Advertisement

ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟಿದೆ ಅವ್ಯವಹಾರ

04:08 PM Aug 27, 2019 | Suhan S |

ಸಾಗರ: ಸಹಕಾರ ಕ್ಷೇತ್ರದಲ್ಲಿಯೂ ವ್ಯಾಪಿಸುತ್ತಿರುವ ಅವ್ಯವಹಾರ ಹಾಗೂ ರಾಜಕೀಯ ಕುತಂತ್ರಗಳತ್ತ ಸಹಕಾರಿ ಧುರೀಣರು ಹೆಚ್ಚು ಎಚ್ಚರಿಕೆಯಿಂದ ಗಮನಿಸುವ ಕಾಲ ಬಂದಿದೆ ಎಂದು ಶಾಸಕ ಎಚ್.ಹಾಲಪ್ಪ ಪ್ರತಿಪಾದಿಸಿದರು.

Advertisement

ನಗರದ ಆರ್‌ಎಂಸಿ ರಸ್ತೆಯ ಎಪಿಎಂಸಿ ಆವರಣದಲ್ಲಿ ಮ್ಯಾಮ್ಕೋಸ್‌ನ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಅವರು ಷೇರುದಾರರ ಸಭೆ ಉದ್ಘಾಟಿಸಿ ಮಾತನಾಡಿ, ಸಾಗರದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸಿ ದೊಡ್ಡ ಮಟ್ಟದಲ್ಲಿ ಸಹಕಾರ ಚಳುವಳಿಯನ್ನು ನಿರ್ವಹಿಸುತ್ತಿರುವ ದೊಡ್ಡ ಸಮುದಾಯದ ಮುಂದೆ ನನ್ನ ಚಿಂತನೆಯನ್ನು ಮಂಡಿಸುತ್ತಿದ್ದೇನೆ. ಸಹಕಾರ ಕ್ಷೇತ್ರದ ಉದ್ಯೋಗಾವಕಾಶಗಳಲ್ಲಿ ಕೆಲಸ ಗಿಟ್ಟಿಸಲು 10, 15, 23 ಲಕ್ಷ ರೂ. ಕೊಟ್ಟ ಉದಾಹರಣೆಗಳಿವೆ. ಮಾಡಿದ ಕೆಲಸಕ್ಕೆ ಸಂಬಳ ಸಿಗುತ್ತದೆ. ಆದರೆ ಈ ರೀತಿ ಕೆಲಸ ಪಡೆಯಲು ಹಾಕಿದ ದುಡ್ಡಿಗೆ ನೌಕರ ಅದೇ ಸಂಸ್ಥೆಯಲ್ಲಿ ಕದಿಯದೇ ಇರುತ್ತಾನೆಯೇ ಎಂದು ಪ್ರಶ್ನಿಸಿದರು.

ಸಹಕಾರ ಕ್ಷೇತ್ರ ಸಂಪೂರ್ಣವಾಗಿ ರಾಜಕೀಯದ ಮೇಲಾಟಗಳ ಜಾಗವಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಮಾಡುವ ಕುತಂತ್ರಗಳು, ಮತದಾರ ಅರ್ಹತೆ ಕಸಿದುಕೊಳ್ಳುವ ಹುನ್ನಾರಗಳು ರಾಜಕೀಯದವರನ್ನು ಬೆರಗಾಗಿಸುವಷ್ಟು ವ್ಯಾಪಕವಾಗಿವೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡ ಮ್ಯಾಮ್ಕೋಸ್‌ ಬೆಳೆಗಾರರ ಹಿತ ಕಾಯುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅಡಕೆಗೆ ಸಮಸ್ಯೆ ಬಂದಾಗಲೆಲ್ಲಾ ಮ್ಯಾಮ್ಕೋಸ್‌ ಬೆಳೆಗಾರರ ರಕ್ಷಣೆಗೆ ನಿಂತಿದೆ. ಸಂದರ್ಭಾನುಸಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಡಕೆ ಬೆಳೆಗೆ ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಇಂದು ಶುಂಠಿಗೆ ಉತ್ತಮ ಬೆಲೆ ಬರಲು ಮಳೆ, ಕೊಳೆ ಕಾರಣವಲ್ಲ. ಮ್ಯಾಮ್ಕೋಸ್‌ ಒಳಗೊಂಡಂತೆ ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿದಾಗ ಚೀನ ದೇಶದಿಂದ ಶುಂಠಿ ಆಮದು ಆಗುತ್ತಿರುವುದನ್ನು ತಡೆಯುವಂತೆ ಮನವಿ ಮಾಡಲಾಗಿತ್ತು. ಕೇಂದ್ರ ಸರ್ಕಾರ ಮನವಿ ಪುರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಶುಂಠಿಗೆ ಉತ್ತಮ ಬೆಲೆ ಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮ್ಯಾಮ್ಕೋಸ್‌ ಉಪಾಧ್ಯಕ್ಷ ವೈ.ಎಸ್‌.ಸುಬ್ರಹ್ಮಣ್ಯ, ಮ್ಯಾಮ್ಕೋಸ್‌ಗೆ ನೂತನ ಕಟ್ಟಡ ಬೇಕು ಎನ್ನುವ ಬೆಳೆಗಾರರ ಕನಸು ನನಸಾಗಿದೆ. ಮ್ಯಾಮ್ಕೋಸ್‌ ಷೇರುದಾರರ ಹಿತ ಕಾಯುವ ಜತೆಗೆ ಸಮಸ್ತ ಅಡಿಕೆ ಬೆಳೆಗಾರರ ಏಳ್ಗೆಗಾಗಿ ನಿರಂತರ ಪ್ರಯತ್ನ ನಡೆಸಿಕೊಂಡು ಬರುತ್ತಿದೆ. ಅಡಿಕೆ ಬೆಳೆಗಾರರು ಮನೆ ಬಾಗಿಲಿನಲ್ಲಿ ಅಡಿಕೆ ಮಾರಾಟ ಮಾಡುವುದನ್ನು ಬಿಟ್ಟು, ಎಪಿಎಂಸಿಗೆ ಬಂದು ಅಡಿಕೆ ವ್ಯವಹಾರ ನಡೆಸಬೇಕು ಎಂದರು.

Advertisement

ಈಗಾಗಲೆ ಅಡಿಕೆ ಹಾನಿಕಾರಕ ಎನ್ನುವ ಅಂಶವನ್ನು ತೆಗೆದು ಹಾಕುವಂತೆ ಮ್ಯಾಮ್ಕೋಸ್‌ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಪ್ರಧಾನಿಗಳಿಗೆ ಸಹ ಅಡಿಕೆ ಔಷಧಿಯ ವಸ್ತುವಾಗಿದ್ದು, ಹಾನಿಕಾರಕ ಅಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಕೇಂದ್ರಕ್ಕೆ ನಿಯೋಗ ಹೋಗುವಾಗ ರಾಜ್ಯ ಸರ್ಕಾರ ಮತ್ತು ರಾಜ್ಯದ ಸಂಸದರು ಮ್ಯಾಮ್ಕೋಸ್‌ಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಶೀಘ್ರದಲ್ಲಿಯೇ ಅಡಿಕೆಗೆ ಬಂದಿರುವ ಕಳಂಕ ತೊಲಗಿಸಲು ಮ್ಯಾಮ್ಕೋಸ್‌ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ರವಿಕುಮಾರ್‌ ಎಚ್.ಎಂ., ಸಂಸ್ಥೆ ನಿರ್ದೇಶಕರಾದ ವಿರೂಪಾಕ್ಷಪ್ಪ ಜೆ., ಶಶಿಧರ ಹರತಾಳು, ವೆಂಕಪ್ಪಗೌಡ, ಮಾರ್ತಾಂಡ ಎಚ್.ಬಿ., ನರೇಂದ್ರ, ದೇವಾನಂದ ತರಿಕೆರೆ, ನಾಗೇಶ್‌ರಾವ್‌, ಚಂದ್ರಶೇಖರ್‌, ಜಯಶ್ರೀ ತೀರ್ಥಹಳ್ಳಿ, ಮಹೇಶ್‌, ಸುರೇಶ್ಚಂದ್ರ ಶೃಂಗೇರಿ, ಭೀಮರಾವ್‌, ಬಡಿಯಣ್ಣ ಇನ್ನಿತರರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಮತ್ತು ರಾಜೇಶ್ವರಿ ಪ್ರಾರ್ಥಿಸಿದರು. ಅಶೋಕ ನಾಯ್ಕ ಸ್ವಾಗತಿಸಿದರು. ಸೋಮಶೇಖರ ಇರುವಕ್ಕಿ ವಂದಿಸಿದರು. ಬಿ.ಎಚ್.ರಾಘವೇಂದ್ರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next