Advertisement

ಕೂಳೂರು: ಸರ್ವಿಸ್‌ ರಸ್ತೆ ಹುಡುಕಿ ಕೊಡಿ!

03:11 PM Sep 26, 2017 | |

ಕೂಳೂರು : ಮಂಗಳೂರು ಉಡುಪಿ ನಡುವಿನ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 66 ಮಳೆಗಾಲದ ಆರಂಭದಲ್ಲೇ ಹೊಂಡ ಬಿದ್ದರೂ ಇದುವರೆಗೂ ದುರಸ್ತಿ ಆರಂಭವಾಗಿಲ್ಲ. ಇತ್ತ ಕೂಳೂರು ಕಾವೂರು ಸಂಪರ್ಕ ಕೊಂಡಿಯಂತಿರುವ ಸರ್ವಿಸ್‌ ರಸ್ತೆ ಸಂಪೂರ್ಣ ಮಾಯವಾಗಿದೆ.

Advertisement

ಡಾಮರು ಕಾಣದೆ ಮಣ್ಣಿನ ರಸ್ತೆಯಂತೆ ಭಾಸವಾಗುತ್ತಿದೆ. ರಸ್ತೆ ನಿರ್ವಹಣೆ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಬೇಕಾಗಿರುವುದರಿಂದ ಹೆಜಮಾಡಿ ಬಳಿಕದ ರಾ.ಹೆ. ನಿರ್ವಹಣೆಗೂ ಇತ್ತ ಹೆದ್ದಾರಿ ಇಲಾಖೆ ನಿರ್ಮಿಸಿದ ರಸ್ತೆಗಳ ನಿರ್ವಹಣೆಗೂ ಅಜಗಜಾಂತರ ವ್ಯತ್ಯಾಸ ಎದ್ದು ಕಾಣುತ್ತಿದೆ.

ಕೂಳೂರು -ಕಾವೂರು ತಿರುವಲ್ಲೇ ಗುಂಡಿ!
ಈ ಹಿಂದೆ ಹೆದ್ದಾರಿಯಿಂದ ಕಾವೂರು ಕಡೆ ಹೋಗುವ ರಸ್ತೆಯನ್ನು ಕಾಂಕ್ರೀಟ್‌ ಹಾಕಲಾಗಿತ್ತು. ಆದರೆ ಒಳಚರಂಡಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಾರಣ ಈ ವೃತ್ತದಲ್ಲಿ ಮಳೆಗಾಲದಲ್ಲಿ ಕೆರೆಯೇ ನಿರ್ಮಾಣವಾಗುತ್ತಿತ್ತು. ಈ ಸಮಸ್ಯೆ ನಿವಾರಿಸ‌ಲು ಕಾಂಕ್ರೀಟ್‌ ಅಗೆದು ಗುಂಡಿ ತೋಡಲಾಗಿದ್ದು, ಒಂದು ವರ್ಷದಿಂದ ಇದುವರೆಗೂ ಸರಿಪಡಿಸಲಾಗಿಲ್ಲ. ಬೃಹತ್‌ ಗುಂಡಿಗೆ ಸುತ್ತಲೂ ಬ್ಯಾರಿಕೇಡ್‌ ಅಳವಡಿಸಲಾಗಿದ್ದು, ತಾತ್ಕಾಲಿಕ ದುರಸ್ತಿ ಇದೇ ಆಗಿದೆ!

ಕೂಳೂರು ಕಾವೂರು ವೃತ್ತ ಸುತ್ತಮುತ್ತ ಸರ್ವಿಸ್‌ ರಸ್ತೆಯ ಜಾಗವಿದ್ದು, ಕೇಂದ್ರದ ಆಡಳಿತಕ್ಕೊಳಪಟ್ಟ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಇದನ್ನು ದುರಸ್ತಿ ಪಡಿಸಲು ಮಹಾನಗರ ಪಾಲಿಕೆಗೆ ಯಾವುದೇ ಅಧಿಕಾರವಿಲ್ಲ. ಇದರ ದುರಸ್ತಿಗೆ ಹೆದ್ದಾರಿ ಇಲಾಖೆಯನ್ನೇ ಅವಲಂಬಿಸಬೇಕಾಗಿದೆ.

ಪರ್ಯಾಯ ಮಾರ್ಗವೂ ಇಲ್ಲ
ಕಾವೂರು, ಕೂಳೂರು ಮೂಲಕ ಕೊಟ್ಟಾರ ಚೌಕಿ ತಲುಪುವ ಸರ್ವಿಸ್‌ ರಸ್ತೆ ನೋಡಿದರೆ ಯಾವುದೋ ಕುಗ್ರಾಮದ ರಸ್ತೆಯಲ್ಲಿ ಬಸ್ಸುಗಳು ಸಂಚರಿಸುವಂತೆ ಭಾಸವಾಗುತ್ತದೆ. ನೃತ್ಯ ಮಾಡುತ್ತಾ ಬಸ್ಸುಗಳು ಸಂಚರಿಸಿದರೆ ದ್ವಿಚಕ್ರ ಸವಾರರು ಹೊಂಡ ತಪ್ಪಿಸಲು ಹರ ಸಾಹಸ ಪಡುತ್ತಾರೆ. ನಿತ್ಯ ಈ ರಸ್ತೆಯಲ್ಲಿ 40ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸಿದರೆ ಸಾವಿರಾರು ಖಾಸಗಿ ಬೈಕ್‌, ಕಾರುಗಳು ಸಂಚರಿಸುತ್ತವೆ. ಒಂದೆಡೆ ಮೇಲ್ಸೇತುವೆ ಇರುವುದರಿಂದ ಪರ್ಯಾಯ ಮಾರ್ಗದಲ್ಲೂ ಸಂಚಾರಕ್ಕೆ ಇಲ್ಲಿ ರಸ್ತೆಯಿಲ್ಲ.

Advertisement

10 ಲಕ್ಷ ರೂ. ನಷ್ಟ
ಕೂಳೂರು ಮಂಗಳೂರಿನಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿದೆ. ವಿಮಾನ ನಿಲ್ದಾಣ ರಸ್ತೆಯೂ ಆಗಿದೆ. ಹೀಗಾಗಿ ಈ ಪ್ರಮುಖ ಭಾಗವನ್ನು ಹೆದ್ದಾರಿ ಇಲಾಖೆ ನಿರ್ಲಕ್ಷ್ಯ ಮಾಡಿದೆ. ಒಂದೆರಡು ವರ್ಷಗಳಿಂದ ಸರ್ವಿಸ್‌ ರಸ್ತೆಯನ್ನು ದುರಸ್ತಿ ಮಾಡದೆ ಡಾಮರನ್ನು ಹುಡುಕುವಂತಾಗಿದೆ. ಮಂಗಳೂರು ಪಾಲಿಕೆಗೆ ಕಾವೂರು ತಿರುವು ವೃತ್ತವನ್ನು ಬಿಟ್ಟು ಕೊಡಿ ನಾವು ದುರಸ್ತಿ ಮಾಡುತ್ತೇವೆ ಎಂದು ಹೇಳಿದರೂ ಬಿಟ್ಟು ಕೊಡುತ್ತಿಲ್ಲ. ಸಾರ್ವಜನಿಕರು ಪಾಲಿಕೆಗೆ, ಪಾಲಿಕೆ ಸದಸ್ಯರಿಗೆ ಹಿಡಿ ಶಾಪ ಹಾಕುವಂತೆ ಆಗಿದೆ. ಕೂಳೂರು ಚರ್ಚ್‌ನ ಕೆಳಭಾಗದಲ್ಲಿ ಅಯ್ಯಪ್ಪ ಗುಡಿ ಮುಂಭಾಗ ನಿರ್ಮಿಸಿದ ಒಳಚರಂಡಿ ವ್ಯವಸ್ಥೆಯೂ ವಿಫಲವಾಗಿ ಸುಮಾರು 10 ಲಕ್ಷ ರೂ. ನಷ್ಟವಾಗಿದೆ.
ದಯಾನಂದ ಶೆಟ್ಟಿ, ಪಾಲಿಕೆ ಸದಸ್ಯ,ಪಂಜಿಮೊಗರು-ಕೂಳೂರು ವಾರ್ಡ್‌

ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next