Advertisement

ಜಿಲ್ಲೆಗೆ ಸಹಕಾರಿ ಕೇಂದ್ರ ಕಚೇರಿ ಮಂಜೂರಾತಿಗೆ ಆಗ್ರಹ

05:24 PM Mar 19, 2022 | Team Udayavani |

ಸುರಪುರ: ಈ ಭಾಗದ ರೈತರಿಗೆ ಸಹಕಾರಿ ಬ್ಯಾಂಕ್‌ನಿಂದ ಸೌಲಭ್ಯ ಪಡೆಯಲು ಅನಾನುಕೂಲವಾಗುತ್ತಿದ್ದು, 371 ಸೌಲಭ್ಯದಡಿ ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್‌ ಕಚೇರಿ ಮಂಜೂರಿ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುವುದಾಗಿ ಕಲಬುರಗಿ-ಯಾದಗಿರಿ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಡಾ| ಸುರೇಶ ಸಜ್ಜನ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವತ್ಕಲ್‌ ಗ್ರಾಮಕ್ಕೆ ಆಗಮಿಸಲಿರುವ ಸಿಎಂ ಅವರಿಗೆ ಈ ಕುರಿತು ಮನವಿ ಸಲ್ಲಿಸಲಾಗುವುದು. ಸಹಕಾರಿ ಸಂಘಗಳ ಕೊರತೆಯಿಂದ ಜಿಲ್ಲೆಗೆ ಪ್ರತ್ಯೇಕ ಶಾಖೆ ಮಂಜೂರಿ ತಾಂತ್ರಿಕ ತೊಂದರೆ ಎದುರಾಗುತ್ತಿದೆ. ಹಿಂದುಳಿದಿರುವ ಪ್ರದೇಶವಾದ್ದರಿಂದ 371 ಕಲಂ ಅಡಿ ಪ್ರತ್ಯೇಕ ಶಾಖೆ ಮಂಜೂರಿ ಮಾಡುವಂತೆ ಶಾಸಕ ರಾಜುಗೌಡ ಮೂಲಕ ಸಿಎಂಗೆ ಸಲ್ಲಿಸಲಾಗುವುದು ಎಂದರು.

ಸುರಪುರ ಕೊನೆ ಭಾಗದ ರೈತರು ಕೇಂದ್ರ ಕಚೇರಿಗೆ ಹೋಗಲು ಸುಮಾರು 200 ಕಿ.ಮೀ ದೂರ ಹೋಗಬೇಕಾಗುತ್ತದೆ. ಹೀಗಾಗಿ ರೈತರು ಸಮರ್ಪಕ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ತಿಳಿಸಿದರು.

2020-21ನೇ ಸಾಲಿನಲ್ಲಿ 25 ಸಾವಿರ ರೈತರಿಗೆ 67 ಕೋಟಿ ರೂ. ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15 ಸಾವಿರ ಹೊಸ ರೈತರಿಗೆ ಸಾಲ ನೀಡಲಾಗದೇ ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು. ನಿರ್ದೇಶಕ ಬಾಪುಗೌಡ ಪಾಟೀಲ ಮಾತನಾಡಿ, 371 ಸಮರ್ಪಕವಾಗಿಲ್ಲ. ಶಿಕ್ಷಣ- ಉದ್ಯೋಗದಲ್ಲೂ ಈ ಭಾಗಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರ ಸಮಸ್ಯೆ ಆದಷ್ಟು ಬೇಗ ಸರಿಪಡಿಸಬೇಕು. ನೇರ ನೇಮಕಾತಿ ಮತ್ತು ಬಡ್ತಿಯಲ್ಲಿಯೂ ಬೇರೆಯವರನ್ನು ನೇಮಿಸಿದೆ. ನಮ್ಮ ಭಾಗದವರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಹಾಲು ಒಕ್ಕೂಟ, ಹಾಪ್‌ ಕಾಮ್ಸ್‌ನಲ್ಲಿಯೂ ನೋಂದಣಿ ಮಾಡಿದ್ದೇವೆ. ಇಲ್ಲಿಯೂ ನಮಗೆ ಅನ್ಯಾಯವಾಗಿದೆ. ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಹಾಲು ಸಂಗ್ರಹ ಶೇಖರಣಾ ಸಂಘಗಳಿವೆ. ಈ ಪೈಕಿ 30 ಕೇಂದ್ರಗಳು ಮಾತ್ರ ಅಸ್ತಿತ್ವದಲ್ಲಿದ್ದು ಉಳಿದವು ನಿಷ್ಕ್ರಿಯವಾಘಿವೆ. ಈ ಭಾಗದ ರೈತರ ಹಿತದೃಷ್ಟಿಯಿಂದ 371 ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದರು.

Advertisement

ದೋರನಹಳ್ಳಿ ಸಿಲಿಂಡರ್‌ ದುರಂತದಲ್ಲಿ ಮೃತಪಟ್ಟ 15 ಕುಟುಂಬಗಳ ಜತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರರಿಗೂ ಪರಿಹಾರ ನೀಡಬೇಕು. ತೀರ ಬಡತನದಲ್ಲಿರುವ ಅವರ ಕಷ್ಟ ನೋಡಲಾಗುತ್ತಿಲ್ಲ. ಮುಖ್ಯಮಂತ್ರಿಗಳು ಮಾನವೀಯತೆ ತೋರಿ ಘಟನೆಯ ಎಲ್ಲ ಸಂತ್ರಸ್ತರಿಗೂ ಪರಿಹಾರ ಒದಗಿಸಬೇಕು. ಡಾ| ಸುರೇಶ ಸಜ್ಜನ್‌, ಕೆವೈಡಿಸಿ ಬ್ಯಾಂಕ್ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next