Advertisement

ಅಡುಗೆ ಮನೇಲಿ ಮ್ಯಾಂಗೋ ಮ್ಯಾಜಿಕ್‌!

06:00 PM Apr 11, 2018 | |

ಮತ್ತೆ ಬಂದಿದೆ ಬೇಸಿಗೆ. ಇದು ಮಾವು ಮಾಗುವ ಕಾಲ. ಮಾವಿನ ಹಣ್ಣನ್ನು ತಿನ್ನುತ್ತ ರಜೆಯ ಮಜಾ ಸವಿಯುವ ಕಾಲ. ರಸಭರಿತ ಸಿಹಿ ಮಾವು, ತಿನ್ನಲು ಮಾತ್ರವಲ್ಲ; ಅಡುಗೆಗೂ ಪ್ರಶಸ್ತವಾದದ್ದು. ಮಾವಿನಹಣ್ಣು ಬಳಸಿ ಬಗೆಬಗೆಯ ಹೊಸ ತಿನಿಸುಗಳನ್ನು ತಯಾರಿಸಬಹುದು. ಅಂಥ ಕೆಲವು ತಿನಿಸುಗಳ ಹೆಸರು ಹಾಗೂ ಅದನ್ನು ತಯಾರಿಸುವ ವಿಧಾನದ ಮಾಹಿತಿ ಇಲ್ಲಿದೆ.

Advertisement

1. ಮಾವಿನ ಹಣ್ಣಿನ ಶಾವಿಗೆ ಖೀರ್‌
ಬೇಕಾಗುವ ಸಾಮಗ್ರಿ: ಶಾವಿಗೆ- 1 ಕಪ್‌, ಸಕ್ಕರೆ- 1/2 ಕಪ್‌, ಕಾಯಿಸಿದ ಹಾಲು-3 ಕಪ್‌, ಸಿಹಿ ಮಾವಿನ ಹಣ್ಣು -1, ಏಲಕ್ಕಿ ಪುಡಿ- 1/2 ಚಮಚ, ತುಪ್ಪ- 4 ಚಮಚ, ಡ್ರೈ ಫ್ರೂಟ್ಸ್‌ – ಸ್ವಲ್ಪ.

ಮಾಡುವ ವಿಧಾನ: ಒಂದು ಬಾಣಲೆಗೆ ತುಪ್ಪ ಹಾಕಿ, ಶಾವಿಗೆಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಎರಡು ಕಪ್‌ ಹಾಲು ಸೇರಿಸಿ ಶಾವಿಗೆಯನ್ನು ಬೇಯಿಸಿ. ನಂತರ ಅದಕ್ಕೆ ಸಕ್ಕರೆ ಸೇರಿಸಿ. ಅದು ಕರಗಿ ಖೀರಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳಲಿ. ಈಗ, ಉಳಿದ ಒಂದು ಕಪ್‌ ಹಾಲನ್ನು ಹಾಕಿ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್‌ ಮತ್ತು ಏಲಕ್ಕಿ ಸೇರಿಸಿ ತಣಿಯಲು ಬಿಡಿ. ನಂತರ, ಮಾವಿನಹಣ್ಣಿನ ತಿರುಳನ್ನು ಮಿಕ್ಸರ್‌ಗೆ ಹಾಕಿ ರುಬ್ಬಿ, ತಣಿದ ಖೀರಿಗೆ ಸೇರಿಸಿದರೆ ರುಚಿ ರುಚಿಯ ಮಾವಿನ ಹಣ್ಣಿನ ಶಾವಿಗೆ ಖೀರ್‌ ಸಿದ್ಧ.

2. ಮಾವಿನ ಹಣ್ಣಿನ ಪೂರಿ
ಬೇಕಾಗುವ ಸಾಮಗ್ರಿ:
ಸಿಹಿ ಮಾವಿನ ಹಣ್ಣು- 1, ಗೋಧಿ ಹಿಟ್ಟು- 1 ಕಪ್‌, ಮೊಸರು- 1/4 ಕಪ್‌, ಉಪ್ಪು- 1/2 ಚಮಚ, ಎಣ್ಣೆ- ಕರಿಯಲು.

ಮಾಡುವ ವಿಧಾನ: ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ. ಹೋಳುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ ಪೇಸ್ಟ್‌ ತಯಾರಿಸಿ. ನಂತರ ಒಂದು ದೊಡ್ಡ ಬೌಲ್‌ಗೆ ಗೋಧಿ ಹಿಟ್ಟು, ಉಪ್ಪು, ಮೊಸರು, ಮಾವಿನ ತಿರುಳು ಸೇರಿಸಿ ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ. ಒದ್ದೆ ಬಟ್ಟೆಯಿಂದ ಮುಚ್ಚಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಹಿಟ್ಟನ್ನು ಲಿಂಬೆಹಣ್ಣಿನ ಗಾತ್ರದ ಉ0ಡೆಗಳನ್ನಾಗಿ ಮಾಡಿ, ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ. (ಮಾವಿನ ತಿರುಳು ಮತ್ತು ಮೊಸರಿನಲ್ಲಿರುವ ನೀರಿನ ಅಂಶವೇ ಸಾಕಾಗುವುದರಿಂದ ನೀರಿನ ಅಗತ್ಯ ಇರುವುದಿಲ್ಲ. ಹಿಟ್ಟು ನೀರಾಗದ ಹಾಗೆ ಬೇಕಾದಷ್ಟೇ ತಿರುಳನ್ನು ಸೇರಿಸುವುದು ಸೂಕ್ತ)

Advertisement

3. ಮಾವಿನ ಹಣ್ಣಿನ ಹಲ್ವ
ಬೇಕಾಗುವ ಸಾಮಗ್ರಿ:
ಸಿಹಿ ಮಾವಿನ ಹಣ್ಣಿನ ತಿರುಳು- ಒಂದೂವರೆ ಕಪ್‌, ಸಕ್ಕರೆ- 1/2 ಕಪ್‌, ಕಡಲೆ ಹಿಟ್ಟು-1 ಕಪ್‌, ತುಪ್ಪ- 1/3 ಕಪ್‌, ಪಿಸ್ತಾ, ಬಾದಾಮಿ ಸ್ವಲ್ಪ. 

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಕಡಲೆಹಿಟ್ಟನ್ನು ಸೇರಿಸಿ ಚಿಕ್ಕ ಉರಿಯಲ್ಲಿ  ಹಸಿ ವಾಸನೆ ಹೋಗಿ, ಪರಿಮಳ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಮಾವಿನ ಹಣ್ಣು ಮತ್ತು ಸಕ್ಕರೆ ಹಾಕಿ ಕಾಯಿಸಿ. ಸ್ವಲ್ಪ ಹೊತ್ತಿನಲ್ಲಿ ಮಾವು, ಸಕ್ಕರೆಯ ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಅದಕ್ಕೆ ಹುರಿದ ಕಡಲೆಹಿಟ್ಟನ್ನು ಸೇರಿಸಿ ಕಲಸಿ. ಉಳಿದ ತುಪ್ಪ, ಪಿಸ್ತಾ, ಬಾದಾಮಿ ಸೇರಿಸಿ ತಳ ಬಿಡುವವರೆಗೂ ಮಗುಚಿದರೆ ಹಲ್ವ ತಯಾರು. 

4. ಮಾವಿನ ಹಣ್ಣಿನ ಶರಬತ್ತು
ಬೇಕಾಗುವ ಸಾಮಗ್ರಿ:
ಮಾವಿನ ಹಣ್ಣಿನ ತಿರುಳು- 1 ಕಪ್‌, ಸಕ್ಕರೆ- 1/4 ಕಪ್‌, ನೀರು- 1/4 ಲೀ., ಲಿಂಬೆ ರಸ- ಒಂದೂವರೆ ಚಮಚ

ಮಾಡುವ ವಿಧಾನ: ಬಾಣಲೆಗೆ ಸಕ್ಕರೆ ಮತ್ತು ನೀರು ಹಾಕಿ ಕುದಿಸಿ. ಸಕ್ಕರೆ ಕರಗಿದ ಕೂಡಲೆ ಕೆಳಗಿಳಿಸಿ, ತಣಿಯಲು ಬಿಡಿ. ಸಕ್ಕರೆ, ಪಾಕ ಬರುವ ಅಗತ್ಯವಿಲ್ಲ. ನಂತರ ಅದಕ್ಕೆ ಮಾವಿನ ಹಣ್ಣಿನ ತಿರುಳು ಮತ್ತು ಲಿಂಬೆರಸ ಸೇರಿಸಿ ಚೆನ್ನಾಗಿ ಬೆರೆಸಿ. ಅದನ್ನು ಒಂದು ಬಾಕ್ಸ್ ಗೆ ಹಾಕಿ 2 ಗಂಟೆ ಫ್ರಿಡ್ಜ್ನಲ್ಲಿಡಿ.ನಂತರ ಚಮಚ ಬಳಸಿ ಕೆದಕಿ. ಈ ಮಿಶ್ರಣವನ್ನು ಮಿಕ್ಸರ್‌ಗೆ ಹಾಕಿ ಕುಲುಕಿ. ಈಗ ಅದು ಕ್ರೀಮ… ನ ಹದಕ್ಕೆ ಬರುತ್ತದೆ. ಪುನ: 2 ಗಂಟೆ ಫ್ರಿಡ್ಜ್ನಲ್ಲಿಟ್ಟು ಚೆನ್ನಾಗಿ ಕಡೆಯಿರಿ. ಆಗ ಅದು ಐಸ್‌ಕ್ರೀಮ…ನಂತೆ ಸ್ವಾದಿಷ್ಟವಾಗಿರುತ್ತದೆ. 

* ಸುಮನ್‌ ದುಬೈ

Advertisement

Udayavani is now on Telegram. Click here to join our channel and stay updated with the latest news.

Next