Advertisement

ಅಡುಗೆ ಅನಿಲ ಸೇವನೆ: ದಂಪತಿ ಸಾವು

12:13 AM Nov 13, 2019 | Team Udayavani |

ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದಾಗಿ ಉಸಿರುಗಟ್ಟಿ ದಂಪತಿ ಮಲಗಿದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೇಗೂರು ಠಾಣೆ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾಗಮುನಿ(37) ಮತ್ತು ಪದ್ಮಾವತಿ (30) ಮೃತ ದಂಪತಿ.

Advertisement

ಐದು ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ದಂಪತಿ ದೇವರ ಚಿಕ್ಕನಹಳ್ಳಿಯ ಚಿಕ್ಕ ಮನೆಯಲ್ಲಿ ವಾಸವಾಗಿದ್ದು, ನಾಗಮುನಿ ಮರಗೆಲಸ ಮಾಡುತ್ತಿದ್ದರೆ, ಪದ್ಮಾವತಿ ಗಾರ್ಮೆಂಟ್ಸ್‌ ನೌಕರರಾಗಿದ್ದರು. ದಂಪತಿಗೆ ಹಿಂದೂಶ್ರೀ ಮತ್ತು ಪಾಂಡು ಎಂಬ ಇಬ್ಬರು ಮಕ್ಕಳಿದ್ದು, ಆಂಧ್ರಪ್ರದೇಶದ ತಾತನ ಮನೆಯಲ್ಲಿ ವಾಸವಾಗಿದ್ದರು.

ನಿತ್ಯ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ಭಾನುವಾರ ಮನೆಯಲ್ಲೇ ಇದ್ದು, ರಾತ್ರಿ ಕುಡಿಯಲು ನೀರು ತುಂಬಿಸಿಕೊಂಡು ಮಲಗಿದ್ದಾರೆ. ಬೆಳಗ್ಗೆ ಏಳು ಗಂಟೆ ಸುಮಾರಿಗೆ ಪದ್ಮಾವತಿ ಎಚ್ಚರಗೊಂಡು ಕಾಫಿ ಮಾಡಲು ಗ್ಯಾಸ್‌ ಸ್ಟೌವ್‌ ಹಚ್ಚಿದ್ದಾರೆ.

ಬಳಿಕ ಕಾಫಿ ಪಾತ್ರೆಯನ್ನು ಸ್ಟೌವ್‌ ಮೇಲೆ ಇಟ್ಟು, ವಿಶ್ರಾಂತಿ ಪಡೆಯಲು ಹಾಸಿಗೆ ಮೇಲೆ ಮಲಗೆ ಹಾಗೇ ನಿದ್ದೆಗೆ ಜಾರಿದ್ದಾರೆ. ಕಾಫಿ ಹೆಚ್ಚು ಬಿಸಿಯಿಂದ ಉಕ್ಕಿ ಹರಿದು ಸ್ಟೌವ್‌ ಬರ್ನಲ್‌ಗ‌ಳ ರಂಧ್ರಗಳು ಮುಚ್ಚಿಹೋಗಿ ಬೆಂಕಿ ಹಾರಿಹೋಗಿದೆ. ಆದರೆ, ಅನಿಲ ಸೋರಿಕೆಯಾಗಿದೆ ಎಂದು ಪೊಲೀಸರು ಹೇಳಿದರು.

ಅನಿಲದಿಂದ ಉಸಿರುಗಟ್ಟಿ ಸಾವು: ನಾಗಮುನಿ ದಂಪತಿ ವಾಸವಾಗಿದ್ದ ಮನೆ ಅತೀ ಚಿಕ್ಕದಾಗಿದ್ದು, ಇಡೀ ಮನೆಗೆ ಒಂದೇ ಕಿಟಕಿ ಇದೆ. ಬೇರೆ ಎಲ್ಲಿಯೂ ಗಾಳಿಯಾಗಲಿ, ಬೆಳಕಾಗಲಿ ಬರುವುದಿಲ್ಲ. ಒಂದು ವೇಳೆ ಕಿಟಕಿ ತೆರೆದರೆ ಹೊರಗಿನ ಜನರಿಗೆ ಮನೆಯೊಳಗಿನ ಚಿತ್ರಣ ಕಾಣುತ್ತದೆ. ಹೀಗಾಗಿ ಯಾವಾಗಲು ಕಿಟಕಿ ಮುಚ್ಚಿರುತ್ತಿದ್ದರು. ಸೋಮವಾರ ಬೆಳಗ್ಗೆಯೂ ಕಿಟಕಿ ಮುಚ್ಚಲಾಗಿತ್ತು. ಮತ್ತೊಂದೆಡೆ ಬಾಗಿಲು ಹಾಕಿಕೊಂಡಿದರಿಂದ ಸೋರಿಕೆಯಾದ ಅನಿಲ ಸಂಪೂರ್ಣವಾಗಿ ಮನೆಯನ್ನು ಆವರಿಸಿದೆ.

Advertisement

ಹಾಸಿಗೆಯಲ್ಲಿ ಮಲಗಿದ್ದ ದಂಪತಿ ಅದನ್ನೇ ಸೇವಿಸಿ ಉಸಿರುಗಟ್ಟಿ ಮೃತರಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆಂಧ್ರಪ್ರದೇಶ ನಾಗಮುನಿ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಕಾನೂನು ಪ್ರಕ್ರಿಯೆ ಮುಗಿಸಿ ಮೃತ ದೇಹಗಳನ್ನು ಹಸ್ತಾಂತರ ಮಾಡಲಾಯಿತು ಎಂದು ಪೊಲೀಸರು ಹೇಳಿದರು.

ಸ್ಥಳೀಯರಿಂದ ಮಾಹಿತಿ: ಬೆಳಗ್ಗೆ ಎಂಟು ಗಂಟೆಗೆ ಎಚ್ಚರಗೊಂಡು ಕೆಲಸಕ್ಕೆ ಹೋಗುತ್ತಿದ್ದ ದಂಪತಿ ಸಂಜೆ ಏಳು ಗಂಟೆಯಾದರೂ ಮನೆಯಿಂದ ಹೊರಬಾರದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮನೆ ಬಾಗಿಲು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಕಿಟಕಿ ತೆರೆದು ನೋಡಿದಾಗ ದಂಪತಿ ಹಾಸಿಗೆಯಲ್ಲೇ ಮಲಗಿದ್ದರು. ಕಿಟಕಿ ಮೂಲಕವೇ ನೀರು ಹಾಕಿ ಎಚ್ಚರಗೊಳಿಸಲು ಯತ್ನಿಸಿದ್ದಾರೆ, ಸಾಧ್ಯವಾಗಿಲ್ಲ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬೇಗೂರು ಪೊಲೀಸರು ಬಾಗಿಲು ಒಡೆದು ನೋಡಿದಾಗ ಮನೆಯಲ್ಲಿ ಅನಿಲ ಸೋರಿಕೆಯಾಗಿರುವುದು ಗೊತ್ತಾಯಿತು. ಕೂಡಲೇ ಸಮೀಪದ ಆಸ್ಪತ್ರೆಗೆ ರವಾನಿಸಿದಾಗ ಚಿಕಿತ್ಸೆ ನೀಡಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು. ಅಲ್ಲದೆ ಮರಣೋತ್ತರ ಪರೀಕ್ಷೆ ನಡೆಸಿದಾಗಲೂ ಅನಿಲ ಸೋರಿಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next