Advertisement

ಸಹಕಾರ ಕ್ಷೇತ್ರ ಸುಧಾರಣೆ ಅಗತ್ಯ

11:20 AM Jul 17, 2019 | Team Udayavani |

ಹಾವೇರಿ: ಸಹಕಾರ ಕ್ಷೇತ್ರದ ಆರ್ಥಿಕ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರೈತರು ನಮ್ಮನ್ನು ಬಿಟ್ಟು ಹೋಗುವ ಕಾಲ ದೂರವಿಲ್ಲ. ಈ ಹಿನ್ನೆಲೆಯಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಅಭಿಪ್ರಾಯಿಸಿದರು.

Advertisement

ಇಲ್ಲಿಯ ಶಿವಲಿಂಗೇಶ್ವರ ನಗರದ ಕೆಸಿಸಿ ಬ್ಯಾಂಕ್‌ ಸಭಾಭವನದಲ್ಲಿ ಮಂಗಳವಾರ ಹಾವೇರಿ ಹಾಗೂ ಬ್ಯಾಡಗಿ ತಾಲೂಕಿನ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ಕಾನೂನಾತ್ಮಕ ಬದಲಾವಣೆ ತಂದಿದ್ದರೂ ಕೂಡ ಇನ್ನು ಆಡಳಿತಾತ್ಮಕವಾಗಿ ಬದಲಾವಣೆ ತರಲು ಸಾಧ್ಯವಾಗಿಲ್ಲ. ಯಾವುದೇ ಒಂದು ಉದ್ಯೋಗ ಕೈಗೊಳ್ಳುವುದಕ್ಕೆ ತರಬೇತಿ ಅಗತ್ಯವಾಗಿದೆ. ಅದೇ ರೀತಿ ಸಹಕಾರ ಕ್ಷೇತ್ರದಲ್ಲಿ ನಿರಂತರ ತರಬೇತಿ, ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

ಸಹಕಾರ ಕ್ಷೇತ್ರದಲ್ಲಿ ಕಾಲ ಕಾಲಕ್ಕೆ ಪರಸ್ಪರ ಚರ್ಚೆ ಏರ್ಪಡಿಸಬೇಕು. ಎಲ್ಲಿ ಚರ್ಚೆ ಆಗುತ್ತದೆಯೋ ಅಲ್ಲಿ ನಿರ್ಣಯಗಳನ್ನು ಕಂಡುಕೊಳ್ಳಲು ಸಾಧ್ಯ. ಕೈಗೊಂಡ ನಿರ್ಣಯಗಳು ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತವೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳಿದ್ದು ಇವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಜಿಲ್ಲೆಯಲ್ಲಿ ಎರಡು ಸಾವಿರ ಸಹಕಾರ ಸಂಘಗಳಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದರು.

Advertisement

ಕಾರ್ಯಾಗಾರ ಉದ್ಘಾಟಿಸಿದ ಕೆಸಿಸಿ ಬ್ಯಾಂಕ್‌ ನಿರ್ದೇಶಕ ಮೃತ್ಯುಂಜಯ ಯಲಿಗಾರ, ‘ಸಹಕಾರ’ ಎಂಬ ಪದದಲ್ಲಿಯೇ ಅದರ ಅರ್ಥ ಅಡಗಿದ್ದು ಪರಸ್ಪರ ಒಬ್ಬರಿಗೊಬ್ಬರು ಸಹಕಾರ ನೀಡಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಸಹಕಾರ, ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದಾಗ ಮಾತ್ರ ಸಹಕಾರ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಸಹಕಾರ ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಕಾರ್ಯ ನಿರ್ವಹಿಸುವ ಮೂಲಕ ಅಭಿವೃದ್ಧಿ ಕಾಣಬೇಕು ಎಂದರು.

ಸಹಕಾರ ಕ್ಷೇತ್ರ ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ ಹೊಸ ಹೊಸ ಯೋಜನೆ, ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಸಹಕಾರ ರಂಗವನ್ನು ಮತ್ತಷ್ಟು ವಿಸ್ತರಿಸಲು ಶ್ರಮಿಸುತ್ತಿದೆ. ಸಹಕಾರ ಕ್ಷೇತ್ರದ ಏಳ್ಗೆಗೆ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಪ್ರಾಥಮಿಕ ಪತ್ತಿನ ಸಹಕಾರಿ ಸಂಘ ನೌಕರರ ಒಕ್ಕೂಟದ ತಾಲೂಕಾಧ್ಯಕ್ಷ ಬಸವರಾಜ ಕುಲಕರ್ಣಿ ಮಾತನಾಡಿ, ಸರ್ಕಾರ ರೈತರ ಸಾಲಮನ್ನಾ ಮಾಡಿ ಸಹಕಾರ ಸಂಘಗಳಿಗೆ ಕೇವಲ ಅಸಲು ಮಾತ್ರ ನೀಡಿದೆ. ಇದರಿಂದ ಬಡ್ಡಿಯ ಹೊರೆ ಹೊತ್ತಿರುವ ಸಹಕಾರ ಸಂಘಗಳು ಸಂಕಷ್ಟದಲ್ಲಿವೆ. ಇದನ್ನು ಸರ್ಕಾರ ಅರಿತುಕೊಂಡು ಬಡ್ಡಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಸಹಕಾರ ರಂಗ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಶಿವಾನಂದ ರಾಮಗಿರಿ ಮಾತನಾಡಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮನೋಹರ ಕಟಿಗೇರಿ ಸೋಲಾರ ಉಪಕರಣಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ ಉಪನಿರ್ದೇಶಕ ಉಮೇಶ ಬ್ಯಾಡಗಿ, ನಿರ್ದೇಶಕ ಬಸವೇಶಗೌಡ ಪಾಟೀಲ, ಸಹಾಯಕ ನಿಬಂಧಕ ಎನ್‌.ಎಸ್‌. ಕುಮ್ಮೂರ, ಜಿಲ್ಲಾ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ ನೌಕರರ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ಅಂಬಲಿ, ಬ್ಯಾಡಗಿ ಪಿಕೆಪಿಎಸ್‌ ನೌಕರರ ಒಕ್ಕೂಟದ ಅಧ್ಯಕ್ಷ ಸುಭಾಸಗೌಡ ದ್ಯಾಮನಗೌಡ್ರ, ವಿಶ್ವಾನಾಥ ನಾಯಕ ಇತರರು ಇದ್ದರು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಕೆಸಿಸಿ ಬ್ಯಾಂಕ್‌ ಧಾರವಾಡ, ಸೆಲ್ಕೋ ಫೌಂಡೇಶನ್‌ ಆಶ್ರಯದಲ್ಲಿ ಕಾರ್ಯಾಗಾರ ಸಂಘಟಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next