Advertisement

ಸಹಕಾರಿ ಕ್ಷೇತ್ರದ ಧುರೀಣರ ಸಭೆ ಶೀಘ್ರ: ಮುಖ್ಯಮಂತ್ರಿ ಯಡಿಯೂರಪ್ಪ

11:51 PM Sep 21, 2019 | Team Udayavani |

ಬೆಂಗಳೂರು: “ಡಿಸಿಸಿ ಬ್ಯಾಂಕ್‌ಗೆ ನೀಡಬೇಕಾಗಿರುವ ರೈತರ ಸಾಲಮನ್ನಾ ಯೋಜನೆ ಬಾಕಿ ಸೇರಿ ಸಹಕಾರ ಕ್ಷೇತ್ರಗಳ ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರದಲ್ಲೇ ಸಹಕಾರಿ ಕ್ಷೇತ್ರದ ಧುರೀಣರ ಸಭೆ ನಡೆಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆದ ನೆರೆ-ಪರಿಹಾರ ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಸಾಲಮನ್ನಾ ಯೋಜನೆಯಡಿ ಸುಮಾರು 1,970 ಕೋಟಿ ರೂ. ಮತ್ತು ಬಡ್ಡಿ ಸಹಾಯಧನ ಯೋಜನೆಯಡಿ ಸುಮಾರು 518.96 ಕೋಟಿ ರೂ. ಸೇರಿ ಸರ್ಕಾರದಿಂದ ಸಹಕಾರ ಸಂಸ್ಥೆಗಳಿಗೆ ಬಾಕಿ ಇರುವ ಒಟ್ಟು 2488.96 ಕೋಟಿ ರೂ. ಅನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಡಿಸಿಸಿ ಬ್ಯಾಂಕ್‌ ಮನವಿ ಮಾಡಿದೆ. ಈ ಸಂಬಂಧ ಹಣಕಾಸು ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆಂದರು.

ರಾಜ್ಯ ಸಹಕಾರಿ ಸಂಘದ ಅಧಿನಿಮಯ 1959ರಲ್ಲಿ ಈ ಹಿಂದೆ ಇದ್ದಂತೆ 128-ಎ ಅನ್ನು ಪುನರ್‌ ಜಾರಿ ಮತ್ತು ಸಹಕಾರಿ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯಲ್ಲಿ ಕೆಲವು ತಿದ್ದುಪಡಿ ತರುವಂತೆ ಸಹಕಾರಿ ಕ್ಷೇತ್ರದ ಧುರೀಣರು ಮನವಿ ಮಾಡಿದ್ದಾರೆಂದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, “ಈ ಹಿಂದೆ ನಾನು ಸಹಕಾರ ಸಚಿವನಾಗಿದ್ದಾಗ, ಸಹಕಾರಿ ಕ್ಷೇತ್ರದ ಹಲವು ಸಮಸ್ಯೆಗಳು ಗಮನಕ್ಕೆ ಬಂದಿದ್ದವು. ಸಹಕಾರಿ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ತಿದ್ದುಪಡಿ ಮತ್ತು 128-ಎ ಪುನರ್‌ಜಾರಿ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.

ಸರ್ಕಾರಕ್ಕೆ ಮನವಿ: ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಮಾತನಾಡಿ, ಸರ್ಕಾರ ನೀಡಬೇಕಾಗಿದ್ದ ಹಣ ಸೂಕ್ತ ಸಮಯದಲ್ಲಿ ಬಾರದ ಹಿನ್ನೆಲೆಯಲ್ಲಿ ರೈತರಿಗೆ ಸಕಾಲಕ್ಕೆ ಸರಿಯಾಗಿ ಹಣ ನೀಡಲು ಆಗುತ್ತಿಲ್ಲ. ಈ ಸಂಬಂಧ ಸರ್ಕಾರ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಸಿಎಂ ಪರಿಹಾರ ನಿಧಿಗೆ ಚೆಕ್‌: ಇದೇ ವೇಳೆ ಅಪೆಕ್ಸ್‌ ಬಾಂಕ್ಸ್‌ ವತಿಯಿಂದ 5 ಕೋಟಿ ರೂ. ಬೆಳಗಾವಿ ಡಿಸಿಸಿ ಬ್ಯಾಂಕ್‌ ವತಿಯಿಂದ 2 ಕೋಟಿ ರೂ. ದಕ್ಷಿಣ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್‌ ನಿಂದ 1.5 ಕೋಟಿ ರೂ. ಬಾಗಲಕೋಟೆ ಡಿಸಿಸಿ ಬ್ಯಾಂಕ್‌ ನಿಂದ 50 ಲಕ್ಷ ರೂ. ಸೇರಿ ಹಲವು ಜಿಲ್ಲೆಗಳ ಡಿಸಿಸಿ ಬ್ಯಾಂಕುಗಳು ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್‌ ಅನ್ನು ಸಿಎಂಗೆ ನೀಡಲಾಯಿತು. ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ, ಅನರ್ಹ ಶಾಸಕರಾದ ಶಿವರಾಮ್‌ ಹೆಬ್ಬಾರ್‌, ಎಸ್‌.ಟಿ.ಸೋಮಶೇಖರ್‌, ಮಾಜಿ ಸಚಿವ ಎಚ್‌.ವೈ ಮೇಟಿ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌.ನಾಗಾಂಬಿಕಾ ದೇವಿ ಇದ್ದರು.

Advertisement

“ಒಳ್ಳೆ ಕೆಲಸಕ್ಕೆ ತಡೆ ನೀಡುವ ಕೆಲಸ ಈ ಹಿಂದಿನ ಸರ್ಕಾರ ಮಾಡಿತ್ತು’
ಬೆಂಗಳೂರು: “ಒಳ್ಳೆ ಕೆಲಸ ಮಾಡುವವರನ್ನು ತಡೆ ಹಿಡಿಯುವ ಕೆಲಸ ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಡೆದಿತ್ತು. ಆದರೆ, ಅದಕ್ಕೆ ಬಿಜೆಪಿ ಸರ್ಕಾರ ಅವಕಾಶ ನೀಡುತ್ತಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದರು. ಅಪೆಕ್ಸ್‌ ಬಾಂಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದಿನ ಸರ್ಕಾರ ಅಪೆಕ್ಸ್‌ ಬ್ಯಾಂಕ್‌ಅನ್ನು ಸೂಪರ್‌ ಸೀಡ್‌ ಮಾಡಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಸೂಪರ್‌ ಸೀಡ್‌ ವಾಪಸ್‌ ಪಡೆಯಿತು.

ಉತ್ತಮ ಕೆಲಸ ಮಾಡುವವರನ್ನು ಕಟ್ಟಿ ಹಾಕುವ ಕೆಲಸ ಈ ಹಿಂದೆ ನಡೆದಿತ್ತು ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು. ಉತ್ತಮವಾಗಿ ಕೆಲಸ ಮಾಡುವವರನ್ನು ಯಾವಾಗಲೂ ತಡೆ ಹಿಡಿಯುವ ಕೆಲಸವಾಗಬಾರದು. ಹೀಗಾಗಿ ಸೂಪರ್‌ ಸೀಡ್‌ ವಾಪಸ್‌ ಪಡೆಯಿತು. ಮುಂದಿನ ದಿನಗಳಲ್ಲಿ ಅಪೆಕ್ಸ್‌ ಬ್ಯಾಂಕ್‌, ಸಹಕಾರಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶಿಸಿದರು.

ಹೆಬ್ಬಾರ್‌, ಸೋಮಶೇಖರ್‌ ಸಚಿವರಾಗಲಿದ್ದಾರೆ: ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಮಾತನಾಡಿ, “ಈ ಹಿಂದೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಪೆಕ್ಸ್‌ ಬ್ಯಾಂಕ್‌ ಅನ್ನು ಸೂಪರ್‌ ಸೀಡ್‌ ಮಾಡುವ ಕೆಲಸ ನಡೆದಿತ್ತು. ಆದರೆ, .ಯಡಿಯೂರಪ್ಪ ಅವರು ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಈಗ ಅವರ ಮುಂದೆ ಇದ್ದೇನೆ’ ಎಂದರು. ಸದ್ಯದಲ್ಲೇ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ ಶಿವರಾಮ್‌ ಹೆಬ್ಬಾರ್‌, ಎಸ್‌.ಟಿ. ಸೋಮಶೇಖರ್‌ ಅವರು ಯಡಿಯೂ ರಪ್ಪ ಅವರ ಸಂಪುಟ ಸೇರಲಿದ್ದಾರೆ. ಇಬ್ಬರಲ್ಲಿ ಒಬ್ಬರು ಸಹಕಾರ ಸಚಿವರಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next