ಹೊಸದಿಲ್ಲಿ: ಹಿಂದೂ ಮಹಿಳೆಯನ್ನು ಮತಾಂತರಗೊಳಿ ಸಿದ ಮದುವೆಯಾಗಿರುವ ಪ್ರಕರಣದ ಎನ್‌ಐಎ ತನಿಖೆಗೆ ಸಹಕರಿಸಲು ಕೇರಳ ಪೊಲೀಸರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ತನಿಖೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಎನ್‌ಐಗೆ ಹಸ್ತಾಂತರಿಸಬೇಕು ಹಾಗೂ ತನಿಖೆಗೆ ಎಲ್ಲ ರೀತಿಯ ಸಹಕಾರವನ್ನು ನೀಡಬೇಕೆಂದು ಹೇಳಿದೆ.
ಮಹಿಳೆಯ ಪತಿ ಶಫಿನಾ ಜಹಾನ್ ಎನ್‌ಐಎ ತನಿಖೆಗೆ ಸಲ್ಲಿಸಿದ ಆಕ್ಷೇಪವನ್ನು ತಿರಸ್ಕರಿಸಿರುವ ನ್ಯಾಯಾಲಯ ಎನ್‌ಐಎ ಸರಕಾರಿ ತನಿಖಾ ಸಂಸ್ಥೆ. ಅದರ ಮೇಲೆ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ. ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಪ್ರಕರಣದ ಸಂಪೂರ್ಣ ಚಿತ್ರಣ ನಮಗೆ ಸಿಗಬೇಕು ಎಂದಿದೆ.
ಫಿರ್ಯಾದುದಾರನಿಗೆ ಪ್ರಕರಣದ ಸ್ವತಂತ್ರ ನಿಲುವು ಬಹಿರಂಗವಾಗುವ ಅಪೇಕ್ಷೆ ಇರುವಂತೆ ಕಾಣಿಸುವುದಿಲ್ಲ. ಇದೊಂದು ಬಿಡಿ ಪ್ರಕರಣವೇ ಅಥವ ಬೇರೇನಾದರೂ ಷಡ್ಯಂತ್ರವಿದೆಯೇ ಎನ್ನುವುದು ಸ್ಪಷ್ಟವಾಗಬೇಕು. ಅನಂತರವೇ ತೀರ್ಪು ನೀಡಲು ಸಾಧ್ಯ ಎಂದು ನ್ಯಾಯಾಲಯ ಹೇಳಿದೆ.
ಕೊಲ್ಲಂ ಜಿಲ್ಲೆಯ ವೈಕಂನ ನಿವೃತ್ತ ಯೋಧರರೊಬ್ಬರ ಪುತ್ರಿಯನ್ನು ಜಹಾನ್ ಮತಾಂತರಿಸಿ ಹದಿಯಾ ಎಂಬ ಹೆಸರಿಟ್ಟು ಕಳೆದ ವರ್ಷ ಮದುವೆಯಾಗಿದ್ದಾರೆ. ಯುವತಿಯ ತಂದೆ ತನ್ನ ಮಗಳನ್ನು ಐಸಿಸ್ ಉಗ್ರಳನ್ನಾಗಿಸುವ ಉದ್ದೇಶದಿಂದ ಮತಾಂತರಿಸಲಾಗಿದೆ. ಇದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿದ ದೂರು ನೀಡಿದ ಬಳಿಕ ಕೇರಳ ಹೈಕೋರ್ಟ್ ಈ ಮದುವೆಯನ್ನು ಅಸಿಂಧುಗೊಳಿಸಿದೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜಹಾನ್ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಜಹಾನ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತ ಎಂಬ ವಿಚಾರ ತನಿಖೆ ಸಂದರ್ಭದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಈ ಮತಾಂತರ ಪ್ರಕರಣದ ಮೇಲೆ ಅನುಮಾನದ ಕರಿನೆರಳು ಇದೆ. ಯುವತಿಯ ತಂದೆ ಮಗಳನ್ನು ಸಿರಿಯಾಕ್ಕೆ ಕರೆದುಕೊಂಡು ಹೋಗಿ ಐಸಿಸ್‌ಗೆ ಸೇರಿಸುವ ಸಂಚು ಇದರ ಹಿಂದೆ ಇದೆ ಎಂದು ಆರೋಪಿಸಿದ್ದಾರೆ. ಯುವತಿ ಪ್ರಸ್ತುತ ತಂದೆ ತಾಯಿ ಜತೆಗಿದ್ದಾಳೆ.