ಬೆಂಗಳೂರು: ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸಹಕಾರ ಸಮ್ಮೇಳನದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್” ಉದ್ಘಾಟಿಸಲಾಯಿತು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ನಂದಿನಿ ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ಲಾಂಛನ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕರ್ನಾಕಟದಲ್ಲಿ ಸಹಕಾರಿ ರಂಗ ಮಹತ್ವದ ಪಾತ್ರ ವಹಿಸಿದೆ. ಸಹಕಾರ ಗ್ರಾಮೀಣ ಆರ್ಥಿಕ ಚಟುವಟಿಕೆಗೆ ದೊಡ್ಡ ಶಕ್ತಿಯಾಗಿ ನಿಂತಿದೆ. ಸರ್ಕಾರವೂ ಸಹಕಾರ ಕ್ಷೇತ್ರ ಬಲ ಪಡಿಸುವ ಕೆಲಸ ಮಾಡುತ್ತಿದೆ. ಈ ವರ್ಷ 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೃಷಿಯಿಂದ ಸಹಕಾರಿ ಇಲಾಖೆಯನ್ನು ಪ್ರತ್ಯೇಕ ಮಾಡಿದ್ದಾರೆ. ದೇಶದ ಎಲ್ಲ ಪ್ಯಾಕ್ಸ್ ಗಳು ಕಾಂಪ್ರೆಸ್ ಆಗಬೇಕೆಂದು ಕ್ರಮ ಕೈಗೊಂಡಿದ್ದಾರೆ ಎಂದರು.
ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಹಾಲು ಮಾರುವವರ ಶಕ್ತಿ ಏನು ಎಂದು ತೋರಿಸುತ್ತದೆ. ಹಾಲು ಉತ್ಪಾದಕರು ಪ್ರತಿ ದಿನ 20. ಸಾವಿರ ಕೋಟಿ ರೂ.ವ್ಯವಹಾರ ಮಾಡುತ್ತಾರೆ. ಅವರದ್ದೇ ಆದ ಬ್ಯಾಂಕ್ ಸ್ಥಾಪನೆಯಾದರೆ ಇದು ದೊಡ್ಡ ಶಕ್ತಿಯಾಗಿ ಬೆಳೆಯಲಿದೆ. ಈ ಬ್ಯಾಂಕ್ ಗೆ ರಾಜ್ಯ ಸರ್ಕಾರ 100 ಕೋಟಿ ರೂ. ಮೂಲ ಬಂಡವಾಳವಾಗಿ ನೀಡುತ್ತಿದೆ ಎಂದರು.
ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪುನಃ ಆರಂಭಿಸಲು ತೀರ್ಮಾನ ಮಾಡಲಾಗಿದೆ. ರಾಜ್ಯದ ರೈತರ ಆರೊಗ್ಯ ಕಾಪಾಡಲು ಯಶಸ್ವಿನಿ ಪುನಾರಂಭಿಸಲಾಗುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸಹಕಾರಿ ರಂಗ ಸರ್ಕಾರವನ್ನು ಆಳುತ್ತಿವೆ. ನಮ್ಮಲ್ಲಿ ರಾಜಕೀಯ ಸಹಕಾರ ಕ್ಷೇತ್ರವನ್ನು ನಿಯಂತ್ರಿಸುತ್ತಿದೆ. ಸಹಕಾರಿಗಳು ಸ್ವಾವಲಂಬಿಗಳಾಗಿ ಬ್ಯಾಂಕ್ ಗಳನ್ನು ಅಭಿವೃದ್ಧಿ ಪಡಿಸಬೇಕು. ರೈತರು ಮತ್ತು ಸಹಕಾರ ಗ್ರಾಮೀಣ ಭಾರತದ ಆರ್ಥಿಕ ಶಕ್ತಿ ಎಂದು ಸಿಎಂ ಹೇಳಿದರು.