ದೊಡ್ಡಬಳ್ಳಾಪುರ: ಕೈಗಾರಿಕಾ ಪ್ರದೇಶದಲ್ಲಿನ ಅಡುಗೆ ಅನಿಲ ಸೋರಿಕೆಯಾಗಿ ಹಲವು ಮಂದಿ ಗಾಯಗೊಂಡಿರುವ ಪ್ರಕರಣ ಮಾಸುವ ಮುನ್ನವೇ, ಬಾಶೆಟ್ಟಿಹಳ್ಳಿಯ ವಿನಾಯಕ ನಗರದಲ್ಲಿ ಶುಕ್ರವಾರ ಬೆಳಗ್ಗೆ ಅಡುಗೆ ಅನಿಲ ಸೋರಿಕೆಯಾದ ಪರಿಣಾಮ ಬೆಂಕಿ ವ್ಯಾಪಿಸಿ ಮೂವರಿಗೆ ಗಾಯಗಳಾಗಿವೆ.
ಉತ್ತರ ಭಾರತ ಮೂಲದ ಮೂರು ಮಂದಿ ಯುವಕರು ವಿನಾಯಕ ನಗರದಲ್ಲಿ ಒಟ್ಟಾಗಿ ವಾಸವಿದ್ದು, ಅಡುಗೆ ಬಳಕೆಗೆ ಸಿಲಿಂಡರ್ ಬಳಸಿದ್ದಾರೆ. ರಾತ್ರಿ ಮಲಗುವ ಮುನ್ನ ಸಿಲಿಂಡರ್ ಆಫ್ ಮಾಡಿದ್ದರು ಸೋರಿಕೆಯಾಗಿದ್ದು, ಗುರುವಾರ ಬೆಳಗ್ಗೆ ವಿದ್ಯುತ್ ಸ್ವಿಚ್ ಹಾಕಿದಾಗ ಬೆಂಕಿ ಹತ್ತಿಕೊಂಡು ಮೂರು ಜನರಿಗೂ ಗಾಯಗಳಾಗಿದೆ.
ಇದನ್ನೂ ಓದಿ:- ಲಸಿಕೆ ನೀಡಿಲ್ಲವೇ?:ತೈಲ ಬೆಲೆ ಏರಿಕೆ ಸಮರ್ಥಿಸಿಕೊಂಡ ಪೆಟ್ರೋಲಿಯಂ ಸಚಿವ
ಘಟನೆಯಲ್ಲಿ ಶ್ರೇಯಸ್‌ನಾಥ್ ಗುಪ್ತ(25) ಎನ್ನುವ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಮನಂಜಿತ್ (26), ಸಾಗರ್ ಚೌಹಾನ್ (19) ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ವ್ಯಾಪಿಸಿದ ರಭಸಕ್ಕೆ ಮನೆಯ ಸಿಮೆಂಟ್ ಶೀಟ್ ಹಾರಿ ಹೋಗಿವೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕೈಗಾರಿಕಾ ಪ್ರದೇಶ, ಬಾಶೆಟ್ಟಹಳ್ಳಿ ವ್ಯಾಪ್ತಿಯಲ್ಲಿ ಮರು ಭರ್ತಿ ಸಿಲಿಂಡರ್ ಬಳಕೆ ಹಾಗೂ ಅನಧಿಕೃತ ಸಿಲಿಂಡರ್ ಬಳಕೆಯಿಂದ ಈ ರೀತಿಯ ಪ್ರಕರಣ ಪದೇ ಪದೆ ನಡೆಯಲು ಕಾರಣವಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.