Advertisement

Moodabidri ಅಭಯಚಂದ್ರರಿಗೆ “ಸಹಕಾರ ಕಲ್ಪವೃಕ್ಷ ಪ್ರಶಸ್ತಿ’

12:16 AM Nov 20, 2023 | Team Udayavani |

ಮೂಡುಬಿದಿರೆ: ನೂರ ಏಳನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮೂಡುಬಿದಿರೆ ಸರ್ವಿಸ್‌ ಕೋ-ಆಪರೇಟಿವ್‌ ಸೊಸೈಟಿ ಯಲ್ಲಿ 70ನೇ ಅ.ಭಾ. ಸಹಕಾರ ಸಪ್ತಾಹದ ಅಂಗವಾಗಿ ನಡೆಯುತ್ತಿರುವ “ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ-ಸಾಂಸ್ಕೃತಿಕ ವೈಭವ’ ಕಾರ್ಯ ಕ್ರಮದಲ್ಲಿ ಶನಿವಾರ ಮಾಜಿ ಸಚಿವ ಕೆ. ಅಭಯಚಂದ್ರ ಅವರನ್ನು ಪತ್ನಿ ಮಂಜುಳಾ ಸಹಿತ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ಸೊಸೈಟಿಯ “ಸಹಕಾರ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನಗೈದು ಸಮ್ಮಾನಿಸಿದರು.

Advertisement

ಪ್ರಶಸ್ತಿಯು 10 ಗ್ರಾಂ ಚಿನ್ನ, 25,000 ರೂ. ನಗದು, ಬೆಳ್ಳಿಯ ತಟ್ಟೆ, ಪ್ರಶಸ್ತಿ ಫಲಕ ಒಳಗೊಂಡಿದೆ. ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪಲಿಮಾರು ಮಠಾ ಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನವಿತ್ತರು. ದೇಗುಲ, ಶಾಲೆ, ಆಸ್ಪತ್ರೆ ಜತೆಗೊಂದು ಸಹಕಾರಿ ಸಂಘ ಇರುವ ಊರು ಉದ್ಧಾರವಾಗಲು ಸಾಧ್ಯ. ಎಂಸಿಎಸ್‌ ಸೊಸೈಟಿ ಜನಮನದಲ್ಲಿ ಸದಾ ಬೆಳಗುವ ದೀಪವಾಗಿರುವುಕ್ಕೆ ಅದರ ಜನಪರ ಕಾಳಜಿಯ ಕಾರ್ಯಕ್ರಮ, ಆಡಳಿತವೇ ಸಾಕ್ಷಿ ಎಂದರು.

“ಸೊಸೈಟಿ’ಯ ಬಗ್ಗೆ ಸದಾನಂದ ನಾರಾವಿ ಬರೆದ ಪುಸ್ತಕವನ್ನು ಸ್ವಾಮೀಜಿ ಯವರು ಬಿಡುಗಡೆಗೊಳಿಸಿ ಕೃತಿಕಾರ ರನ್ನು ಪುರಸ್ಕರಿಸಿದರು.

ವಿವಿಧ ಯೋಜನೆಗಳಿಗೆ ಚಾಲನೆ
ಸಚಿವ ಕೆ.ಎನ್‌.ರಾಜಣ್ಣ ಅವರು ಸೊಸೈಟಿಯ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಎಂಸಿಎಸ್‌ ಸೊಸೈಟಿ ಯನ್ನು ರಾಜಕೀಯದ ಲೇಪವಿಲ್ಲದೆ ಮುನ್ನಡೆಸಿದ್ದವರು ದಿ| ಅಮರನಾಥ ಶೆಟ್ಟಿ ಅವರು ಮುನ್ನಡೆಸಿದ್ದರು. ಅವರ ಆದರ್ಶಗಳ ಬೆಳಕಿನಲ್ಲಿ ಶಾಸಕ, ಮಂತ್ರಿಯಾಗಿ ಜನಪ್ರೀತಿಯೊಂದಿಗೆ ಎಲ್ಲರ ಒಲುಮೆ ಗಳಿಸಿದ ಮಾಜಿ ಸಚಿವ ಅಭಯಚಂದ್ರರಿಗೆ ಪ್ರಶಸ್ತಿ ನೀಡುವ ಮೂಲಕ ಈ ಸೊಸೈಟಿ ಎಲ್ಲ ಸಹಕಾರಿಗಳಿಗೆ ಮಾದರಿಯಾಗಿದೆ ಎಂದವರು ಹೇಳಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್‌ ಅವರು ಅಭಯಚಂದ್ರ ಅವರನ್ನು ಅಭಿನಂದಿಸಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತ ಅಭಯಚಂದ್ರ ಅವರು ಮಾತನಾಡಿ, ತನಗಿತ್ತ ಚಿನ್ನದ ಪದಕದ ಮೌಲ್ಯವನ್ನು ಬಾಬುರಾಜೇಂದ್ರ ಪ್ರಸಾದ್‌ ಪ್ರೌಢ ಶಾಲೆಗೆ, ನಗದು ಮೊತ್ತವನ್ನು ಎಜಿ ಸೋನ್ಸ್‌ ಐಟಿಐಗೆ ಸಲ್ಲಿಸುವುದಾಗಿ ಪ್ರಕಟಿಸಿದರು.

Advertisement

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಡಾ| ಎಚ್‌. ಎನ್‌. ರಮೇಶ್‌, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.ವಿಶೇಷ ಕಾರ್ಯನಿರ್ವಹಣಾ ಧಿಕಾರಿ ಚಂದ್ರಶೇಖರ ಎಂ. ಸ್ವಾಗತಿಸಿ, ಕೆ. ಧರಣೇಂದ್ರ ಜೈನ್‌ ವಂದಿಸಿದರು. ವೇಣುಗೋಪಾಲ ಶೆಟ್ಟಿ ನಿರೂಪಿ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next