ಜೇವರ್ಗಿ: ಕೇವಲ ಮೆರವಣಿಗೆಗಳಿಂದ ಮನಸ್ಸುಗಳ ಪರಿವರ್ತನೆಯಾಗಲು ಸಾಧ್ಯವಿಲ್ಲ, ಬಸವಾದಿ ಶರಣರ ವಚನ ಸಾಹಿತ್ಯದ ಅಧ್ಯಯನದಿಂದ ಮಾತ್ರ ಮಾನಸಿಕ ನೆಮ್ಮದಿ, ಮನಸ್ಸುಗಳ ಪರಿವರ್ತನೆಯಾಗಲು ಸಾಧ್ಯ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನ್ನಮಲ್ಲಯ್ಯ ಹಿರೇಮಠ ಹೇಳಿದರು.
ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ಶುಕ್ರವಾರ ತಾಲೂಕಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಎಲ್ಲ ಸಮಸ್ಯೆಗಳಿಗೂ ಉತ್ತರ ವಚನ ಸಾಹಿತ್ಯ, ಶರಣ ಸಾಹಿತ್ಯದಲ್ಲಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆ ಮೊಟ್ಟ ಮೊದಲು ಕೊಟ್ಟವರು ವಿಶ್ವಗುರು ಅಣ್ಣ ಬಸವಣ್ಣ. ಸ್ಥಾಪಿಸಿದ ಅನುಭವ ಮಂಟಪದಲ್ಲಿ ಹಡಪದ ಅಪ್ಪಣನವರು ಕಾಯಕ ಜೀವಿಯಾಗಿ ಅನೇಕ ವಚನಗಳನ್ನು ರಚಿಸುವ ಮೂಲಕ ಶ್ರೇಷ್ಠ ವಚನಕಾರರಾಗಿ ಪ್ರಸಿದ್ದಿಯಾಗಿದ್ದಾರೆ. ಪ್ರತಿಯೊಬ್ಬ ಸಮಾಜದ ಬಾಂಧವರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಹಡಪದ ಅಪ್ಪಣ್ಣನವರ ಆಚಾರ, ವಿಚಾರ, ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಬಿಆರ್‌ಪಿ ಸಂತೋಷ ಹೂಗಾರ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷೆ ಮಲ್ಲಮ್ಮ ನೀಲಕಂಠ ಹಳಿಮನಿ, ತಾಪಂ ಇಒ ಪ್ರಭು ಮಾನೆ, ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಹಡಪದ ಸಮಾಜದ ಅಧ್ಯಕ್ಷ ಸಂತೋಷ ಮದರಿ, ಸಿಡಿಪಿಒ ಶಿವಪ್ರಕಾಶ ಹಿರೇಮಠ, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಇದಕ್ಕೂ ಮುನ್ನ ಪಟ್ಟಣದ ಹಳೆಯ ತಹಶೀಲ್ ಕಚೇರಿಯಿಂದ ಹಡಪದ ಅಪ್ಪಣ್ಣನ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಕಸಾಪ ಅಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ, ಬಸವಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ, ಚನ್ನಮಲ್ಲಯ್ಯ ಹಿರೇಮಠ, ಚಂದ್ರಶೇಖರ ಸೀರಿ, ಭೀಮರಾಯ ನಗನೂರ, ಭಗವಂತ್ರಾಯ ಬೆಣ್ಣೂರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.