Advertisement

ವಿಶೇಷ ಮಕ್ಕಳಿಗೆ ಸಹಕಾರ, ಗೌರವ ಹೆಚ್ಚಾಗಲಿ

11:56 PM Jun 15, 2019 | Team Udayavani |

ಉಡುಪಿ: ವಿಶೇಷ ಮಕ್ಕಳಿಗೆ ಸಹಾನುಭೂತಿಗಿಂತಲೂ ಸಹಕಾರ, ಗೌರವ ಹೆಚ್ಚು ಹೆಚ್ಚು ದೊರೆಯಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

Advertisement

ಜೂ.15ರಂದು ಮಣಿಪಾಲದ ‘ಆಸರೆ’ ವಿಶೇಷ ಮಕ್ಕಳ ವಸತಿ ಶಾಲೆಯ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶೇಷ ಮಕ್ಕಳಿಗಾಗಿ ಕೆಲಸ ಮಾಡುವ ಸಂಸ್ಥೆಗಳು ಕೆಲವು ಮಾತ್ರ ಇವೆ. ಅಂಥ ಸಂಸ್ಥೆಗಳಿಗೆ ಪ್ರೋತ್ಸಾಹ ಹೆಚ್ಚಾಗಬೇಕು. ಮಣಿಪಾಲದ ‘ಮಾಹೆ’ಯು ‘ಆಸರೆ’ಗೆ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ. ವಿಶೇಷ ಮಕ್ಕಳ ಶಿಕ್ಷಕರು ಸಮಾಜಕ್ಕೆ ಭಾರೀ ಕೊಡುಗೆ ನೀಡುತ್ತಿದ್ದಾರೆ. ಅವರ ತಾಳ್ಮೆ, ಪರಿಶ್ರಮ ಅಪಾರ ಎಂದು ಶಾಸಕರು ಹೇಳಿದರು.

ಅನುದಾನ ಬಳಕೆಗೆ ಅವಕಾಶ

ಈ ಹಿಂದೆ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಶಾಸಕರ ಅನುದಾನದಲ್ಲಿ ವಿಶೇಷ ಮಕ್ಕಳಿಗಾಗಿ ಹಣವನ್ನು ಮೀಸಲಿಡಲು ಅವಕಾಶವಿರಲಿಲ್ಲ. ಆದರೆ ಇತ್ತೀಚೆಗೆ ಕೇಂದ್ರ ಸರಕಾರ ಕಾನೂನಿಗೆ ತಿದ್ದುಪಡಿ ಮಾಡಿದೆ. ಇದರಿಂದಾಗಿ ನಗರಸಭೆ ಸೇರಿದಂತೆ ಸ್ಥಳೀಯಾಡಳಿತಗಳ ನಿಧಿಯಲ್ಲಿ ಹಾಗೂ ಶಾಸಕರ ಅನುದಾನದಲ್ಲಿ ಶೇ.5ನ್ನು ವಿಶೇಷ ಮಕ್ಕಳಿಗಾಗಿ ಮೀಸಲಿಡಲು ಅವಕಾಶವಾಗಿದೆ. ಉಡುಪಿ ನಗರಸಭೆಯಿಂದ ಹಾಗೂ ತನ್ನ ಅನುದಾನದಿಂದ ಆಸರೆ ಸಂಸ್ಥೆಗೂ ಗರಿಷ್ಠ ಅನುದಾನ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

Advertisement

ಮುಖ್ಯವಾಹಿನಿಗೆ ತರುವ ಯತ್ನ

ಉದ್ಘಾಟನೆ ನೆರವೇರಿಸಿದ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ವಿಜಯ ಬಲ್ಲಾಳ್‌ ಅವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವಿಶೇಷ ಮಕ್ಕಳಿಗೆ ದೊರೆಯುತ್ತಿರುವ ಆದ್ಯತೆ, ಗೌರವ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಅವರನ್ನು ಕೂಡ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಮುಂದುವರಿಯಬೇಕು. ಇದಕ್ಕೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಸಿಂಡಿಕೇಟ್ ಬ್ಯಾಂಕ್‌ ಮಹಾಪ್ರಬಂಧಕ ಭಾಸ್ಕರ ಹಂದೆ ಅವರು ಮಾತನಾಡಿ ‘ಪಾಶ್ಚಾತ್ಯ ದೇಶಗಳಲ್ಲಿ ವಿಶೇಷ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯ, ಪ್ರೋತ್ಸಾಹ, ಆರೈಕೆಗಳು ನಮ್ಮ ದೇಶದಲ್ಲಿಯೂ ದೊರೆಯುವಂತಾಗಬೇಕು. ಆಸರೆಯ ಬೆಳವಣಿಗೆಗೆ ಅಗತ್ಯ ಆರ್ಥಿಕ ಸಹಾಯ ಒದಗಿಸಲು ಬ್ಯಾಂಕ್‌ ಬದ್ಧವಿದೆ’ ಎಂದು ಹೇಳಿದರು.

‘ಮಾಹೆ’ ಸಹ ಕುಲಾಧಿಪತಿ ಡಾ| ಎಚ್.ಎಸ್‌.ಬಲ್ಲಾಳ್‌ ಮಾತನಾಡಿ ‘ಮಾಹೆ ತನ್ನ ಶಿಕ್ಷಣ ಮತ್ತು ಆರೋಗ್ಯಸೇವೆಯ ಜತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೂಡ ನಡೆಸಿಕೊಂಡು ಬರುತ್ತಿದೆ. ಇದರ ಭಾಗವಾಗಿ ಆಸರೆಯನ್ನು ಬೆಳೆಸಲಾಗುತ್ತಿದೆ. ಸಾಮಾಜಿಕ ಸೇವಾ ಕಾರ್ಯಗಳು ಮುಂದುವರಿಯಲಿವೆ’ ಎಂದು ಹೇಳಿದರು.

ಉಜ್ವಲ್ ಡೆವಲಪರ್ನ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು. ಅರ್ಚನಾ ಟ್ರಸ್ಟ್‌ನ ಟ್ರಸ್ಟಿ ರಂಗ ಪೈ ಸ್ವಾಗತಿಸಿದರು. ‘ಆಸರೆ’ ಅಧ್ಯಕ್ಷ ಜೈ ವಿಟuಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಪದ್ಮರಾಜ ಹೆಗ್ಡೆ ಗಣ್ಯರ ಸಂದೇಶ ವಾಚಿಸಿದರು. ಶಾಂತಿ ಹರೀಶ್‌ ಸಮ್ಮಾನ ಕಾರ್ಯಕ್ರಮ ನಿರ್ವಹಿಸಿದರು. ‘ಆಸರೆ’ ಸಂಚಾಲಕ ಕರ್ನಲ್ ಪ್ರಕಾಶ್‌ಚಂದ್ರ ವಂದಿಸಿದರು. ವಿಶೇಷ ಮಕ್ಕಳ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬಂದಿ, ಸಾಧನೆಗೈದ ವಿಶೇಷ ಮಕ್ಕಳನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next