Advertisement

ಸಮ್ಮರ್‌ ಸ್ಪೆಷಲ್‌ ಸಾಸಿವೆ

09:04 AM May 02, 2019 | Hari Prasad |

ಸಾಸಿವೆ ಅಥವಾ ಪಚಡಿ,
ಬೇಸಿಗೆಯಲ್ಲಿ ಸವಿಯಲು ಸೂಕ್ತವಾದ ತಿನಿಸು. ಮಲೆನಾಡಿನ ಈ ಖಾದ್ಯ, ತಯಾರಿಸಲು ಸುಲಭ, ಬಾಯಿಗೆ ರುಚಿ, ಹೊಟ್ಟೆಗೂ ತಂಪು. ಬಹುತೇಕ ಎಲ್ಲಾ ತರಕಾರಿ ಹಾಗೂ ಹುಳಿ-ಸಿಹಿ ಹಣ್ಣು ಗಳಿಂದ ಪಚಡಿ ತಯಾರಿಸಬಹುದು. ಕೆಲವು ರೆಸಿಪಿ ಇಲ್ಲಿದೆ.

Advertisement

ಬಾಳೆ ದಿಂಡಿನ ಸಾಸಿವೆ
ಬೇಕಾಗುವ ಸಾಮಗ್ರಿ: ಹೆಚ್ಚಿದ ಬಾಳೆ ದಿಂಡು-1 ಕಪ್‌, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಬಾಳೆದಿಂಡನ್ನು ನಾರುಗಳಿಲ್ಲದಂತೆ ಸಣ್ಣಗೆ ಹೆಚ್ಚಿಡಿ. ತೆಂಗಿನತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ಹೆಚ್ಚಿದ ಬಾಳೆದಿಂಡು, ಮೊಸರು ಹಾಗೂ ಉಪ್ಪು ಸೇರಿಸಿ, ಸಾಸಿವೆ- ಕರಿಬೇವು ಸೇರಿಸಿದ ಒಗ್ಗರಣೆ ಕೊಡಿ. ದೇಹದಿಂದ ಕಲ್ಮಶವನ್ನು ಹೊರ ಹಾಕುವಲ್ಲಿ ಬಾಳೆದಿಂಡಿನ ಸೇವನೆ ಉಪಕಾರಿ.


ದ್ರಾಕ್ಷಿ ಹಣ್ಣಿನ ಸಾಸಿವೆ

ಬೇಕಾಗುವ ಸಾಮಗ್ರಿ: ಹಸಿರು ದ್ರಾಕ್ಷಿ-1 ಕಪ್‌, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು) ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ದ್ರಾಕ್ಷಿಯನ್ನು ತೊಳೆದು, ಹೆಚ್ಚಿಟ್ಟುಕೊಳ್ಳಿ. ತೆಂಗಿನತುರಿ, ಹಸಿರುಮೆಣಸು ಮತ್ತು ಸಾಸಿವೆ ಜೊತೆ ಮಿಕ್ಸಿಗೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ದ್ರಾಕ್ಷಿ, ಮೊಸರು, ಉಪ್ಪು ಸೇರಿಸಿ ಕಲಸಿ. ಬೇಕಿದ್ದರೆ ಹೆಚ್ಚುವರಿ ನೀರನ್ನು ಸೇರಿಸಬಹುದು. ನಂತರ ಸಾಸಿವೆ ಕರಿಬೇವು, ಹಾಕಿದ ಒಗ್ಗರಣೆ ಕೊಟ್ಟರೆ ಹುಳಿ-ಸಿಹಿ ರುಚಿಯ ಸಾಸಿವೆ ಸಿದ್ಧ.

Advertisement


ಕರಬೂಜದ ಸಾಸಿವೆ

ಬೇಕಾಗುವ ಸಾಮಗ್ರಿ: ಕರಬೂಜದ ಹಣ್ಣು- 1 ಕಪ್‌, ತೆಂಗಿನತುರಿ- 1/2 ಕಪ್‌, ಒಣಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.


ಮಾಡುವ ವಿಧಾನ:
ಕರಬೂಜದ ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಕರಬೂಜದ ಹೋಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಯಲ್ಲಿ, ಸಾಸಿವೆ-ಕರಿಬೇವು ಸೇರಿಸಿದ ಒಗ್ಗರಣೆ ಕೊಡಿ.


ದಪ್ಪ ಮೆಣಸಿನಕಾಯಿ ಸಾಸಿವೆ

ಬೇಕಾಗುವ ಸಾಮಗ್ರಿ: ದಪ್ಪಮೆಣಸಿನ ಕಾಯಿ- 2, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ದಪ್ಪಮೆಣಸಿನಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ, ಸಣ್ಣ ಉರಿಯಲ್ಲಿ ಸ್ವಲ್ಪ ಬಾಡಿಸಿಕೊಳ್ಳಿ. ತೆಂಗಿನತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಬಾಡಿಸಿದ ಹೋಳುಗಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ಉಪ್ಪು ಸೇರಿಸಿ. ನಂತರ ಒಗ್ಗರಣೆ ಕೊಡಿ.


ಆಲೂಗಡ್ಡೆಯ ಸಾಸಿವೆ

ಬೇಕಾಗುವ ಸಾಮಗ್ರಿ: ಆಲೂಗಡ್ಡೆ- 2, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಬೆಂದ ಹೋಳುಗಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ಉಪ್ಪು ಸೇರಿಸಿ, ಒಗ್ಗರಣೆ ಕೊಟ್ಟರೆ ಆಲೂಗಡ್ಡೆಯ ಸಾಸಿವೆ ರೆಡಿ.
ಇವಿಷ್ಟೇ ಅಲ್ಲದೆ ಅನಾನಸ್‌, ಸೇಬು ಮೊದಲಾದ ಹಣ್ಣುಗಳಿಂದಲೂ, ಹಸಿಯಾಗಿ ಸೇವಿಸುವ ತರಕಾರಿಗಳಾದ ಸೌತೆಕಾಯಿ, ಮೂಲಂಗಿ ಹಾಗೂ ಬೇಯಿಸಿ ತಿನ್ನುವ ಬೆಂಡೆಕಾಯಿ, ಹಾಗಲಕಾಯಿ, ಸೌತೆ, ಬದನೆಕಾಯಿಗಳಿಂದಲೂ ಸಾಸಿವೆ ತಯಾರಿಸಬಹುದು.

— ಹೇಮಮಾಲಾ.ಬಿ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next