Advertisement

ಕೂಲ್‌ ಹೌಸ್‌ ಹವಾ ಹವಾಯಿ…

02:15 PM Mar 12, 2018 | Harsha Rao |

ಮನೆಯೊಳಗೆ ಸೂಕ್ತ ತೇವಾಂಶ ಉಳಿಯಬೇಕಾದರೆ ಹೊರಗಿನ ಶಾಖ ಮನೆಯನ್ನು ಹೆಚ್ಚು ತಟ್ಟದಂತೆ ಮಾಡಬೇಕು. ದೈನಂದಿನ ತಾಪಮಾನದ ಏರುಪೇರು ತೇವಾಂಶ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ, ಗೋಡೆ ಹಾಗೂ ಸೂರು ಹೆಚ್ಚು ಕಾವೇರದಂತೆ ನೋಡಿಕೊಳ್ಳಬೇಕು.

Advertisement

ಸರಿಯಾಗಿ ಮಳೆಬಂದು ತಿಂಗಳುಗಳೇ ಆದವು. ನೆಲ ಕಾದು ಕಾವಲಿಯಂತಾಗಿದೆ. ಬೇಸಿಗೆಗೂ ಮುನ್ನವೇ ಮಧ್ಯಾಹ್ನದ ತಾಪಮಾನ 35 ಡಿಗ್ರಿ ಸೆಲಿÒಯಸ್‌ ತಲುಪಿದೆ. ಹಾಗಾಗಿ ಬಾಯಾರಿಕೆಯೊಂದಿಗೆ ಧೂಳು ಹೆಚ್ಚಾಗಿರುವ ಅನುಭವ ಉಂಟಾಗಿದೆ. ಹೀಗಾಗಲು ಮುಖ್ಯ ಕಾರಣ, ರಿಲೇಟಿವ್‌ ಹ್ಯುಮಿಡಿಟಿಗೆ ಸರಿ ಹೊಂದುವ ತೇವಾಂಶ ವಾತಾವರಣದಲ್ಲಿ ಇರದಿರುವುದೇ ಆಗಿದೆ. ತಾಪಮಾನ ಕಡಿಮೆ ಇದ್ದಾಗ ಸ್ವಲ್ಪ ಕಡಿಮೆ ತೇವಾಂಶ ಇದ್ದರೂ ಪರವಾಗಿಲ್ಲ (ಆದರೆ ತೀರಾ ಕಡಿಮೆ ಇರಬಾರದು!) ಆದರೆ ತಾಪ ಹೆಚ್ಚಾದಂತೆ ಅದಕ್ಕೆ ಸರಿಹೊಂದುವಂತೆ ತೇವಾಂಶವೂ ಸ್ವಲ್ಪ ಹೆಚ್ಚಾಗಿರಬೇಕು ಅಂದರೆ ಸರಿಸುಮಾರು ಶೇಕಡ 50ರ ಆಸುಪಾಸಿನಲ್ಲಿ ಇರಬೇಕು.

ಕಡಿಮೆ ಆದರೆ ನಮಗೆ ಒಣ ಹವೆಯ ಅನುಭವ ಹೆಚ್ಚಾಗುತ್ತದೆ. ನಮ್ಮ ತುಟಿ, ಚರ್ಮ, ಬೇಗ ಒಣಗುವುದರ ಜೊತೆಗೆ ಮನೆಯೊಳಗೆ ಇದ್ದಾಗಲೂ ತುದಿಯ ಚರ್ಮ ಪೇಂಟ್‌ ಪುಡಿಯಂತೆ ಉದುರುವುದು, ಬಿರುಕು ಬಿಡುವುದು ಇತ್ಯಾದಿ ಆಗುತ್ತದೆ. ಸೆಖೆಗೆ ಫ್ಯಾನ್‌ ಹಾಕಿದರೆ, ಧೂಳು ಎಲ್ಲೆಡೆ ಹಾರಾಡುತ್ತದೆ.

ದಿನದ ಉಷ್ಣಾಂಶದಲ್ಲಿ ಏರುಪೇರು
ರಾತ್ರಿ ಚಳಿಯ ಅನುಭವ ಆದರೆ, ಮಧ್ಯಾಹ್ನ ಸೆಖೆ. ಅಂದರೆ ದೈನಂದಿನ ತಾಪಮಾನದ ವೈಪರೀತ್ಯ ಹದಿನೈದು ಇಪ್ಪತ್ತು ಡಿಗ್ರಿ ಗಿಂತ ಹೆಚ್ಚಿದ್ದು ಅದಕ್ಕೆ ತಕ್ಕಂತೆ ತೇವಾಂಶ ಇರುವುದಿಲ್ಲ. ನಗರ ಪ್ರದೇಶದಲ್ಲಿ ಇದ್ದ ಬದ್ದ ಮರಗಳನ್ನೆಲ್ಲ ಕಡಿದಿರುವುದರಿಂದ ಗಿಡ ಮರಗಳು ಹೊರಸೂಸುವ ತೇವಾಂಶವೂ ಕಡಿಮೆಯಾಗಿದೆ. ಜೊತೆಗೆ, ಈ ಅವಧಿಯಲ್ಲಿ ಕೆಲ ಜಾತಿಯ ಮರಗಳು ತಮ್ಮ ಎಲೆಗಳನ್ನು ಉದುರಿಸುವ ಕಾರ್ಯವೂ ಜರುಗುವುದರಿಂದ, ಈ ಮೊದಲಿನ ಋತುವಿನಲ್ಲಿದ್ದ ಸಮತೋಲನ ಇರುವುದಿಲ್ಲ. ಹಾಗಾಗಿ ನಮಗೆ ಮನೆಯ ಹೊರಗಿನ ವಾತಾವರಣದ ಏರುಪೇರುಗಳನ್ನು ಕಡಿಮೆಗೊಳಿಸುವುದು ಕಷ್ಟವಾದರೂ, ಒಳಾಂಗಣದ ನಿರ್ವಹಣೆಯತ್ತ ಲಕ್ಷ್ಯಕೊಡಬಹುದು.

ರಿಲೇಟಿವ್‌ ಹ್ಯುಮಿಡಿಟಿ ನಿರ್ವಹಣೆ
ಮನೆಯೊಳಗೆ ಸೂಕ್ತ ತೇವಾಂಶ ಉಳಿಯಬೇಕಾದರೆ ಹೊರಗಿನ ಶಾಖ ಮನೆಯನ್ನು ಹೆಚ್ಚು ತಟ್ಟದಂತೆ ಮಾಡಬೇಕು. ದೈನಂದಿನ ತಾಪಮಾನದ ಏರುಪೇರು ತೇವಾಂಶ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ, ಗೋಡೆ ಹಾಗೂ ಸೂರು ಹೆಚ್ಚು ಕಾವೇರದಂತೆ ನೋಡಿಕೊಳ್ಳಬೇಕು. ಕಾಂಕ್ರಿಟ್‌ ಬ್ಲಾಕ್‌ ಗೋಡೆಗೆ ಹೋಲಿಸಿದರೆ ಇಟ್ಟಿಗೆ ಹಾಗೂ ಜೆಂಬಿಟ್ಟಿಗೆ – ಲ್ಯಾಟರೈಟ್‌ ಕಲ್ಲುಗಳಿಂದ ಕಟ್ಟಿದ ಗೋಡೆಗಳು ಬೇಗನೆ ಬಿಸಿಯೇರುವುದಿಲ್ಲ. ಹೀಗಾಗಲು ಮುಖ್ಯ ಕಾರಣ ಅವುಗಳಲ್ಲಿ ಇರುವ ಸೂಕ್ಷ್ಮ ರಂಧ್ರಗಳೇ ಆಗಿರುತ್ತವೆ. ಇವು ಉತ್ತಮ ಶಾಖನಿರೋಧಕ ಗುಣ ಹೊಂದಿರುವುದರಿಂದ ವಾತಾವರಣದ ಏರುಪೇರುಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲವು. ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳು ಅನಿವಾರ್ಯವಾಗಿದ್ದಲ್ಲಿ ಅವುಗಳ ನಿಮಾರ್ಣದ ಹಂತದಲ್ಲೇ ಸೂರ್ಯನ ಕಿರಣಗಳ ಕೋನಗಳನ್ನು ಗಮನಿಸಿ ಸೂಕ್ತ ಸಜ್ಜಾ ಹಾಗೂ ಕಾನೀìಸ್‌ ನೀಡಿ, ಗೋಡೆಗಳು ಈ ಅವಧಿಯಲ್ಲಿ ಹೆಚ್ಚು ಬಿಸಿಯೇರದಂತೆ ಮಾಡಬಹುದು.

Advertisement

ಹವಾ ನಿಯಂತ್ರಣ
ಹಿಂಗಾರಿನ ಅವಧಿಯಲ್ಲಿ ಒಣ ಹಾಗೂ ಶೀತಗಾಳಿ ಈಶಾನ್ಯದಿಂದ ಬೀಸುತ್ತಿರುತ್ತದೆ ಹಾಗಾಗಿ ಇದೇನೂ ಆರೋಗ್ಯಕರವಾದ ಗಾಳಿಯಲ್ಲ. ಆದಷ್ಟೂ ನಾವು ಮನೆಯೊಳಗೆ ಈ ಗಾಳಿಯನ್ನು ನೇರವಾಗಿ ಬಿಟ್ಟುಕೊಳ್ಳಬಾರದು. ಆದರೆ ಮನೆಗೆ ತಾಜಾಗಾಳಿಯ ಪ್ರವೇಶ ಅನಿವಾರ್ಯ ಆದಕಾರಣ, ಹಿಂಗಾರಿನಲ್ಲಿ ಗಾಳಿಯ ಒತ್ತಡ ಕಡಿಮೆ ಅಂದರೆ ನೆಗೆಟೀವ್‌ ಪ್ರಶರ್‌ ಇರುವ ದಿಕ್ಕು – ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನ ಕಿಟಕಿಗಳನ್ನು ತೆರೆದಿಟ್ಟರೆ, ಮನೆಯೊಳಗೆ ಧೂಳು ಪ್ರವೇಶಿಸದೆ ನಿಶ್ವಾಸ ಗಾಳಿ ಹೊರಗೆ ಸೆಳೆಯಲ್‌ಪಡುತ್ತದೆ. ಮನೆಯ ವಿನ್ಯಾಸ ಮಾಡಬೇಕಾದರೆ ನಾವು ನಾನಾ ಕಾಲದಲ್ಲಿ ವಿರುದ್ಧ ದಿಕ್ಕಿನಿಂದ ಬೀಸುವ ಗಾಳಿಯ ಗುಣಾವಗುಣಗಳನ್ನು ಗಮನಿಸಿ ಕಿಟಕಿಗಳನ್ನು ಇಡಬೇಕಾಗುತ್ತದೆ. ಬೇಸಿಗೆಯಲ್ಲಿ ತಂಗಾಳಿ ಬೀಸುವ ದಿಕ್ಕು ಪಶ್ಚಿಮ ಹಾಗೂ ದಕ್ಷಿಣ ಆಗಿರುತ್ತದೆ. ಅದೇ ಚಳಿ ಹಾಗೂ ಬೇಸಿಗೆಯಲ್ಲಿ ಗಾಳಿ ಬೀಸುವುದು ಈಶಾನ್ಯದಿಂದ  ಹಾಗಾಗಿ ಈ ದಿಕ್ಕಿನಲ್ಲಿ ಹೆಚ್ಚಿನ ಕಿಟಕಿಗಳನ್ನು ಇಡುವ ಅಗತ್ಯವಿಲ್ಲ. ಇಟ್ಟರೂ ಅದನ್ನು ದಿನದ ಹೊತ್ತು ಬೆಳಕು ಪೂರೈಸಲು ಮಾತ್ರ ಬಳಸಿದರೆ ಅನುಕೂಲಕರ.

ಸೂರಿನ ನಿರ್ವಹಣೆ
ಮನೆಯನ್ನು ತಾಪಮಾನ ಪ್ರವೇಶಿಸುವ ಪ್ರಮುಖ ಮಾರ್ಗ ಸೂರೇ ಆಗಿರುತ್ತದೆ. ಸೂರ್ಯನ ಕಿರಣಗಳು ಅತಿ ತೀಕ್ಷ್ಣವಾಗಿ ಪ್ರಹಾರವನ್ನು ಮಾಡುವುದು ಈ ಭಾಗವನ್ನೇ. ಹಾಗಾಗಿ ತಾರಸಿ ಹೆಚ್ಚು ಬಿಸಿಯೇರದಂತೆ ಮಾಡಬೇಕಾಗುತ್ತದೆ. ಮಾಮೂಲಿ ಆರ್‌ಸಿಸಿ ಸೂರಿನ ಮೇಲೆ ನೀರು ಸೋರದಂತೆ ಹಾಕುವ ಕಾಂಕ್ರಿಟ್‌ ಇಳಿಜಾರು ಪದರ ಶಾಖನಿರೋಧಕ ಗುಣ ಹೊಂದಿರುವುದಿಲ್ಲ. ಆದುದರಿಂದ ಹೆಚ್ಚುವರಿಯಾಗಿ ಜೇಡಿಮಣ್ಣಿನ ಬಿಲ್ಲೆಗಳನ್ನು- ಕ್ಲೇ ಟೈಲ್ಸ್‌ಗಳ ಒಂದು ಪದರವನ್ನು ಹಾಕಿದರೆ, ಹೆಚ್ಚುವರಿಯಾಗಿ ನೀರುನಿರೋಧಕ ಗುಣ ಒದಗುವುದರ ಜೊತೆಗೆ ಉತ್ತಮ ಶಾಖನಿರೋಧಕ ಅಂಶವೂ ಸೇರ್ಪಡೆಯಾಗುತ್ತದೆ.  ಈ ಪದರವನ್ನು ಹಾಕುವಾಗ ಯಥಾಪ್ರಕಾರ ನೀರು ಸುಲಭವಾಗಿ ಹರಿದುಹೋಗುವಂತೆ ಮಾಡಲು ಕಡೇಪಕ್ಷ ಐದು ಅಡಿಗೆ ಒಂದು ಇಂಚಿನಷ್ಟು ಇಳಿಜಾರು ನೀಡಲು ಮರೆಯಬಾರದು.

ಪೇಂಟ್‌ ಪಾಲೀಶ್‌ ಕಿತ್ತುಬರುತ್ತಿದ್ದರೆ…
ತೇವಾಂಶ ಹಾಗೂ ಶಾಖದಲ್ಲಿನ ಏರುಪೇರು ಮುಖ್ಯವಾಗಿ ಬಣ್ಣಗಳು ಹಪ್ಪಳದಂತೆ ಏಳಲು ಮತ್ತು ಧೂಳಿನಂತೆ ಉದುರಲು ಮುಖ್ಯ ಕಾರಣವಾಗಿರುತ್ತದೆ. ಸೂರಿನ ಕೆಳಭಾಗದಲ್ಲಿ ಇದರ ಪರಿಣಾಮವಾಗಿ ಪೇಂಟ್‌ ಕಿತ್ತುಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಪದೇ ಪದೇ ಬಣ್ಣ ಹೊಸದಾಗಿ ಬಳಿಯುವುದರ ಬದಲು ಬಣ್ಣ ಹೆಚ್ಚು ಮಾಸುವುದು ಹಾಗೂ ಕಿತ್ತುಬರಲು ಏನು ಕಾರಣ ಎಂದು ಪರಿಶೀಲಿಸಿ ಮುಂದುವರಿಯುವುದು ಸೂಕ್ತ. ವಾತಾವರಣದ ವೈಪರೀತ್ಯದಿಂದ ಹೀಗಾಗುತ್ತಿದ್ದರೆ, ಅದರ ಪರಿಹಾರದತ್ತ ಗಮನ ಹರಿಸಬೇಕು. ಬೇಸಿಗೆಯಲ್ಲಿ ಗೋಡೆಗಳು ಹಾಗೂ ಸೂರು ಹೆಚ್ಚು ತಾಪವೇರದಂತೆ ತಡೆಯುವಹಾಗೆ ಮನೆಯ ವಿನ್ಯಾಸ ಮಾಡುವಂತೆಯೇ ಶೀತಗಾಲದಲ್ಲಿ ಥಂಡಿ ಹೊಡೆಯದಂತೆಯೂ ನೋಡಿಕೊಳ್ಳಬೇಕು.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಲಮಾನಕ್ಕೆ ತಾಪಮಾನ ಹಾಗೂ ತೇವಾಂಶ ಬದಲಾಗುತ್ತಿರುತ್ತದೆ. ಆದರೆ ನಮ್ಮ ದೇಹ  ಮತ್ತು  ಅದನ್ನು ರಕ್ಷಿಸುವ ಮನೆಯ ಒಳಾಂಗಣ ಹೆಚ್ಚು ವೈಪರಿತ್ಯವನ್ನು ಎದುರಿಸದಂತೆ ಮಾಡುವುದು ನಮಗೂ ಮನೆಗೂ ಆರೋಗ್ಯಕರ.

ಹೆಚ್ಚಿನ ಮಾತಿಗೆ : 98441 32826

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next