ಬಳ್ಳಾರಿ: ವಾಯುಮಾಲಿನ್ಯ ನಿಯಂತ್ರಣಕ್ಕೆ ವಾಹನ ಮಾಲೀಕರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್. ಶೇಖರ್ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್-19 ಹಿನ್ನೆಲೆ 3 ತಿಂಗಳ ಕಾಲ ದೇಶಾದ್ಯಂತ ಲಾಕ್‌ಡೌನ್ ವಿ ಧಿಸಿದ್ದರಿಂದ ನೈಸರ್ಗಿಕವಾಗಿ ಉತ್ತಮವಾತಾವರಣ ಸೃಷ್ಟಿಯಾಗಿತ್ತು. ಆದರೆ, ನಂತರದ ದಿನಗಳಲ್ಲಿಯೂ ಇದೇ ರೀತಿಯ ಉತ್ತಮ ಗಾಳಿ ನಮಗೆ ಲಭ್ಯವಾಗಬೇಕಿದ್ದಲ್ಲಿ ಜನರ ಸಹಕಾರ ಅಗತ್ಯವಾಗಿದೆ ಎಂದರು.
ಏರ್ ಇಂಡಿಕ್ಸ್ ಅಂಕಪಟ್ಟಿಯಲ್ಲಿ ನಮ್ಮ ದೇಶವು 21ನೇ ಸ್ಥಾನದಲ್ಲಿದೆ. ಕೇವಲ ವಾಯು ಮಾಲಿನ್ಯ ಮಾತ್ರವಲ್ಲ, ಭೂಮಿ ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದ ವಾತಾವರಣ ಕೆಡುತ್ತಿದ್ದು,ವಾಹನಗಳು ಹೊರಗಡೆ ಬಿಡುವ ಹೊಗೆಯಲ್ಲಿ ವಿಷಾನಿಲಗಳಿರುತ್ತವೆ. ಸಾರ್ವಜನಿಕರ ಆರೋಗ್ಯ ಕಾಪಾಡಲು ತಮ್ಮ ವಾಹನಗಳನ್ನು ಪ್ರತಿ ಮಾಹೆಯಲ್ಲಿ ತಪಾಸಣೆ ಮಾಡಿಸಿಕೊಂಡು ಸುಸ್ಥಿತಿಯಲ್ಲಿಡಬೇಕು. ವಾಹನ ಮಾಲೀಕರು ಮತ್ತು ಸಾರ್ವಜನಿಕರು ಪರಿಸರ ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಕರಿಸಬೇಕು ಎಂದು ಕೋರಿದರು.
ವಾಯುಮಾಲಿನ್ಯ ನಿಯಂತ್ರಣಾಧಿಕಾರಿ ಸೋಮಶೇಖರ ಮಾತನಾಡಿ, ಪ್ರತಿ ವರ್ಷ ವಾಯುಮಾಲಿನ್ಯದಿಂದ ಹೆಚ್ಚು ಜನ ಸಾಯುತ್ತಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ. ಈ ಚಳಿಗಾಲ ಸಮಯದಲ್ಲಿ ಹೆಚ್ಚು ಮಂಜು ಆವರಿಸಿಮುಂದೆ ಬರುವ ವಾಹನಗಳು ವಾಹನ ಚಾಲಕರಿಗೆ ಕಾಣದೇ ಹೆಚ್ಚು ಅಪಘಾತಕ್ಕೆಕ್ಕೀಡಾಗುತ್ತಿವೆ. ಈ ನಿಟ್ಟಿನಲ್ಲಿ ತಮ್ಮ ವಾಹನವನ್ನು ತಿಂಗಳಿಗೊಮ್ಮೆ ತಪಾಸಣೆ ನಡೆಸಿ ಉತ್ತಮ ಸುಸ್ಥಿತಿಯಲ್ಲಿಡಬೇಕು ಎಂದರು.
ಸಾರಿಗೆ ಇಲಾಖೆಯ ಹಿರಿಯ ಮೋಟರ್ ನಿರೀಕ್ಷಕ ಪಿ.ವೆಂಕಟರಮಣ ರೆಡ್ಡಿ ಮಾತನಾಡಿ, ಪೆಟ್ರೋಲ್, ಡೀಸೆಲ್ ಇಂಧನದಿಂದ ನೈಸರ್ಗಿಕಹಾನಿ ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರವು ನೈಸರ್ಗಿಕ ಅನಿಲ ಬಳಸುವಂತೆ ಸೂಚಿಸಿದೆ. ನೈಸರ್ಗಿಕಅನಿಲದಿಂದ ವಾಯುಮಾಲಿನ್ಯ ಆಗುವುದಿಲ್ಲ. ತಮ್ಮ ವಾಹನಗಳಿಗೆ ಕಲಬೆರಿಕೆ ಇಂಧನ, ಕಳಪೆ ಆಯಿಲ್ ಬಳಸಬೇಡಿ. ಇದರಿಂದ ಹೆಚ್ಚು ಹೊಗೆ ಉತ್ಪತಿಯಾಗಿ ವಾಯುಮಾಲಿನ್ಯ ಉಂಟಾಗುತ್ತದೆ ಎಂದು ಹೇಳಿದರು.
ಪ್ರತಿ 6 ತಿಂಗಳಿಗೊಮ್ಮೆ ವಾಯುಮಾಲಿನ್ಯ ತಪಾಸಣೆಗೆ ಒಳಪಡಿಸಿ ವಾಯುಮಾಲಿನ್ಯ ನಿಯಂತ್ರಣದಲ್ಲಿದೆ ಎಂಬ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು. ಈ ಸಂದರ್ಭದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಿತ್ತಿಪತ್ರವನ್ನು
ಬಿಡುಗಡೆ ಮಾಡಿದರು. ಸಾರಿಗೆ ಇಲಾಖೆ ಅಧೀಕ್ಷಕ ಗುಡಿಮನಿ ಸ್ವಾಗತಿಸಿದರು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ ಗಿರಿ ಅವರು ವಂದಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧೀಕ್ಷಕ ವಿರೇಶ್, ಮಂಜುನಾಥ, ಇಲಾಖೆಯ ಸಿಬ್ಬಂದಿ ಸೇರಿದಂತೆ ವಾಹನ ಮಾಲೀಕರು, ಸಾರ್ವಜನಿಕರು ಇದ್ದರು.