ಉಡುಪಿ: ಭಾರತ ಅಭಿವೃದ್ಧಿಯಲ್ಲಿ ಸೂಪರ್‌ಪವರ್ ಆಗುತ್ತಿದ್ದರೆ ಅದಕ್ಕೆ ಸಹಕಾರ ರಂಗದ ಕೊಡುಗೆ ಅಪಾರವಿದೆ. ಕರಾವಳಿ ಭಾಗದಲ್ಲೂ ಸಹಕಾರ ರಂಗ ತನ್ನದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿದೆ. ರಾಜ್ಯದಲ್ಲಿ 44 ಸಾವಿರ ಸಹಕಾರಿ ಸಂಸ್ಥೆಗಳು ನಿರಂತರವಾಗಿ ಉತ್ತಮ ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯ ಸಹಕಾರ ಭಾರತಿಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಉಡುಪಿ ಜಿಲ್ಲಾ ಸಹಕಾರ ಭಾರತಿ ವತಿಯಿಂದ ಕಿನ್ನಿಮೂಲ್ಕಿಯ ವೀರಭದ್ರ ಕಲಾಮಂಟಪದಲ್ಲಿ ಮಂಗಳವಾರ ನಡೆದ ಜಿಲ್ಲಾ ಸಹಕಾರಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿ ಜನತೆ ಸಾಲ ಮರುಪಾವತಿ, ಶಿಕ್ಷಣ, ಸಾಕ್ಷರತೆ, ಸಂಸ್ಕೃತಿಯಲ್ಲಿ ಮುಂದಿದ್ದಾರೆ. ಹಾಗೆಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ತಮ್ಮ ಬೂತ್‌ಗಳಲ್ಲಿ ಚಲಾಯಿಸುವಂತೆ ಇತರರಿಗೆ ಪ್ರೇರೇಪಿಸುವ ಮೂಲಕ ಮತದಾನದಲ್ಲೂ ಜಿಲ್ಲೆ ನಂಬರ್ ವನ್ ಆಗುವಲ್ಲಿ ಶ್ರಮಿಸಬೇಕು ಎಂದರು.
ಸಹಕಾರ ಭಾರತಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಸಹಕಾರಿ ಸಂಸ್ಥೆಯ ಮೂಲಕ ರಾಷ್ಟ್ರನಿರ್ಮಾಣ ಕೆಲಸ ನಡೆಯುತ್ತಿದೆ.
ಸಹಕಾರಿ ಕ್ಷೇತ್ರದಲ್ಲಿ ಸ್ವಾಯತ್ತತೆ ತರಲು ಸಂವಿಧಾನದಲ್ಲಿ ತಿದ್ದುಪಡಿ ತರಲಾಗಿದೆ. ಈ ದೃಷ್ಟಿಯಿಂದ ಸಹಕಾರಿಗಳು ಸ್ವತ್ಛತೆ, ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಹಿರಿಯ ಪ್ರಚಾರಕ ದಾ.ಮಾ.ರವೀಂದ್ರ, ಸಹಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ಹರೀಶ್ ಆಚಾರ್ಯ, ರಾಜ್ಯ ಮಹಿಳಾ ಪ್ರಕೋಷ್u ಪ್ರಮುಖ್ ಸುಮನಾ ಶರಣ್, ಜಿಲ್ಲಾಧ್ಯಕ್ಷ ಬೋಳಾ ಸದಾಶಿವ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಮಧುಸೂದನ ನಾಯಕ್, ರಾಜ್ಯ ಕಾನೂನು ಪ್ರಕೋಷ್ಠದ ಮಂಜುನಾಥ್ ಎಸ್.ಕೆ., ರಾಜ್ಯ ಸಮಿತಿ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ರಾಜ್ಯ ಸಂಘಟನ ಪ್ರಮುಖ್ ನವೀನ್ ಕುಮಾರ್ ಉಪಸ್ಥಿತರಿದ್ದರು. ದಿನೇಶ್ ಹೆಗ್ಡೆ ಆತ್ರಾಡಿ ಸ್ವಾಗತಿಸಿ, ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.