥೆಯಾಗಿದೆ ಎಂದರು. ಸಿದ್ದರಾಜ ಪೂಜಾರಿ, ರಾಜಶೇಖರ ಶೀಲವಂತ ಮಾತನಾಡಿದರು.

ಸಂಗಮೇಶ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ಶಶಿಕಾಂತಗೌಡ ಪಾಟೀಲ, ಬಿಡಿಸಿಸಿ ನಿರ್ದೇಶಕ ಆರ್‌. ಎಸ್‌. ತಳೇವಾಡ, ಶಿವನಗೌಡ ಪಾಟೀಲ-ಹುನಗುಂದ, ಮುತ್ತಣ್ಣ ಕಳ್ಳಿಗುದ್ದಿ, ಸುಶೀಲಕುಮಾರ ಬೆಳಗಲಿ, ಭೀಮಶಿ ಮಗದುಮ್ಮ, ಶ್ಯಾಮ್‌ ಕರವಾ, ಸೊಮಶೇಖರ ಗೋಸಾರ, ಪಿ.ಆರ್‌. ಗೌಡರ, ಕಾಡು ಮಾಳಿ, ಸುರೇಶ ಬಿರಾದಾರ, ಸೋಮನಗೌಡ ಪಾಟೀಲ, ಈಶ್ವರ ಕರಬಸನ್ನವರ, ಎಂ.ಆರ್‌. ಪಾಟೀಲ, ಮಹಾದೇವ ಮಾರಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next