Advertisement
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಆಯೋಜಿಸಿದ್ದ ಕಾಫಿ ಸಮ್ಮೇಳನ ಹಾಗೂ ಕಾಫಿ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಶಾಸಕ ಸಿ.ಟಿ.ರವಿ ಮಾತನಾಡಿ, ಕಾಫಿ ಬೆಳೆಗಾರರು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಪ್ರಯತ್ನಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಕ್ಕುತ್ತದೆ. ಕಾಫಿ ಬರೀ ಉದ್ಯಮವಲ್ಲ. ಅದೊಂದು ಸಂಸ್ಕೃತಿ. ಈಗಾಗಲೇ ನಾವು ಅವಸಾನದ ಅಂಚಿನಲ್ಲಿದ್ದೇವೆ. ಸಮಸ್ಯೆಗಳ ಬಗ್ಗೆ ವಾಸ್ತವಿಕ ನೆಲೆಯಲ್ಲಿ ಚಿಂತಿಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಕಾಫಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಸಲು ತಾಂತ್ರಿಕ ತೊಡಕಿದೆ. ಪಡಿತರ ಪದಾರ್ಥಗಳ ಪಟ್ಟಿಯಲ್ಲಿ ಕಾಫಿ ಇಲ್ಲದ ಕಾರಣ ಕನಿಷ್ಠ ಬೆಂಬಲ ಬೆಲೆ ನೀಡಲು ಆಗುತ್ತಿಲ್ಲ. ಈ ತಾಂತ್ರಿಕ ತೊಡಕು ಸರಿಪಡಿಸಬೇಕಿದೆ. ಕಾಫಿ ಸಮಸ್ಯೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ತಿಂಗಳೊಳಗೆ ವರದಿ ತಯಾರಿಸಿ ಸಲ್ಲಿಸಬೇಕು. ಬಜೆಟ್ ಪೂರ್ವದಲ್ಲಿ ವರದಿ ನೀಡಿದರೆ ಬಜೆಟ್ ಅಧಿವೇಶನದಲ್ಲಿ ಒಂದಷ್ಟು ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ಎಲ್ಲ ಪಕ್ಷಗಳು ಚುನಾವಣೆ ತಯಾರಿಯಲ್ಲಿದ್ದು, ಪ್ರಣಾಳಿಕೆಯಲ್ಲಿ ಕಾಫಿ ಸಮಸ್ಯೆ ನಿವಾರಣೆಯ ವಿಷಯವನ್ನೂ ಸೇರಿಸಿ ಪಕ್ಷಗಳನ್ನು ಕಮಿಟ್ ಮಾಡಿಸಬಹುದು ಎಂದರು.
ಕಾಫಿ ಬೆಳೆಗಾರರು 15-20 ಲಕ್ಷ ಕಾರ್ಮಿಕರಿಗೆ ಉದ್ಯೋಗ ಕೊಟ್ಟಿದ್ದಾರೆ. ಕಾಫಿ ಉದ್ಯಮ ನಾಶವಾದರೆ ಇಷ್ಟು ದೊಡ್ಡ ಪ್ರಮಾಣದ ಉದ್ಯೋಗ ಕೊಡಲು ಸರ್ಕಾರಗಳಿಗೂ ಸಾಧ್ಯವಿಲ್ಲ. ಚಿಕೋರಿಯನ್ನು ಪ್ರತ್ಯೇಕ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ಬಂದರೆ ಕಾಫಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾಫಿ ಬೆಳೆಗಾರರು ವಿನಾಶದ ಹಂತಕ್ಕೆ ಬಂದರೂ ಇಮೇಜ್ ಕಡಿಮೆ ಆಗಿಲ್ಲ. ಒಳಗೆ ಟೊಳ್ಳಿದ್ದರೂ ಹೊರಗೆ ಥಳಕು ಬಳಕಿನಲ್ಲಿದ್ದೇವೆ. ಕಾಫಿ ಬೆಳೆಗಾರರಿಗೆ ಸೊಕ್ಕಿದೆ ಎಂಬ ಅಭಿಪ್ರಾಯ ಹೊರಜಗತ್ತಿನಲ್ಲಿದೆ. ಆದರೆ, ನಮ್ಮ ಸೊಕ್ಕು ಇಳಿದು ಬಹಳ ವರ್ಷಗಳೇ ಕಳೆದಿವೆ. ಅಡಕೆ ಬೆಳೆಗಾರರಿಗೆ ಸಮಸ್ಯೆ ಎದುರಾದರೆ ಹೋರಾಟಕ್ಕೆ 8-10 ಜಿಲ್ಲೆಗಳಿವೆ. ಆದರೆ, ಕಾಫಿ ಬೆಳೆಗಾರರಿಗೆ ಇರುವುದು 3 ಜಿಲ್ಲೆ. ಬೆಳೆಗಾರರನ್ನೂ ಸಂಘಟಿಸುವುದೂ ಕಷ್ಟ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಾಫಿ ಬೆಳೆಗಾರರು ಸಾಕಷ್ಟು ಏಳುಬೀಳು ಕಂಡಿದ್ದಾರೆ. ಸಂಕಷ್ಟದಲ್ಲಿದ್ದ ಸಂದರ್ಭ ಸರ್ಕಾರಗಳೂ ಸ್ಪಂದಿಸಿದ್ದನ್ನು ಮರೆಯಬಾರದು. ಬೆಳೆಗಾರರ ಸಂಘ ಬಲಿಷ್ಠವಾಗಿದ್ದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿದರು. ಕೆಜಿಎಫ್ ಅಧ್ಯಕ್ಷ ಬಿ.ಎಸ್.ಜಯರಾಂ ಪ್ರಾಸ್ತಾವಿಕ ಮಾತನಾಡಿದರು. ಹಿಲ್‌ಬೀನ್ ಹಾಗೂ ಎಸ್ಟೇಟ್ ಮಂಕೀಸ್ ಬ್ರ್ಯಾಂಡ್‌ನ ಕಾಫಿ ಪುಡಿ ಬಿಡುಗಡೆ ಮಾಡಲಾಯಿತು. ಶಾಸಕ ಸಿ.ಟಿ.ರವಿ ಬೆಳೆಗಾರ ಸ್ನೇಹಿ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಕಾಫಿ ಉತ್ಪನ್ನಗಳು, ಯಂತ್ರೋಪಕರಣಗಳು ಸೇರಿದಂತೆ ಕಾಫಿ ಉದ್ಯಮಕ್ಕೆ ಪೂರಕ ವಸ್ತುಪ್ರದರ್ಶನವನ್ನು ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕರಾದ ಡಿ.ಎನ್.ಜೀವರಾಜ್, ಎಚ್.ಎಂ.ವಿಶ್ವನಾಥ್, ಬಿ.ಬಿ.ನಿಂಗಯ್ಯ, ಐ.ಬಿ.ಶಂಕರ್, ಮಾಜಿ ಸಚಿವೆ ಮೋಟಮ್ಮ, ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ, ಡಾ| ಬಿ.ಎಲ್.ಶಂಕರ್, ಎಂ.ಎಸ್.ಭೋಜೇಗೌಡ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಬೆಳೆಗಾರ ಸಂಘಟನೆಗಳ ಮುಖಂಡರು ಹಾಜರಿದ್ದರು.
ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ರಾಜಕೀಯ ಮಾಡಲಾಯಿತು. ಬೆಳೆಗಾರರು ರಾಜಕಾರಣ ಮಾಡುವುದು ತಪ್ಪಲ್ಲ. ಆದರೆ, ಸಂಘಟನೆಯೇ ರಾಜಕಾರಣ ಮಾಡಬಾರದು. ಇದರಿಂದ ಸಂಘಟನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತದೆ. ನಾನು ಯಾವತ್ತೂ ಕಾಫಿ ಉದ್ಯಮ ಅಥವಾ ಬೆಳೆಗಾರರ ವಿರುದ್ಧ ನಡೆದುಕೊಂಡಿಲ್ಲ. ಕಾಫಿ ಸಮಸ್ಯೆ ಬಂದಾಗ ಕೈಜೋಡಿಸಿ ಹೋರಾಟ ಮಾಡಿದ್ದೇನೆ. ಆದರೆ, ನನ್ನ ವಿರುದ್ಧ ರಾಜಕೀಯ ಮಾಡಿದ್ದು ನನಗೆ ನೋವುಂಟು ಮಾಡಿದೆ • ಸಿ.ಟಿ.ರವಿ, ಶಾಸಕ
ಕಾಫಿ ಬೆಳೆಗಾರರು ಒತ್ತುವರಿ ಮಾಡಿರುವ 10 ಎಕರೆವರೆಗಿನ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಕೊಡುವ ಬಗ್ಗೆ ಹಿಂದಿನ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದನ್ನು ಜಾರಿಗೊಳಿಸಲು ಈಗಿನ ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒತ್ತಡ ಹಾಕಿದರೆ ಕೆಲಸಗಳು ಶೀಘ್ರವಾಗಿ ಆಗುತ್ತವೆ. • ಕೆ.ಜೆ. ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವರು