Advertisement
ಬೆಂಗಳೂರಿನ ಮೆಟ್ರೋ ರೈಲಿನ ದೃಶ್ಯ. ಪಕ್ಕದಲ್ಲಿ ಕುಳಿತ ಸುಮಾರು ನಲ್ವತ್ತೈದರ ಆಸುಪಾಸಿನ ಮಹಿಳೆ, ಅಲ್ಲೇ ನಿಂತಿದ್ದ ಒಬ್ಬ ಯುವಕನ ಬಳಿ ಪರಿಚಯದ ನಗೆ ಬೀರಿ ಮಾತು ಶುರುಹಚ್ಚಿಕೊಂಡರು. ಅತ್ಯಂತ ಉಚ್ಚ ಸ್ಥಾಯಿಯಲ್ಲಿ ಮಾತಾಡುತ್ತಿದ್ದ ಆಕೆಯ ಧ್ವನಿ, ಬೇಡ ಬೇಡವೆಂದರೂ ಕಿವಿಗೆ ಬೀಳುತ್ತಿತ್ತು. ಇಳಿಯುವ ತನಕ ಪ್ರಪಂಚದ ಆಗುಹೋಗುಗಳ ಬಗ್ಗೆ, ಹವಾಮಾನ, ಜಿಎಸ್‌ಟಿ, ಮೋದಿ, ಟ್ರಂಪ್- ಹೀಗೆ ಒಂದೇ ಒಂದು ವಿಷಯವನ್ನೂ ಬಿಡದೇ ಮಾತಾಡುತ್ತಾ ಹೋದಳು. ತಿಳಿವಳಿಕಸ್ಥೆಯಂತೆ ಕಂಡಿದ್ದ ಆಕೆ ಆ ಹುಡುಗನಿಗೆ “ಸರಿ, ಊಟಕ್ಕೇನು ಮಾಡ್ಕೊಂಡಿದ್ದೀಯಾ?’ ಎನ್ನುತ್ತಾಳೆ. “ಹೋಟೆಲ… ಊಟ ತಿಂದೂ ತಿಂದೂ ಸಾಕಾಗಿದೆ, ಮಾಮಿ’ ಅಂದ ಆತ. ಒಂದೇ ಏಟಿಗೆ, “ಹಾಗಾದ್ರೆ, ಮದ್ವೆ ಮಾಡ್ಕೊಂಡ್ ಬಿಡೋದಲ್ವಾ?’ ಎಂದು ಅದೊಂದು ಪರಿಹಾರವೆಂಬಂತೆ ಹೇಳಿದ ಆಕೆಯ ಮೇಲ್ಯಾಕೋ ಅಸಹನೆ ಹುಟ್ಟಿತು.
Related Articles
Advertisement
ಇತ್ತೀಚೆಗೆ ಮದುವೆ ಆದ ಹುಡುಗಿಯೊಬ್ಬಳ ಕಣ್ಣೀರಿನಲ್ಲಿ ಹುದುಗಿದ್ದ ನೂರೆಂಟು ನೋವು ಇದನ್ನೇ ಹೇಳುತ್ತಿತ್ತು. ತನ್ನ ಜೀವನದ ಮುಕ್ಕಾಲು ಭಾಗವನ್ನು ಮನೆಯವರಿಗೆ ಮೆದುವಾದ ಇಡ್ಲಿ, ತರಹೇವಾರಿ ದೋಸೆ ಮಾಡಿ ಕೊಟ್ಟುಕೊಂಡು ಬದುಕಿ ತನ್ನ ಇಷ್ಟಾನಿಷ್ಟಗಳನ್ನೇ ಮರೆತು ಬದುಕುವ ನೂರೆಂಟು ಮಹಿಳೆಯರನ್ನು ಕಾಣುವಾಗ ಸ್ವಂತಿಕೆ- ಸ್ವಾತಂತ್ರÂಗಳ ಇಚ್ಛೆ ಕೂಡಾ ಅವರಲ್ಲಿ ಸತ್ತು ಹೋಗಿರುವಂತೆ ಕಾಣಿಸುತ್ತದೆ. ಅದರಲ್ಲೂ ಮನೆಯಲ್ಲಿ ತಲಾ ಒಬ್ಬರಿಗೊಂದರಂತೆ ವಿಧ ವಿಧದ ಅಡುಗೆಗಳನ್ನು ಮಾಡುತ್ತಾ ಅಡುಗೆಮನೆಯೊಳಗೆಯೇ ಬೆಂದು ಹೋಗುವ ಜೀವಗಳೂ ಅನೇಕ. ಇಲ್ಲಿ ಬಹುತೇಕರ ಪದಕೋಶದಲ್ಲಿ ಇಲ್ಲ ಎಂಬ ಪದ ಇಲ್ಲವೇ ಇಲ್ಲವೇನೋ ಅನಿಸುತ್ತದೆ. ಅದೆಷ್ಟೇ ಬವಣೆಯಿರಲಿ, ಸುಸ್ತಿರಲಿ, ಚಕಾರವೆತ್ತದೆ ಸಾಂಗೋಪಾಂಗವಾಗಿ ಊಟೋಪಚಾರಗಳನ್ನು ಮಾಡಿ ಬಡಿಸುತ್ತಾ ತೊಳೆ, ತಿಕ್ಕು, ಒರೆಸು, ಮಾಡು ಎಂಬ ಅಡುಗೆಮನೆಯೊಳಗಿನ ಚಕ್ರದೊಳಗಿಂದ ಹೊರಬಾರದೆ ಜೀವ ಸವೆಸಿದ, ಸವೆಸುತ್ತಿರುವವರು ಅನೇಕ ಮಂದಿಯಿದ್ದಾರೆ. ಮದುವೆಯ ಶಾಸ್ತ್ರಗಳಲ್ಲಿ ವಧೂ ಗೃಹಪ್ರವೇಶದ ಬಳಿಕ ಸಟ್ಟುಗ ಹಿಡಿಸುವ, ತೆಂಗಿನಕಾಯಿ ತುರಿಯಿಸುವ ಶಾಸ್ತ್ರಗಳು ಅದ್ಯಾವುದೋ ಕಾಲದಲ್ಲಿ ಸಮಾಜ ಒಪ್ಪಿ ನಡೆಸಿಕೊಂಡು ಬರುತ್ತಿರುವ ಸಾಂಕೇತಿಕವಾದ ಆಚಾರಗಳಾದರೆ, ಇಂದಿನ ವ್ಯವಸ್ಥೆಗಳಲ್ಲಿ ಇವಕ್ಕೆ ಪ್ರಾಮುಖ್ಯತೆ ಕೊಡಬಾರದೆನಿಸುತ್ತದೆ. ಕಡೆಯದಾಗಿ, ಅಡುಗೆ ಮಾಡುವುದು ತೊಂದರೆಯಲ್ಲ, ತಪ್ಪಲ್ಲ. ಆದರೆ, ಇಲ್ಲಿ ಸಹಜವಾಗಿ ಎಲ್ಲ ಜವಾಬ್ದಾರಿಗಳು ಎಲ್ಲರದೆಂಬ ಮನಃಸ್ಥಿತಿ ಹುಟ್ಟಬೇಕಾಗಿರುವ ಅಗತ್ಯವಿದೆ. ಮದುವೆಗೂ ಅಡುಗೆಗೂ ಇರುವ ಅನಗತ್ಯ ನಂಟು ಪ್ರತಿ ಮನೆ- ಮನಗಳಿಂದ ಕಿತ್ತೂಗೆದಾಗ ಮಾತ್ರ ಇದು ಸಾಧ್ಯ. – ಶ್ರುತಿ ಶರ್ಮಾ, ಬೆಂಗಳೂರು