Advertisement

ಪರಿಸರ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ

04:49 PM Apr 25, 2022 | Team Udayavani |

ಚಿತ್ರದುರ್ಗ: ಪರಿಸರ ಉಳಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಭೂಮಿಗೀತ ಸಂಸ್ಥೆಯ ಮಿಠಾಯಿ ಮುರುಗೇಶ್‌ ತಿಳಿಸಿದರು.

Advertisement

ನಗರದ ಚಂದ್ರವಳ್ಳಿ ಪ್ರದೇಶದಲ್ಲಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಸ್ಯಾಕ್‌ ಅಥ್ಲೆಟಿಕ್‌ ಅಕಾಡೆಮಿಯ ಕ್ರೀಡಾಪಟುಗಳಿಗೆ ಹಮ್ಮಿಕೊಂಡಿದ್ದ ಪರಿಸರ ಅಧ್ಯಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡಾಪಟುಗಳು ಹಾಗೂ ಮಕ್ಕಳಿಗೆ ಜೋಗಿಮಟ್ಟಿ ವನ್ಯಜೀವಿಧಾಮ ಪರಿಸರದ ಮಹತ್ವದ ಕುರಿತು ತಿಳಿಸಿದ ಮುರುಗೇಶ್‌, ಚಾರಣ ಮಾಡುವ ಸ್ಥಳ ಹಾಗೂ ಅನುಭವಗಳು, ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಬಗ್ಗೆ ತಿಳಿಸಿಕೊಟ್ಟರು.

ಪರಿಸರದಲ್ಲಿ ಪ್ರಾಣಿಗಳ ಆಹಾರ ಸರಪಳಿ ಹೇಗಿರುತ್ತದೆ, ಇಲ್ಲಿರುವ ಪ್ರತಿ ಜೀವಿಯೂ ತನ್ನದೇ ಆದ ಮಹತ್ವದ ಕಾರ್ಯವನ್ನು ಹೊಂದಿರುತ್ತದೆ. ಪ್ರಾಣಿಗಳ ಆಹಾರ ಸರಪಳಿಯನ್ನು ಮನುಷ್ಯ ತನ್ನ ದುರಾಸೆಯಿಂದ ಧಕ್ಕೆ ಮಾಡಿ ಅರಣ್ಯವನ್ನು ಸಂಪೂರ್ಣ ನಾಶ ಮಾಡಿದರೆ ಅದು ಇನ್ನೊಂದು ಜೀವಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಹೀಗೆ ಪ್ರಾಣಿ ಪಕ್ಷಿಗಳು ವಿನಾಶ ಹೊಂದಿದರೆ ಪರಿಸರದಲ್ಲಿ ಏರುಪೇರು ಉಂಟಾಗಿ ಅದು ಮಾನವ ಸಂಕುಲವೇ ವಿನಾಶದ ಹಂತ ತಲುಪುತ್ತದೆ ಎಂದು ಎಚ್ಚರಿಸಿದರು.

ಜೋಗಿಮಟ್ಟಿ ವನ್ಯಧಾಮದಲ್ಲಿ ಕಂಡು ಬರುವ ವನ್ಯಜೀವಿಗಳು ಹಾಗೂ ಪಕ್ಷಿಗಳ ಕೀಟಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಒದಗಿಸಲಾಯಿತು. ಪರಿಸರ ಅಧ್ಯಯನ ಶಿಬಿರದಲ್ಲಿ 150 ಮಕ್ಕಳು ಭಾಗವಹಿಸಿದ್ದರು. ಸ್ಯಾಕ್‌ ಅಕಾಡೆಮಿಯ ಸತೀಶ್‌ ಕುಮಾರ್‌, ಕರಿಬಸಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next