Advertisement

ಸರ್ಕಾರಿ ಕೆಲಸಕ್ಕೆ ಸಹಕಾರ ಅಗತ್ಯ

02:27 PM Jun 29, 2019 | Team Udayavani |

ತಾವರಗೇರಾ: ಸರ್ಕಾರದ ಯಾವುದೇ ಕೆಲಸ ಆಗಬೇಕಾದರೂ ಜನರ ಸಹಕಾರ ಮುಖ್ಯ. ತಾಲೂಕು ಪಂಚಾಯಿತಿ ಸದಸ್ಯರು, ಜಿಪಂ ಸದಸ್ಯರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಸ್ಥಿತಿಗತಿ ಬಗ್ಗೆ ಪರಿಶೀಲಿಸಬೇಕು. ಏನಾದರೂ ನ್ಯೂನತೆಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.

Advertisement

ಸಮೀಪದ ಅಮರಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾವರಗೇರಾ ಹೋಬಳಿ ವ್ಯಾಪ್ತಿಯ ಅಮರಾಪೂರ ಮತ್ತು ಕಿಲ್ಲಾರಹಟ್ಟಿ ಗ್ರಾಮಗಳು ಇನ್ನೂ ತನಕ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿವೆ. ಈ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ತಹಶೀಲಾರ್‌ಗೆ ಸೂಚನೆ ನೀಡಿದರು.

ತಾಲೂಕಿನ 11 ಸಿಡಿಗಳನ್ನು ನಿರ್ಮಿಸಲು 40 ಕೋಟಿ ಹಣ ಮಂಜೂರಾತಿ ದೊರಕಿದೆ. ತಾಲೂಕಿಗೆ 4 ಆಂಗ್ಲ ಮಾಧ್ಯಮ ಶಾಲೆಗಳು ಮಂಜೂರಾಗಿದ್ದು, ಈಗಾಗಲೇ ತರಗತಿಗಳು ಆರಂಭಗೊಂಡಿವೆ. ಈ ಭಾಗದ ಬಹುತೇಕ ಗ್ರಾಮಗಳ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸುವುದಾಗಿ ಭರವಸೆ ನೀಡಿದರು. ತಾಲೂಕಿನಲ್ಲಿ ಒಟ್ಟು 450 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಒಂದು ವಾರದಲ್ಲಿ ಅಥಿತಿ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಈ ಸಭೆಯಲ್ಲಿ ತಾಲೂಕಿನ ಎಲ್ಲ ಇಲಾಖಾಧಿಕಾರಿಗಳು ಹಾಜರಿದ್ದು, ಅಬಕಾರಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು. ಸಭೆಯಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಕರ ಕೊರತೆ, ಶಾಲಾ ಕೊಠಡಿಗಳ ಕೊರತೆ, ವಿದ್ಯುತ್‌ ಸಮಸ್ಯೆ, ಬೆಳೆ ಸಾಲ, ಬಸ್‌ ಸೌಕರ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಈ ಭಾಗದ ಹತ್ತಾರು ಗ್ರಾಮಗಳ ರೈತರು ಶಾಸಕರು 250ಕ್ಕೂ ಹೆಚ್ಚು ಮನವಿ ಪತ್ರ ನೀಡಿದರು.

ಈ ಸಭೆಯಲ್ಲಿ ಕಿಲ್ಲಾರಹಟ್ಟಿ ಗ್ರಾಮದ 74 ಜನರಿಗೆ, ಅಮರಾಪೂರ ಗ್ರಾಮದ 44 ಜನರಿಗೆ ನಿವೇಶನಗಳ ಹಕ್ಕುಪತ್ರ ನೀಡಲಾಯಿತು. 5 ಜನರಿಗೆ ಮಾಸಾಶಸನ ಪತ್ರಗಳನ್ನು ಮತ್ತು ಸಾಂಕೇತಿಕವಾಗಿ 5 ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ವಿತರಿಸಲಾಯಿತು. ತಹಶೀಲ್ದಾರ್‌ ಕೆ.ಎಂ. ಗುರುಬಸವರಾಜ ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮತ್ತು ಅವುಗಳ ಅನುಷ್ಠಾನ ಕುರಿತಂತೆ ಮಾತನಾಡಿದರು.

Advertisement

ಜಿಪಂ ಸದಸ್ಯ ಹನುಮಗೌಡ ಪೊಲೀಸಪಾಟೀಲ, ತಾಪಂ ಸದಸ್ಯೆ ಸರಸ್ವತಿ ಪವಾರ್‌, ಕಿಲ್ಲಾರಹಟ್ಟಿ ಗ್ರಾಪಂ ಅಧ್ಯಕ್ಷ ಚನ್ನನಗೌಡ ಪಾಟೀಲ, ಅಮರಾಪೂರ ಗ್ರಾಪಂ ಸದಸ್ಯ ನರಸಪ್ಪ ಬಿಂಗಿ, ರವಿ ಕಾಟೀಗಲ್, ಶರಣೇಗೌಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಜೆಸ್ಕಾಂ ಇಂಜನಿಯರ್‌ ವಿಶ್ವನಾಥ, ಡಾ| ಆನಂದ ಗೋಟೂರ್‌, ರಾಜು ಫಿರಂಗಿ ಸೇರಿ ಇತರರಿದ್ದರು.

ಗೋವಾದಲ್ಲಿ ನಡೆದ ಹೊರನಾಡು ಕನ್ನಡಿಗರ 11ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ವಿ.ಆರ್‌. ತಾಳಿಕೋಟಿ ಮತ್ತು ಇದೇ ಸಮ್ಮೇಳನದಲ್ಲಿ ಕರುನಾಡ ಪದ್ಮಶ್ರೀ ಪ್ರಶಸ್ತಿ ಪಡೆದ ತಾವರಗೇರಾ ಪಿಎಸ್‌ಐ ಮಹಾಂತೇಶ ಸಜ್ಜನ್‌ ಅವರನ್ನು ಈ ಸಭೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಮತ್ತು ತಹಶೀಲ್ದಾರ್‌ ಗುರುಬಸವರಾಜ ಸನ್ಮಾನಿಸಿದರು. ದೈಹಿಕ ಶಿಕ್ಷಕ ಪರಸಪ್ಪ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next