Advertisement

ಕುಕ್‌ ಇಂಡಿಯಾ ಚಳವಳಿ; ಮೇಡಂಗೆ ಫ್ರೀಡಂ ಕೊಟ್ಟವರು

06:00 AM Aug 15, 2018 | |

ಅಡುಗೆ ಮನೆ ಎಂದರೆ “ಬಂಧನ’ ಎಂಬ ಭಾವ ಅನೇಕರಲ್ಲಿದೆ. ಅಂದು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಕ್ವಿಟ್‌ ಇಂಡಿಯಾ ಚಳವಳಿ ನಡೆಸಿದರೆ, ಇಲ್ಲಿ ಐವರು ಪತಿರಾಯರು ತಮ್ಮ ಪತ್ನಿಯರಿಗೆ ಅಡುಗೆ ಮನೆಯಿಂದ ಸ್ವಾತಂತ್ರ್ಯ ದೊರಕಿಸಿಕೊಡುವ ಸಲುವಾಗಿ ಕುಕ್‌ ಇಂಡಿಯಾ ಚಳವಳಿ ನಡೆಸಿದ್ದಾರೆ. ಕುಟುಂಬ ನಿರ್ವಹಣೆಯ ಜವಾಬ್ದಾರಿಗಳನ್ನು ಸಮನಾಗಿ ಹಂಚಿಕೊಳ್ಳುವ ವಾಗ್ಧಾನವಿತ್ತ ಪತಿರಾಯರ ಹೋರಾಟವನ್ನು ಅವರ ಮಾತುಗಳಲ್ಲೇ ಓದಿ… ಜೊತೆಗೆ ಅವರ ಪತ್ನಿಯರು ನೀಡಿರುವ ಅಂಕಗಳತ್ತ ಕಣ್ಣು ಹಾಯಿಸಲು ಮರೆಯದಿರಿ.

Advertisement

ಒಂದೇ ರುಚಿ ಇಲ್ಲಿಯವರೆಗೂ ಬಂದಿಲ್ಲ, ಅದೇ ನನ್ನ ವೈಶಿಷ್ಟ್ಯ
ಮನೇಲಿ ಸಾಮಾನ್ಯವಾಗಿ ಹೆಂಡ್ತೀರು ಸಂಸಾರ ನಿರ್ವಹಣೆಯ ಹೆಚ್ಚಿನ ಭಾಗವನ್ನು ನಿರ್ವಹಿಸುತ್ತಾರೆ. ಗಂಡಂದಿರು ಹೆಂಡ್ತೀರಿಗೆ ಸಹಾಯ ಮಾಡ್ತಾರೆ. ನಮ್ಮನೇಲಿ ಉಲ್ಟಾ. ನನ್‌ ಹೆಂಡ್ತಿ ನನಗೆ ಮನೆ ಸಂಭಾಳಿಸೋಕೆ ಸಹಾಯ ಮಾಡ್ತಾಳೆ. ಅಪರ್ಣಾ ಶೂಟಿಂಗ್‌, ಪ್ರೋಗ್ರಾಮ್‌ ಅಂತ ಬಿಝಿ ಇರುವುದರಿಂದ ಹೆಚ್ಚಿನ ಸಮಯ ನಾನೇ ಕೆಲಸಗಳನ್ನು ಮಾಡಿರಿ¤àನಿ. ಕಾಯೋದಿಲ್ಲ. ಕಸ ಗುಡಿಸೋದರಿಂದ ಹಿಡಿದು, ದಿನಸಿ ಸಾಮಗ್ರಿ ತರೋದು, ಅಡುಗೆ ಮಾಡೋದು, ರಿಪೇರಿ ಕೆಲಸಗಳಿದ್ದರೆ ಮಾಡಿಸೋದು ಹೀಗೆ ಒಂದು ಮನೆಯ ಎಲ್ಲಾ ಡಿಪಾರ್ಟುಮೆಂಟುಗಳಿಗೂ ನಾನೇ ಹೆಡ್‌ ಅನ್ನಬಹುದು. ಅದರಲ್ಲೂ ಅಡುಗೆ ಮನೆಯಲ್ಲಿ ನಂದೇ ರಾಜ್ಯಭಾರ. 

ಹಾಗಂತ ಯಾವ ಯಾವ ಅಡುಗೆಯಲ್ಲಿ ಸ್ಪೆಷಲಿಸ್ಟ್‌ ಆಗಿದ್ದೀರಿ ಅಂತ ಕೇಳಿದರೆ ನನ್ನ ಬಳಿ ಉತ್ತರ ಇರೋದಿಲ್ಲ. ಯಾಕೆಂದರೆ ಚಿತ್ರಾನ್ನವಿರಲಿ, ಪುಳಿಯೊಗರೆ, ರೈಸ್‌ಬಾತ್‌, ಅನ್ನ- ರಸಂ ಇರಲಿ ನಾನು ಮಾಡೋ ಎಲ್ಲಾ ಅಡುಗೆಯ ಬಗೆಗಳೂ ನನ್ನದೇ ವಿಧಾನ, ಫ್ಲೇವರ್‌ಗಳಲ್ಲಿ ತಯಾರಾಗಿರುತ್ತೆ. ಒಂದು ರೀತಿಯಲ್ಲಿ ನಾನು ಪ್ರತಿ ಸಲ ಮಾಡೋ ಅಡುಗೆಯನ್ನು ಪ್ರಯೋಗ ಅಂತ ಬೇಕಾದರೂ ಕರೆಯಬಹುದು. ಒಂದು ದಿನ ಮಾಡಿದ ಚಿತ್ರಾನ್ನದ ರುಚಿ, ಇನ್ನೊಂದು ದಿನ ಬಂದಿಲ್ಲ. ಪ್ರತಿ ಸಲ ಬೇರೆಯದೇ ರುಚಿ. ಹೀಗಾಗಿ ನಾನು ತಯಾರಿಸುವ ಯಾವ ಅಡುಗೆಯಲ್ಲೂ ಒಂದೇ ರುಚಿ ಇಲ್ಲಿಯವರೆಗೂ ಬಂದಿಲ್ಲ. ಸೋ ಅಡುಗೆಮನೆಯಲ್ಲಿ ಪ್ರತೀ ಸಲ ಹೊಸ ಹೊಸ ಪ್ರಯೋಗ. ಅಡುಗೆ ಮನೆಯನ್ನು ಪ್ರಯೋಗಶಾಲೆ ಮಾಡಿಕೊಂಡಿದ್ದೀನಿ ಅಂತ ಮಾತ್ರ ಹೇಳಬೇಡಿ. 

ನಾನು ತಯಾರಿಸಿದ ಖಾದ್ಯಗಳೆಲ್ಲವೂ ಡಿಸಾಸ್ಟರ್‌ ಆಗಿಲ್ಲ ಎನ್ನುವುದೇ ಖುಷಿ. ಅಡುಗೆ ಅನ್ನೋದು ನನ್ನ ಪ್ರಕಾರ ಅಭಿವ್ಯಕ್ತಿ ಮಾಧ್ಯಮ. ಹೇಗೆ ಕಲೆ, ಸಾಹಿತ್ಯ, ಸಂಗೀತದ ಮೂಲಕ ಮನುಷ್ಯ ತನ್ನೊಳಗಿನದ್ದನ್ನು ಹೊರಜಗತ್ತಿನೊಂದಿಗೆ ಹಂಚಿಕೊಳ್ಳುತ್ತಾನೋ ಅದು ಅಡುಗೆಯ ಮೂಲಕವೂ ಸಾಧ್ಯ ಅಂತ ನಾನು ತಿಳಿದಿದ್ದೇನೆ. ಇರಲಿ, ಅಡುಗೆ ಮನೆಯಲ್ಲಿ, ಅಡುಗೆ ಮಾಡುವುದಕ್ಕಿಂತ ಹೆಚ್ಚಿನ ಸಮಯವನ್ನು ಸ್ವತ್ಛಗೊಳಿಸುವುದರಲ್ಲೇ ಕಳೆಯುತ್ತೇನೆ ಅಂತ ನನ್ನವಳು ದೂರುತ್ತಾಳೆ. ಅವಳು ಹೇಳ್ಳೋದು ನಿಜ. ಇಂಟೀರಿಯರ್‌ ಡಿಸೈನರ್‌ ಆಗಿರುವ ಕಾರಣಕ್ಕೋ ಏನೋ ನನಗೆ ಎಲ್ಲವೂ ನೀಟಾಗಿರಬೇಕು, ಸ್ವತ್ಛವಾಗಿರಬೇಕು. ಅದರಲ್ಲೂ ಅಡುಗೆ ಮನೆಯಲ್ಲಿ ಎಣ್ಣೆ ಜಿಡ್ಡಿನಂಥ ಕಲೆಗಳನ್ನು ಹಾಗೇ ಬಿಟ್ಟರೆ ಯಾವ ಕಾಲಕ್ಕೂ ಉಳಿದುಬಿಡುತ್ತೆ, ಸ್ಮಾರಕದಂತೆ! ಅದಕ್ಕೇ ವಿನೆಗರ್‌, ಬೇಕಿಂಗ್‌ ಸೋಡಾ, ಥಿನ್ನರ್‌ ಮುಂತಾದ ರಾಸಾಯನಿಕಗಳ ಕೋಠಿ ಇಟ್ಟುಕೊಂಡಿದ್ದೀನಿ. ಕಲೆಯ ತೀವ್ರತೆಯನ್ನು ಗಮನಿಸಿ ಅದರ ದಮನಕ್ಕೆ ಸರಿಹೊಂದುವ ಆಯುಧವನ್ನು ಶಸ್ತ್ರಾಗಾರದಿಂದ ಹೊರತೆಗೆಯುತ್ತೇನೆ.
– ನಾಗರಾಜ ವಸ್ತಾರೆ
ರೇಟಿಂಗ್‌ 10

ಕಡಿಮೆ ಅವಧಿಯಲ್ಲಿ ಮೊಸರು ಒಗ್ಗರಣೆ
ನಮ್ಮನೆ ಕೆಲಸಗಳನ್ನು ನಾನು ನನ್‌ ಇಬ್ರೂ ಹಂಚಿಕೊಂಡಿದ್ದೀವಿ. ಅವ್ಳು ಮನೇಲೇ ಇರೋದರಿಂದ ಸಂಸಾರ ತೂಗಿಸೋದರಲ್ಲಿ ನನಗಿಂತ ಅವಳದೇ ಒಂದು ಕೈ ಮೇಲೆ. ಸಿನಿಮಾಗಳಿಗೆ ಹಾಡು ಬರೆಯೋವಾಗ ನಾನು ಮನೆಯಲ್ಲಿರಲ್ಲ. ಯಾಕೆಂದರೆ ಒಂದೋ ದೊಡ್ಡ ಮಗಳು ಬಂದು ನನ್ನ ಲ್ಯಾಪ್‌ಟಾಪ್‌ ಕಿತ್ತುಕೊಳ್ಳುತ್ತಾಳೆ. ಇಲ್ಲಾ ಒಂದೂವರೆ ವರ್ಷದ ಮಗ ಬಂದು ತೊಡೆ ಮೇಲೆ ಕೂತ್ಕೊಳ್ಳೋಕೆ ಸರ್ಕಸ್‌ ಮಾಡುತ್ತಾನೆ. ಪಾಪ, ಅವೇನು ಬೇಕೂಂತ ಮಾಡಲ್ಲ. ಅವರೆಂದರೆ ನನಗೆ ತುಂಬಾ ಪ್ರೀತಿ. ಅವರಿದ್ದಾಗ ಹಾಡು ಬರೆಯೋಕೆ ಮನಸ್ಸೇ ಬರಲ್ಲ. ಅದಕ್ಕಿಂತ ಹೆಚ್ಚಾಗಿ ನನಗೆ ನನ್ನ ಕೆಲಸ ಆಗಲ್ಲ, ಅವರಿಗೆ ಆಟವೂ ಆಗಲ್ಲ. ಹೀಗಾಗಿ ಸ್ಟುಡಿಯೋಗೋ, ಪಾರ್ಕಿಗೋ ಹೋಗಿಬಿಡುತ್ತೇನೆ. ಸ್ವಾರಸ್ಯದ ವಿಷಯ ಅಂತಂದರೆ ಅವೆರಡು ಜಾಗಗಳಲ್ಲಿ ಹಾಡು ಬರೆದದ್ದಕ್ಕಿಂತಲೂ ನಾನು ಬಸ್‌ ಪ್ರಯಾಣದ ಮಧ್ಯ ಹಾಡು ಬರೆದದ್ದೇ ಜಾಸ್ತಿ. ಎಲ್ಲಿಗಾದರೂ ಬಸ್‌ ಹತ್ತಿ ಹೋಗಿಬಿಡೋದು. ರಿಟರ್ನ್ ಬರೋವಷ್ಟರಲ್ಲಿ ಒಂದು ಹಾಡು ರೆಡಿ.

Advertisement

ಅಡುಗೆ ಮನೆ ಹೆಂಗಸರ ಡಿಪಾರ್ಟ್‌ಮೆಂಟು ಅನ್ನೋ ಅಭಿಪ್ರಾಯವೊಂದಿದೆ. ನಾನ್ಯಾವತ್ತೂ ಆ ರೀತಿ ಅಂದುಕೊಂಡವನಲ್ಲ. ಸಂಸಾರ ಅಂದ ಮೇಲೆ ಎಲ್ಲಾ ಡಿಪಾರ್ಟುಮೆಂಟುಗಳನ್ನೂ ಸಮವಾಗಿ ಹಂಚಿಕೊಳ್ಳಬೇಕು. ನಮ್ಮನೇಲಿ ಪತ್ನಿಯೇ ಸಾಮಾನ್ಯವಾಗಿ ಅಡುಗೆ ಮಾಡೋದು. ಅವಳು ಮನೇಲೇ ಇರೋದರಿಂದ ಅವಳಿಗೆ ಸುಲಭ ಅನ್ನೋ ಕಾರಣಕ್ಕೆ. ನಾನು ಮನೇಲಿದ್ದರೆ ಅಡುಗೆ ಮನೆಯಲ್ಲಿ ನನ್ನ ಕೈಚಳಕ ಪ್ರದರ್ಶಿಸುತ್ತೇನೆ. ಹೊಸ ಹೊಸ ಅಡುಗೆ ಪ್ರಯೋಗಗಳನ್ನು ನಾನು ಮಾಡೋದು ಕಡಿಮೆ. ಏನು ಗೊತ್ತಿದೆಯೋ ಅದನ್ನಂತೂ ರುಚಿಕಟ್ಟಾಗಿ ಮಾಡಿಹಾಕುತ್ತೇನೆ. ಮಕ್ಕಳಿಗೆ ರುಚಿಗಿಂತ ಹೆಚ್ಚಾಗಿ ಪೋಷಕಾಂಶಯುಕ್ತ ಆಹಾರ ಕೊಡಬೇಕು ಅನ್ನೋದು ನನ್ನ ಕಾಳಜಿ. ಹೀಗಾಗಿ ಬಸಳೆ ಸೊಪ್ಪು, ಹರಿವೆ ಸೊಪ್ಪುಗಳನ್ನು ಬಳಸಿ ಏನಾದರೂ ತಯಾರಿಸಿ ಕೊಡ್ತೀನಿ. ತರಕಾರಿಗಳನ್ನು ಹೆಚ್ಚೆಚ್ಚು ಬಳಸ್ತೀನಿ. ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ನನ್ನದು ಮಲಾ°ಡ್‌ ಶೈಲಿಯ ಅಡುಗೆ. ತಂಬುಳಿ ಚೆನ್ನಾಗಿ ಮಾಡ್ತೀನಿ. ಎಂಥಾ ತುರ್ತಿನ ಸಂದರ್ಭದಲ್ಲೂ ಅಡುಗೆ ಮಾಡಲು ಸಮಯವಿಲ್ಲವೆಂದಾಗಲೂ ಹಸಿದಿದ್ದಿಲ್ಲ. ಆ ಕಡಿಮೆ ಸಮಯದಲ್ಲೇ ಮೊಸರು ಒಗ್ಗರಣೆ ಮಾಡಿಬಿಡುತ್ತೇನೆ. ಅಡುಗೆಯ ಗಮ್ಮತ್ತೇ ಅದು. ಅಡುಗೆ ಮಾಡಲು ಸಮಯವಿಲ್ಲ ಅನ್ನೋದು ಎಷ್ಟರಮಟ್ಟಿಗೆ ನಿಜವೋ ನಂಗೊತ್ತಿಲ್ಲ. ಎಲ್ಲಾ ಸೀಮಿತ ಅವಧಿಯಲ್ಲೂ ತಯಾರಿಸಬಹುದಾದ ಖಾದ್ಯಗಳಿವೆ. ಮಾಡಲು ಮನಸ್ಸಿರಬೇಕು, ಗೊತ್ತಿರಬೇಕು. ಮನೆಯಿಂದ ಹೊರಗೆ ಸಿಗುವ ಆಹಾರವನ್ನು ಯಾವಾಗಲೂ ನೆಚ್ಚಬಾರದು. ವ್ಯಾಪಾರಿ ಜಗತ್ತಿನ ಆಚೆಗೆ ನಾವು ಬದುಕಬೇಕು. ಈ ಮಾತು ಅಡುಗೆ ವಿಷಯದ ಕುರಿತು ಮಾತ್ರವೇ ಹೇಳಿದ್ದಲ್ಲ, ಸಂಸಾರ ನಿರ್ವಹಣೆಯ ಎಲ್ಲಾ ವಿಚಾರಗಳಿಗೂ ಇದು ಹೊಂದಿಕೆಯಾಗುತ್ತೆ.
– ಹೃದಯಶಿವ
ರೇಟಿಂಗ್‌ 7 

ಮನೆಯಲ್ಲೇ ಬಿಸಿ ಬಿಸಿ ಚಾಕೊಲೇಟ್‌ ತಯಾರಿಸಿದೆ
ನಮ್ಮದು ಉತ್ತರಕನ್ನಡ. ಅಂದಮೇಲೆ ಕೇಳಬೇಕೆ!? ಅಡುಗೆ ವಿಷಯದಲ್ಲಿ ನಾವು ಸ್ವಲ್ಪ ಹೆಚ್ಚೇ ಪರ್ಟಿಕ್ಯುಲರ್‌ ಆಗಿರುತ್ತೇವೆ ಅನ್ನೋದನ್ನು ಹಾಗೆಯೇ ಅರ್ಥ ಮಾಡಿಕೊಳ್ಳಬಹುದು. ಬ್ಯಾಚುಲರ್‌ ದಿನಗಳಿಂದಲೂ ನನಗೆ ಅಡುಗೆ ಮಾಡುವುದು ಅಂತಂದರೆ ಇಷ್ಟ. ಮದುವೆಯಾದ ಮೇಲೆ ಅಡುಗೆ ಮಾಡುವುದು ಕಡಿಮೆಯಾಗಿರಬಹುದು ಆದರೆ ನಾನು ಪೂರ್ತಿ ಬದಲಾಗಿಲ್ಲ. ಸಮಯ ಸಿಕ್ಕಾಗಲೆಲ್ಲಾ ಅಡುಗೆ ಮಾಡುತ್ತಲೇ ಇರುತ್ತೇನೆ. ಹೆಂಡ್ತಿಗೆ ಒಂಚೂರು ಬಿಡುವು ನೀಡುತ್ತೇನೆ ಎನ್ನುವುದು ಒಂದು ರೀತಿಯ ಖುಷಿಯಾದರೆ, ಅಡುಗೆ ಮಾಡುವುದರಲ್ಲಿರುವ ಖುಷಿ ಇನ್ನೊಂದು ಕಡೆ. ಹೀಗಾಗಿ ಅಡುಗೆ ಮಾಡುವುದು ನನ್ನ ಪಾಲಿಗೆ ಡಬ್ಬಲ್‌ ಖುಷಿ. ನಾನು ಗೊಜ್ಜು, ತಂಬುಳಿ ತುಂಬಾ ಚೆನ್ನಾಗಿ ಮಾಡುತ್ತೇನೆ ಅನ್ನೋದು ಅದನ್ನು ಸವಿದವರ ಕಾಂಪ್ಲಿಮೆಂಟು. ನಾನೇ ಮಾಡಿರುವುದರಿಂದ ನನಗೆ ಹೇಳಲು ಬರುವುದಿಲ್ಲ. ಅಲ್ಲದೆ ನಮ್ಮ ಕೆಲಸವನ್ನು ನಾವೇ ಹೊಗಳಿಕೊಳ್ಳಬಾರದಲ್ಲ. 

ಹೊಸ ಹೊಸ ಶೈಲಿಯ ಅಡುಗೆಯನ್ನು ಕಲಿತುಕೊಂಡು ಮಾಡುವುದೆಂದರೂ ಇಷ್ಟ. ಒಂದು ಬಾರಿ ಮನೆಯಲ್ಲೇ ಚಾಕೊಲೇಟನ್ನು ತಯಾರಿಸಿದ್ದೆ. ಬಿಸಿ ಬಿಸಿ ಚಾಕೊಲೇಟನ್ನು ಸವಿಯುವ ಮಜವೇ ಬೇರೆ, ಅದರಲ್ಲೂ ಮನೆಯಲ್ಲೇ ತಯಾರಾಗಿದ್ದು!

ನನ್ಹೆಂಡ್ತಿ ಮುಂಚೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಗು ಆದ ಮೇಲೆ ಅದರ ಆರೈಕೆಯಲ್ಲಿ ಹೆಚ್ಚಿನ ಸಮಯ ಕೊಡುವ ಸಲುವಾಗಿ ಮನೆಯಲ್ಲೇ ಇದ್ದಾಳೆ. ಅವಳ ಆರೈಕೆ ಮಾಡುವ ಅವಕಾಶಕ್ಕೆ ನಾನು ಕಾಯುತ್ತಿರುತ್ತೇನೆ. ಸಿಕ್ಕ ಕೂಡಲೆ ಬಳಸಿಕೊಂಡುಬಿಡುತ್ತೇನೆ. ಹಿಂದೆಲ್ಲಾ ಕೆಲಸದ ಮಧ್ಯೆ ಓದೋದು, ಬರೆಯೋದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಈಗ, ಬೇಬಿ ಶಾಪಿಂಗ್‌, ಹೆಲ್ತ್‌ ಚೆಕಪ್‌ ಅದೂ ಇದೂ ಅಂತ ಟೈಮ್‌ ಹೋಗಿಬಿಡುತ್ತೆ. ಇತ್ತೀಚಿಗಷ್ಟೆ ನಾವು ಮೂವರು ಊಟಿ ಹೋಗಿದ್ವಿ. ವರ್ಷವೇ ಕಳೆದಿತ್ತು. ಎಲ್ಲೂ ಹೋಗಲಾಗಿರಲಿಲ್ಲ. ಅಂದ ಹಾಗೆ ನನ್ನ ಮಗಳ ಹೆಸರು ಹೇಳುವುದನ್ನೆ ಮರೆತಿದ್ದೆ. “ಸವಿ ಮುಂಬನಿ’ ಅಂತ. ಒಂದು ಮಾತಂತೂ ಸತ್ಯ. ನಾನೆಲ್ಲೇ ಇರಲಿ, ಏನೇ ಮಾಡುತ್ತಿರಲಿ. ಮಗಳು ಮತ್ತು ನನ್ನವಳು ಜೊತೆಗಿದ್ದರೆ ಸಮಯ ಹೋಗೋದೇ ಗೊತ್ತಾಗೋದಿಲ್ಲ. ಐ ಲವ್‌ ಮೈ ಲೈಫ್!
 - ಸುಶ್ರುತ
ರೇಟಿಂಗ್‌ 6

ಯಾರಿಂದಲೂ ಆಕ್ಷೇಪ ಬಂದಿಲ್ಲ ಅನ್ನೋದೇ ಕಾಂಪ್ಲಿಮೆಂಟು
ಪತ್ನಿ ಡಾಕ್ಟರ್‌ ಆಗಿರೋದರಿಂದ ಕರೆ ಬಂದಾಗಲೆಲ್ಲಾ ಆಸ್ಪತ್ರೆಗೆ ಹೋಗಬೇಕಾಗುತ್ತೆ. ಹೋಗದೇ ಇರೋಕೆ ಆಗಲ್ಲ. ರಾತ್ರಿಯೂ ಎಮರ್ಜೆನ್ಸಿ ಕರೆಗಳು ಬರುತ್ತವೆ. ಆದರೆ ಒಳ್ಳೆಯ ಸುದ್ದಿ ಎಂದರೆ ನಾನು ಮನೆಯಿಂದಲೇ ಕೆಲಸ ಮಾಡುತ್ತೇನೆ. ಮನೆಗೆ ಸಂಬಂಧಿಸಿದ ಏನೇ ಕೆಲಸಗಳಿದ್ದರೂ ಜವಾಬ್ದಾರಿಗಳಿದ್ದರೂ ನಮ್ಮ ಅನುಕೂಲಕ್ಕೆ ತಕ್ಕಂತೆ ಹಂಚಿಕೊಳ್ಳುತ್ತೇವೆ. ಹಿಂದೆ ಮಿಡ್‌ ಡೇ ಎನ್ನುವ ಆಂಗ್ಲ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಫ್ರೀಲ್ಯಾನ್ಸ್‌ ವ್ಯಂಗ್ಯಚಿತ್ರಕಾರನಾಗಿದ್ದೇನೆ. ನಾನು ಮನೆಯಲ್ಲಿರುವುದರಿಂದ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಬಹುದು. ಅವಳೂ ಯಾವುದೇ ಚಿಂತೆಯಿಲ್ಲದೆ ನಿರಾಳವಾಗಿ ಆಸ್ಪತ್ರೆಗೆ ಹೋಗುತ್ತಾಳೆ. 

ಅಡುಗೆಯ ವಿಷಯಕ್ಕೆ ಬಂದರೆ ನನ್ನ ಪತ್ನಿ ಬೆಸ್ಟ್‌ ಕುಕ್‌. ಇದೊಂದು ವಿಷಯದಲ್ಲಿ ನಾನು ಮನೆಯಲ್ಲಿದ್ದೂ ಸ್ವಲ್ಪ ಹಿಂದೆ ಅಂತ ಹೇಳಬಹುದು. ನಾನು ಅಡುಗೆ ಮಾಡುತ್ತೇನೆ, ಮಾಡುವುದಿಲ್ಲ ಎಂದೇನಿಲ್ಲ. ಆದರೆ ನಾನು ಅಡುಗೆ ಮನೆ ಪ್ರವೇಶಿಸುವುದೇ ಅಪರೂಪ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಪತ್ನಿ ಅಡುಗೆ ಮಾಡುವಾಗ ನಾನು ಬಂದರೆ ಅಡುಗೆ ಹಾಳಾಗುತ್ತೆ ಎನ್ನುತ್ತಾಳಲ್ಲ. ರೋಗಿ ಬಯಸಿದ್ದೂ ಹಾಲು ಅನ್ನ, “ವೈದ್ಯೆ’ ಹೇಳಿದ್ದೂ ಹಾಲು ಅನ್ನ ಅಂತ ಸುಮ್ಮನಿದ್ದುಬಿಡುತ್ತೇನೆ. ಹೀಗಾಗಿ ಅವಳು ಅಡುಗೆ ಮಾಡುವಾಗ ಸಹಾಯ ಮಾಡಲು ಹೋಗಿ ಡಿಸ್ಟರ್ಬ್ ಮಾಡುವುದಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಅವಳಿಗೆ ಕೆಲಸವಿದ್ದಾಗ, ಅಡುಗೆ ಮಾಡಲು ಸಾಧ್ಯವಾಗದೇ ಇದ್ದಾಗ ನಾನೇ ಏನಾದರೂ ತಯಾರಿಸುತ್ತೇನೆ. ದೋಸೆ, ಉಪ್ಪಿಟ್ಟು, ಚಿಕನ್‌ ಕೀಮಾ, ಟಿಕ್ಕಾ ಮಸಾಲಾ, ಕಬಾಬ್‌ ಇವೆಲ್ಲವೂ ನನ್ನ ಮೆನುನಲ್ಲಿರುವ ಕೆಲ ಬಗೆಗಳು. ತುಂಬಾ ಚೆನ್ನಾಗಿ ಮಾಡುತ್ತೇನೆ ಅಂತೇನು ನಾನು ಹೇಳುವುದಿಲ್ಲ. ಇಲ್ಲಿಯ ತನಕ ನನ್ನ ಅಡುಗೆಯ ಕುರಿತು ಯಾರಿಂದಲೂ ಆಕ್ಷೇಪ ಬಂದಿಲ್ಲ ಅನ್ನೋದು ತೃಪ್ತಿಕರ ಸಂಗತಿ.

ಮನೆಯಿಂದಲೇ ಕೆಲಸ ಮಾಡಲು ಶುರು ಮಾಡಿದ ಮೇಲೆ ಬದುಕು ಸುಲಲಿತವಾಗಿದೆ. ಏಕೆಂದರೆ ನಾನು ಮಾಡುವ ಚಿತ್ರಕ್ಕೆ ಮೊದಲ ಸುತ್ತಿನ ವಿಮರ್ಶಕರು ಮನೆಯಲ್ಲೇ ಸಿಗುತ್ತಾರೆ. ಮಗನೋ, ಪತ್ನಿಯೋ ವ್ಯಂಗ್ಯಚಿತ್ರದ ಕುರಿತು ಏನಾದರೂ ಗೊಂದಲವಿದ್ದರೆ, ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾರೆ. ಆದು ನನ್ನ ಕೆಲಸವನ್ನು ಇನ್ನಷ್ಟು ಹರಿತವಾಗಿಸುತ್ತೆ. ಅವರು ಪ್ರಶ್ನೆಗಳಿಂದಲೇ ಎಷ್ಟೋ ಬಾರಿ ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದೇನೆ. ಕುಟುಂಬದೊಂದಿಗೆ ಇರುವುದು ಖುಷಿ ಕೊಡುತ್ತೆ.
– ಸತೀಶ್‌ ಆಚಾರ್ಯ
ರೇಟಿಂಗ್‌ 6

ಫಿಶ್‌ ಫ್ರೈ ಸ್ಪೆಷಲಿಸ್ಟ್‌ ಅಪ್ಪ
ಮಾರ್ಕೆಟ್‌ನಿಂದ ಫ್ರೆಶ್‌ ಮೀನು ತರುತ್ತೇನೆ. ಅದನ್ನು ಚೆನ್ನಾಗಿ ತೊಳೆದು ಕಟ್‌ ಮಾಡುತ್ತೇನೆ. ಮುಂದಿನ ಹಂತ ಮೇರಿಯನೇಟ್‌. ಅಂದರೆ ಹೊಸ ಪದಸೃಷ್ಟಿಯಲ್ಲಿ ಹೇಳಬೇಕೆಂದರೆ ಉಪ್ಪೀಕರಣಗೊಳಿಸುವುದು. ಒಂದು ಟೇಬಲ್‌ ಸ್ಪೂನ್‌ ಉಪ್ಪು, ಅರಿಶಿನ, ಫಿಶ್‌ ಮಸಾಲಾ, ಬೆಳ್ಳುಳ್ಳಿ ಪೇಸ್ಟ್‌, ಕಡೆಯಲ್ಲಿ ಲಿಂಬೆ ರಸ, ಇವಿಷ್ಟನ್ನೂ ಮೀನಿನ ಮೇಲೆ ಸವರುತ್ತೇನೆ. ಇಲ್ಲಿಗೆ ಉಪ್ಪೀಕರಣದ ಹಂತ ಮುಗಿಯಿತು. ಒಂದು ಕಪ್‌ನಲ್ಲಿ ಮೊಸರು ಹಾಕಿ ಉಪ್ಪೀಕರಣಗೊಳಿಸಿದ ಮೀನನ್ನು ಮೊಸರಿನಲ್ಲಿ ಅದ್ದಿ ಸುಮಾರು ಅರ್ಧ ಗಂಟೆಯ ಕಾಲ ಬಿಡಿ. ನಂತರ ತವಾದಲ್ಲಿ ಒಂದು ಸ್ಪೂನ್‌ ಎಣ್ಣೆ ಹಾಕಿ ಮೀನನ್ನು ಬಿಡುತ್ತೇನೆ. ನಾನು ಮಾಡೋ ಈ “ಫಿಶ್‌ ಫ್ರೈ’ಅನ್ನು ಮಗಳು ಸಮುದ್ಯತಾ ಮತ್ತು ಮಗ ಆಯುಶ್‌ ಇಷ್ಟಪಟ್ಟು ತಿನ್ನುತ್ತಾರೆ. ತಂದೆ ತಯಾರಿಸುವ ಅಡುಗೆಯನ್ನು ಮಕ್ಕಳು ಚಪ್ಪರಿಸಿ ತಿನ್ನುತ್ತಾರಲ್ಲ, ಅದು ಕೊಡೋ ಸುಖದ ಮುಂದೆ ಬೇರೇನು ನಿಲ್ಲದು.

ಕಲ್ಮಿ ಕಬಾಬ್‌, ಚಿಕನ್‌ ಇನ್ನೂ ಹಲವು ನಾನ್‌ ವೆಜ್‌ ಅಡುಗೆಯನ್ನು ಮನೆಯಲ್ಲೇ ತಯಾರಿಸುತ್ತೇನೆ. ಹೊರಗಡೆ ಸಿಗೋ ಪಿಜ್ಜಾ, ಬರ್ಗರ್‌ಗಳಿಂದ ಮಕ್ಕಳು ದೂರವುಳಿಯಲಿ ಅನ್ನೋದು ನನ್ನಾಸೆ. ಆದರೆ ಪತ್ನಿ ಯಾವತ್ತಾದರೂ ಒಮ್ಮೆ ಮಕ್ಕಳಿಗೆ ಹೊರಗಿನ ತಿಂಡಿಗಳನ್ನು ಕೊಡಿಸುತ್ತಾಳೆ. ನನಗೋ ಭಯ, ಮಕ್ಕಳು ಎಲ್ಲಿ ಆ ಬಾಯಿರುಚಿಯ ಹಿಂದೆ ಬಿದ್ದು ಮನೆಯೂಟದ ರುಚಿಯನ್ನು, ಮಹತ್ವವನ್ನು ಕಳೆದುಕೊಂಡುಬಿಡುತ್ತಾರೋ ಅಂತ. 
ನನ್ನ ಇನ್ನೊಂದು ಭಯ, ಅಡುಗೆ ಮನೆಯಿಂದಾಚೆಯದ್ದು. ಕುಟುಂಬ ನಿರ್ವಹಣೆ ಎಂದರೆ ಅಲ್ಲಿ ಪತಿ ಪತ್ನಿ ಇಬ್ಬರದೂ ಪಾಲಿರುತ್ತದೆ. ಯಾರೂ ಹೆಚ್ಚಲ್ಲ ಯಾರೂ ಕಡಿಮೆಯೂ ಅಲ್ಲ ಎನ್ನುವ ಮನಸ್ಥಿತಿ ಇಬ್ಬರಲ್ಲೂ ಇರಬೇಕಾಗುತ್ತೆ. ಹಾಗಿದ್ದಾಗ ಮಾತ್ರ ಮಕ್ಕಳು ಬೆಳೆಯಲು ಬೇಕಾದ ಆರೋಗ್ಯಕರ ಪರಿಸರ ನಿರ್ಮಾಣವಾಗುತ್ತೆ. ಮಕ್ಕಳು ಯಾವತ್ತೂ ಹೊರಜಗತ್ತಿನ ವಿಸ್ಮಯ ಕಳ್ಕೊàಬಾರದು ಅನ್ನೋದು ನನ್ನ ಕಾಳಜಿ. ಅದರ ಸುತ್ತಲೇ ನನ್ನೆಲ್ಲಾ ಗಮನ ಇರೋದು. ನವನವೀನ ವಸ್ತುಗಳನ್ನು ಕೊಟ್ಟು ಮಕ್ಕಳನ್ನು ಚಿಕ್ಕಂದಿನಿಂದಲೇ ಮಟೀರಿಯಲಿಸ್ಟಿಕ್‌ ಮಾಡುವುದು ಎಷ್ಟು ಸರಿ. ಅದರ ಬದಲಾಗಿ ಮಕ್ಕಳಿಗೆ ಹೊಸ ಹೊಸ ಜಾಗಗಳನ್ನು ತೋರಿಸೋದು, ಮಳೆಯ ಸೊಗಸನ್ನು ಪರಿಚಯಿಸೋದು, ಕ್ಯಾಂಪ್‌ ಫೈರ್‌ ಹಾಕಿ ಅದರ ಬೆಚ್ಚಗಿನ ಅನುಭವವನ್ನು ಕೊಡೋದು, ಒಟ್ಟಿನಲ್ಲಿ ಪ್ರಪಂಚ ಎಷ್ಟು ಸುಂದರವಾಗಿದೆ ಅನ್ನೋದರ ನೆನಪುಗಳನ್ನು ನಾನವರಿಗೆ ಕಟ್ಟಿಕೊಡುತ್ತೇನೆ. 
– ಡಾವೆಂಕಿ
ರೇಟಿಂಗ್‌ 7

ನಿರೂಪಣೆ: ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next