Advertisement

ಸಿಟಿ ಸಮಸ್ಯೆ ಸರಿಮಾಡಲು ಸಂವಾದ

01:38 PM Apr 12, 2018 | Team Udayavani |

ಬೆಂಗಳೂರು: ರಾಜದಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಕುಡಿಯುವ ನೀರು ಪೂರೈಕೆ ಸಮಸ್ಯೆ, ಅಪರಾಧ ಪ್ರಕರಣಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಸಂವಾದ ನಡೆಸಿ ಸಲಹೆ ಪಡೆದರು.

Advertisement

ನವ ಬೆಂಗಳೂರಿನಿಂದ ನವ ಭಾರತ ನಿರ್ಮಾಣ ಅಭಿಯಾನದಡಿ, ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಬಿಜೆಪಿ ವತಿಯಿಂದ ಆಯೋಜಿಸಿದ್ದ ನಗರದ ಸಮಸ್ಯೆ ಕುರಿತ ಚರ್ಚಾ ಸ್ಪರ್ಧೆಯ ವಿಜೇತರೊಂದಿಗೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳ ಸಲಹೆ, ಸೂಚನೆಗಳನ್ನು ಆಲಿಸಿದ ಬಿಎಸ್‌ವೈ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ಪರಿಹಾರಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸುವುದಾಗಿ ಭರವಸೆ ನೀಡಿದರು.

“ಟ್ರಾಫಿಕ್‌ ಗೋಳು ನರಕದ ಬಾಳು’ ಎಂಬ ವಿಷಯದ ಮೇಲೆ ಮಾತನಾಡಿದ ಮನೀಶ್‌ ಸಿಂಗ್‌ ಹಾಗೂ ಕ್ರೇಶಾನು ಕೌಲ್‌, ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ತುರ್ತಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಕಷ್ಟಸಾಧ್ಯ. ಬೇರೆ ರಾಜ್ಯದ ವಲಸೆಯೂ ಕಾರಣ ಎಂದರು. 

ಶ್ಯಾಮ್‌ ಸುಂದರ್‌ ಮತ್ತು ಸೋನುಕುಮಾರ್‌ ಜೈನ್‌ ಮಾತನಾಡಿ, ಕಸದ ಸಮಸ್ಯೆ ದಿನೇ ದಿನೆ ಉಲ್ಬಣವಾಗುತ್ತಿದೆ. ಗುತ್ತಿಗೆ ವ್ಯವಸ್ಥೆ ಸರಿಯಾಗಿಲ್ಲದೇ ಇರುವುದೇ ಇದಕ್ಕೆ ಮೂಲ ಕಾರಣ. ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಾಗಿಸುವ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದರು.

 ಇದಕ್ಕೆ ಉತ್ತರಿಸಿದ ಯಡಿಯೂರಪ್ಪ, ಗಾರ್ಡನ್‌ ಸಿಟಿ ಈಗ ಗಾರ್ಬೆಜ್‌ ಸಿಟಿಯಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿ ಇದನ್ನು ಮಾಫಿಯಾ ಮಾಡಿದ್ದಾರೆ. ಕಸ ವಿಲೇವಾರಿಗೆ ಮೀಸಲಿಟ್ಟಿರುವ ಹಣದಲ್ಲಿ ಕೇವಲ ಶೇ.25ರಷ್ಟು ಮಾತ್ರ ಸದ್ಬಳಕೆಯಾಗುತ್ತಿದೆ. ಕಸ ಎತ್ತುವ ಮಾಫಿಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಲಿದ್ದೇವೆ ಎಂದು ಹೇಳಿದರು.

Advertisement

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ವಿದ್ಯಾರ್ಥಿಗಳು ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಧಿಕಾರಿಗಳು ನಿಷ್ಠಾವಂತರಾದಾಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ರಾಜಕೀಯ ನಾಯಕರು ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ ಭ್ರಷ್ಟಾಚಾರ ನಿಯಂತ್ರಣದ ಜವಾಬ್ದಾರಿ ನೀಡುವಂತಾಗಬೇಕು ಎಂದರು.

ಕೊಳೆಗೇರಿಗಳನ್ನು ನಿರ್ಮಾಣ ಮಾಡಬಾರದು. ಕೊಳೆಗೇರಿಗಳಲ್ಲಿರುವ ನಿವಾಸಿಗಳಿಗೆ ವಸತಿ ಸಮುತ್ಛಯ ನಿರ್ಮಿಸಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಬೇಕು. ಮಳೆ ನೀರಿನ ಸದ್ಬಳಕೆಗಾಗಿ ಕೆರೆಗಳ ಪುನಶ್ಚೇತನ ಮತ್ತು ಕೆರೆಗಳ ನಿರ್ಮಾಣ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಬೇಕು.

ಕಾನೂನು ಸುವ್ಯವಸ್ಥೆ ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು ಎಂದು ಸಂವಾದದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ಸಂಧ್ಯಾ, ಸುಪ್ರಿಯಾ, ಆಶ್ರಿತಾ, ಅಕ್ಷಯ್‌, ಕಾರ್ತಿಕ್‌, ಶಾಲಿನಿ,
ಗೋವರ್ಧನ್‌, ವಿನಯ, ಶಶಿಕಾ ಮೊದಲಾದವರು ಸಂವಾದದಲ್ಲಿ ಮಾತನಾಡಿದರು.

ಕೆಲಸ ಮಾಡುವುದೇ ವಿಶ್ರಾಂತಿ ನಿರಂತರ ಜನರ ಮಧ್ಯೆ ಇದ್ದು ಕೆಲಸ ಮಾಡುವುದೇ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿಶ್ರಾಂತಿ. ಪ್ರಧಾನಿ ಮೋದಿಯವರೇ ಇದಕ್ಕೆ ಪ್ರೇರಣೆ ಮತ್ತು ಕಾರ್ಯಕರ್ತರೇ ಆತ್ಮಸ್ಥೈರ್ಯ,’ ಎಂದು ಬಿ.ಎಸ್‌.ಯಡಿಯೂರಪ್ಪ ತಮ್ಮ ಆರೋಗ್ಯದ ಗುಟ್ಟನ್ನು
ಬಿಚ್ಚಿಟ್ಟರು. “ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೇ ನನಗೆ ಆದರ್ಶ. ನಿತ್ಯ ಎಲ್ಲಿ ಪ್ರವಾಸದಲ್ಲಿ ಇರುತ್ತೇನೋ ಅಲ್ಲಿಯೇ ತಿಂಡಿ ತಿನ್ನುತ್ತೇನೆ. ಮನೆಗೆ ಹೋಗುವುದು ಕಡಿಮೆ. ಜನರ ಮಧ್ಯೆಯೇ ಇರುತ್ತೇನೆ. ಮನೆಯಲ್ಲಿ ಹಬ್ಬ, ವಿಶೇಷ ಆಚರಣೆಗೆ ಹೋಗದೇ ವರ್ಷಗಳೇ ಕಳೆದಿವೆ,’ ಎಂದು ಹೇಳಿದರು.

ಯುವಕರೇ ಓಟು ಮಾಡಿ
“ದೇಶದ ಯುವ ಜನರ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ವಿಶ್ವಾಸ ಇರಿಸಿಕೊಂಡಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಓಟು ಮಾಡಬೇಕು ಮತ್ತು ತಮ್ಮ ಮಿತ್ರರನ್ನು ಓಟು ಮಾಡುವಂತೆ ಪ್ರೇರೇಪಿಸಬೇಕು. ಓಟಿ ಪ್ರಮಾಣ ಹೆಚ್ಚಾದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ. ಸರ್ಕಾರ ಹೇಗೆ ನಡೆಯುತ್ತದೆ ಎಂಬು ದನ್ನು ಯುವಕರು ಸದಾ ಗಮನಿಸುತ್ತಿರ ಬೇಕು,’ ಎಂದು ಯಡಿಯೂರಪ್ಪ ಕಿವಿಮಾತು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next