ಲಕ್ನೋ: ಮದುವೆ ಕಾರಣಕ್ಕಾಗಿ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂತರ್ ಧರ್ಮೀಯ ವಿವಾಹ ಮಾಡಿಕೊಂಡ ದಂಪತಿಗಳು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದ್ದು, ಅರ್ಜಿಯನ್ನು ವಜಾ ಮಾಡಲಾಗಿದೆ.
ಅರ್ಜಿಯನ್ನು ಸಲ್ಲಿಸಿದ ಯುವತಿ ಮುಸ್ಲಿಂ ಆಗಿದ್ದು, ಯುವಕ ಹಿಂದೂ ಧರ್ಮದವನಾಗಿದ್ದಾನೆ. ಮದುವೆಗೆ ಒಂದು ತಿಂಗಳ ಮೊದಲು ಯುವತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಈ ದಂಪತಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರು ಕೇವಲ ಮದುವೆ ಕಾರಣಕ್ಕಾಗಿ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:Covid ಕಾಲದಲ್ಲಿ ಸಹಾಯ ಮಾಡಿದ ಪೊಲೀಸ್ ಸಿಬ್ಬಂದಿಗೆ ಮೊಮ್ಮಗನ ಮದುವೆಯಲ್ಲಿ ಸನ್ಮಾನಿಸಿದ ಅಜ್ಜಿ
2014 ರ ನೂರ್ ಜಹಾನ್ ಬೇಗಂ, ಅಲಿಯಾಸ್ ಅಂಜಲಿ ಮಿಶ್ರಾ, ಮತ್ತು ಉತ್ತರ ಪ್ರದೇಶ ಸರ್ಕಾರ ಮತ್ತು ಇತರರ ವಿರುದ್ಧದ ಪ್ರಕರಣದಲ್ಲಿ ನೀಡಿದ್ದ “ವಿವಾಹದ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ” ಎಂಬ ಆದೇಶವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ, ಭಾರತದ ಸಂವಿಧಾನದ 226ನೇ ವಿಧಿ ಅನ್ವಯ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲ ಎಂದು ಹೇಳಿ ಅರ್ಜಿಯನ್ನು ತಳ್ಳಿಹಾಕಿದರು.