ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಬಿಜೆಪಿಯೊಳಗೇ ಆಕ್ಷೇಪದ ಧ್ವನಿ ಕೇಳಿಬಂದಿದೆ. ಅಲ್ಪಸಂಖ್ಯಾತ ಮೋರ್ಚಾ ಹಾಗೂ ಅಲ್ಪಸಂಖ್ಯತ ಘಟಕಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖರು ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹಾ ಕಾಯ್ದೆಯ ಅಗತ್ಯವಿಲ್ಲ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ, ಸರ್ಕಾರದ ಅಧೀನದಲ್ಲೇ ಇರುವ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೋಯ್ಲುಸ್ ಡಿಸೋಜಾ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರ ಚರ್ಚೆಯ ಮುನ್ನಲೆಗೆ ಬಂದಿದೆ. ಮತಾಂತರ ನಿಷೇದ ಕಾಯ್ದೆ ಕುರಿತ ಗೊಂದಲದ ಹೇಳಿಕೆಗಳು ಸಮಾಜದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿ ಮಾಡಿದಂತೆ ಕಾಣುತ್ತಿವೆ. ಈ ಗೊಂದಲಗಳನ್ನು ತೊಡೆದು ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಪ್ರಸ್ತುತ ಇರುವ ಕಾನೂನೇ ಪ್ರಬಲವಾಗಿದ್ದು ಬಲವಂತದ ಮತಾಂತರಕ್ಕೆ ಅವಕಾಶವೇ ಇಲ್ಲ. ಹಾಗಾಗಿ ವಿವಿಧ ಸಮಾಜಗಳ ಮುಖಂಡರೊಂದಿಗೆ ಚರ್ಚಿಸಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಸಾಧಕ-ಭಾದಕಗಳನ್ನು ಪರಾಮರ್ಶಿಸಿದ ನಂತರವೇ ಉದ್ದೇಶಿತ ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಬೇಕೆಂದು ಜೋಯ್ಲುಸ್ ಡಿಸೋಜ ಅವರು ಆಗ್ರಹಿಸಿದ್ದಾರೆ.
ಸಿಎಂ ಹಾಗೂ ಸರ್ಕಾರಕ್ಕೆ ಬರೆದಿರುವ ಪತ್ರ ಹೀಗಿದೆ
ಮತಾಂತರ ನಿಷೇಧ ವಿಷಯಕ್ಕೆ ಸಂಬಂಧಿಸಿದಂತೆ, ಸಮಾಜದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ತಮ್ಮ ಗಮನ ಸೆಳೆಯಬಯಸುತ್ತೇನೆ. ಶತಮಾನಗಳಿಂದ ಕ್ರೈಸ್ತ ಸಮುದಾಯವು ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ, ಶಿಕ್ಷಣ ಹಾಗೂ ಸಮಾಜ ಸೇವೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಮತಾಂತರ ನಿಷೇದ ಕಾಯ್ದೆ ಕುರಿತಂತೆ ಕೆಲ ಗೊಂದಲದ ಹೇಳಿಕೆಗಳು ಸಮಾಜದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿ ಮಾಡಿದಂತೆ ಕಾಣುತ್ತಿವೆ. ಈ ಗೊಂದಲಗಳನ್ನು ತೊಡೆದು ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ.
ವಿವಿಧ ಸಮಾಜಗಳ ಮುಖಂಡರೊಳಗೊಂಡ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಸಾಧಕ-ಭಾದಕಗಳನ್ನು ಪರಾಮರ್ಶಿಸಿದ ನಂತರವೇ ಉದ್ದೇಶಿತ ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ.