ಬೀದರ: ಸಹಕಾರ ಸಂಸ್ಥೆಗಳು ರಾಜಕೀಯರಹಿತ ವಾತಾವರಣ ಮೂಡಿಸಿಕೊಂಡು ಸದಸ್ಯರು ಪರಸ್ಪರ ಸಾಮರಸ್ಯದಿಂದ ಕೆಲಸ ಮಾಡಿದಾಗ ಸಂಸ್ಥೆಯ ಅಭಿವೃದ್ಧಿ ಸಾಧ್ಯವಿದೆ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಅಬ್ದುಲ್ ಸಲೀಮ್ ಕರೆ ನೀಡಿದರು.
ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಕುಷ್ಠಗಿ, ಯಲಬುರ್ಗಾ, ಹುಕ್ಕೇರಿ ತಾಲೂಕುಗಳ ಸಹಕಾರಿ ಸಂಸ್ಥೆಗಳ ಅಧ್ಯಕ್ಷರಿಗಾಗಿ ನಡೆದ ಪ್ರಧಾನ ಮಂತ್ರಿ ಸಾಮಾಜಿಕ ಸುರಕ್ಷಾ ಯೋಜನೆಗಳು ಮತ್ತು ಡಿಜಿಟಲ್ ಇಂಡಿಯಾ ಪರಿಕಲ್ಪನೆ ತರಬೇತಿ ಶಿಬಿರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳ ಮಾಲೀಕರು ಅದರ ಸದಸ್ಯರೇ ಆಗಿದ್ದರೂ ಕೂಡ ಸಂಸ್ಥೆಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಅದರ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯರು ಪ್ರಮುಖ ಕಾರಣಕರ್ತರಾರುತ್ತಾರೆ. ಉತ್ತಮ ಆಡಳಿತ ವ್ಯವಸ್ಥೆ ರೂಪಿಸುವಲ್ಲಿ ಆಡಳಿತ ಮಂಡಳಿ ಪ್ರಾಮಾಣಿಕವಾಗಿರಬೇಕು. ತನ್ನ ಕೆಲಸದ ಬಗ್ಗೆ ಸಂಪೂರ್ಣ ಕಾಳಜಿಯೊಂದಿಗೆ ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರತಿ ಸದಸ್ಯರು ಸಂಸ್ಥೆಯ ಕೆಲಸವನ್ನು ತನ್ನ ಕೆಲಸ ಎಂದು ನಿರ್ವಹಿಸಬೇಕು. ನಾಯಕತ್ವ ಗುಣ ಅಳವಡಿಸಿಕೊಳ್ಳಬೇಕು. ಸದಸ್ಯರಿಗೆ ಒಳಿತಾಗುವ ಸಹಕಾರ ಸಂಘದ ವ್ಯವಹಾರ ವಿಸ್ತರಿಸುವಂತಹ ಯೋಜನೆಗಳನ್ನು ರೂಪಿಸಬೇಕು. ದೂರದೃಷ್ಟಿ ಹೊಂದಿರಬೇಕು. ಸಂಘದ ಅಭಿವೃದ್ಧಿ ಆದಂತೆ ಸದಸ್ಯರ ಅಭಿವೃದ್ಧಿಯಾಗುತ್ತದೆ.
ಬೀದರ ಡಿಸಿಸಿ ಬ್ಯಾಂಕ್ ಈ ನಿಟ್ಟಿನಲ್ಲಿ ಮಾದರಿಯಾಗಿದೆ. ಜಿಲ್ಲೆಯ ರೈತರಿಗೆ ಸರಕಾರದ ನೆರವು ಸಿಗುವಂತಹ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಯಶಸ್ವಿನಿ ಆರೋಗ್ಯ ವಿಮೆ, ರೈತರಿಗೆ ಸಾಲ ಮನ್ನಾ ಯೋಜನೆ, ಕೃಷಿ ಅಭಿವೃದ್ಧಿ ಸಾಲ ವಿತರಣೆ, ಫ್ಯಾಕ್ಸ್‌ಗಳಿಗೆ ಕಂಪ್ಯೂಟರ ವಿತರಣೆ, ಎಟಿಎಂ ಕಾರ್ಟ್ ವಿತರಣೆ, ಆನ್ ಲೈನ್ ಬ್ಯಾಂಕಿಂಗ ಸೌಲಭ್ಯ ಹೀಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಮಾದರಿಯಾಗಿದೆ ಎಂದು ಹೇಳಿದರು.
ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಎಸ್.ಜಿ. ಪಾಟೀಲ ವಂದಿಸಿದರು. ಅನೀಲ ಮತ್ತು ನಾಗಶೆಟ್ಟಿ ಘೋಡಂಪಳ್ಳಿ ನಿರೂಪಿಸಿದರು.