ಹುಬ್ಬಳ್ಳಿ: ಅಸ್ಪೃಶ್ಯತೆ ಎಂಬ ಪೆಡಂಭೂತ ತಂದೊಡ್ಡುತ್ತಿರುವ ಅಪಾಯ, ಡಾ| ಅಂಬೇಡ್ಕರ್ ಅವರ ರಾಷ್ಟ್ರೀಯವಾದ ಚಿಂತನೆ, ದಲಿತರ ಹೆಸರಲ್ಲಿ ರಾಜಕೀಯ ಷಡ್ಯಂತ್ರ.. ಹೀಗೆ ದಲಿತ ಸಮುದಾಯದ ಮುಚ್ಚಿಟ್ಟ ಚರಿತ್ರೆಯನ್ನು ತೆರೆದಿಡುವ ಯತ್ನ ಸಂವಾದದ ಮೂಲಕ ನಡೆಯಿತು.
ರಾಕೇಶ ಶೆಟ್ಟಿ ಅವರು ಬರೆದಿರುವ “ಮುಚ್ಚಿಟ್ಟ ದಲಿತ ಚರಿತ್ರೆ’ ಕೃತಿ ಕುರಿತಾಗಿ ಇಲ್ಲಿನ ನಿರಾಮಯ ಫೌಂಡೇಶನ್ ಕೆಸಿಸಿಐ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಆರೆಸ್ಸೆಸ್‌ನ ಪ್ರಜ್ಞಾಪ್ರವಾಹ ಪ್ರಮುಖ ರಘುನಂದನ, ವಿಧಾನ ಪರಿಷತ್ತು ನೂತನ ಸದಸ್ಯ ಪ್ರೊ| ಸಾಬಣ್ಣ ತಳವಾರ, ಲೇಖಕ ರಾಕೇಶ ಶೆಟ್ಟಿ, ನಿರಾಮಯ ಫೌಂಡೇಶನ್ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಅವರು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದರು.
ಅಸ್ಪೃಶ್ಯತೆ ಹಿಂದೂ ಚಿಂತನೆಗೆ ವಿರುದ್ಧ: ಪ್ರಜ್ಞಾ ಪ್ರವಾಹದ ಪ್ರಮುಖ ರಘುನಂದನ ಆನ್‌ಲೈನ್ ಮೂಲಕ ಮಾತನಾಡಿ, ಅಸ್ಪೃಶ್ಯತೆ ಹಿಂದೂ ಚಿಂತನೆಗೆ ವಿರುದ್ಧವಾಗಿದೆ. ಡಾ| ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ, ಅವರೊಬ್ಬ ರಾಷ್ಟ್ರೀಯ ನಾಯಕ. ಬಸವಣ್ಣ ನವರ ಜಯಂತಿಯಂತೆ ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕಾಗಿದೆ. ಅಂಬೇಡ್ಕರ್ ಮುಸ್ಲಿಂ ಲೀಗ್ ಬಗ್ಗೆ ಸ್ಪಷ್ಟ ಚಿಂತನೆ ಹೊಂದಿದ್ದರಿಂದಲೇ ಅವರೊಂದಿಗೆ ಕೈ ಸೇರಿಸಲಿಲ್ಲ ಎಂದರು. ಮಹಾಪ್ರಾಣ ಜೋಗೇಂದ್ರನಾಥ ಮಂಡಲ ದಲಿತರ ನಾಯಕರಾಗಿದ್ದರೂ ಏನನ್ನೋ ನಂಬಿ ಮುಸ್ಲಿಂ ಲೀಗ್ ಜತೆ ಕೈ ಸೇರಿಸಿದರು. ಪಾಕ್ -ಬಾಂಗ್ಲಾದಲ್ಲಿ ನೆಲೆಸಿ, ಭ್ರಮನಿರಸನಗೊಂಡು ಕೊನೆಗೆ ಭಾರತಕ್ಕೆ ಮರಳಿದರು. ದಲಿತ ಯುವಕರಿಗೆ ಅಂಬೇಡ್ಕರ್ ಚಿಂತನೆಗಳು ಮಾರ್ಗದರ್ಶನ ಆಗಬೇಕೆ ಹೊರತು, ಮಂಡಲ ಅವರ ನಡೆ ಅಲ್ಲ ಎಂದು ಹೇಳಿದರು.
ಮತಾಂತರಕ್ಕೆ ಬಲಿಯಾಗದಿರಿ: ವಿಧಾನ ಪರಿಷತ್ತು ಸದಸ್ಯ ಪ್ರೊ| ಸಾಬಣ್ಣ ತಳವಾರ ಮಾತನಾಡಿ, ಡಾ| ಅಂಬೇಡ್ಕರ್ ಹಾಗೂ ಮಂಡಲ ಇಬ್ಬರು ಶೋಷಣೆಗೊಳಗಾದ, ನೋವುಂಡ ಸಮಾಜಗಳಿಂದ ಬಂದ ನಾಯಕರು. ಆದರೆ ಇಬ್ಬರೂ ತುಳಿದ ದಾರಿ ವಿಭಿನ್ನವಾಗಿತ್ತು. ದೇಶ ವಿಭಜನೆಯನ್ನುಅಂಬೇಡ್ಕರ್ ನೇರವಾಗಿ ವಿರೋಧಿಸಿದ್ದರು. ಡಾ|ಅಂಬೇಡ್ಕರ್ ಹಾಗೂ ಮಹಾಪ್ರಾಣ ಜೋಗೇಂದ್ರ ನಾಥ ಮಂಡಲ ಅವರು ಇಂದು ಇದ್ದಿದ್ದರೆ ಸಿಎಎಕಾಯ್ದೆಯನ್ನು ಸ್ವಾಗತಿಸುತ್ತಿದ್ದರು. ಮತಾಂತರಕ್ಕೆಹೆಚ್ಚು ಸಿಲುಕಿದ್ದವರು ದಲಿತರಾಗಿದ್ದು, ಈ ಬಗ್ಗೆ ಜಾಗೃತಿಗೊಳ್ಳಬೇಕಾಗಿದೆ ಎಂದರು.
ನಿರಾಯಮ ಫೌಂಡೇಶನ್ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಫೌಂಡೇಶನ್ ಕನ್ನಡ ನಾಡಿನ ಅಜ್ಞಾತ ಹುತಾತ್ಮ ಸ್ವಾತಂತ್ರ್ಯಯೋಧರನ್ನು ಗುರುತಿಸುವುದು, ಸ್ಮರಿಸುವುದು ಸೇರಿದಂತೆ ಪರಿಸರ, ಆರೋಗ್ಯ ಇನ್ನಿತರ ಹಲವು ಕಾರ್ಯಕ್ರಮ ಕೈಗೊಂಡಿದೆ ಎಂದರು. ಗುರು ಭದ್ರಾಪುರ ಸ್ವಾಗತಿಸಿದರು. ರಾಮು ದೇಶಪಾಂಡೆ ನಿರೂಪಿಸಿದರು.
ಸಿಎಎ, ಜೆಎನ್‌ಯು ಹೋರಾಟ, ಹತ್ರಾಸ್ ಘಟನೆಗಳನ್ನು ಮುಂದಿಟ್ಟುಕೊಂಡು ಕೆಲ ದೇಶ ವಿರೋಧಿ ಶಕ್ತಿಗಳು ದಲಿತರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿವೆ. ಇದರ ಹಿಂದಿನ ಷಡ್ಯಂತ್ರ ಅರಿತುಕೊಳ್ಳಬೇಕಾಗಿದೆ. ಮತಾಂತರ ತಡೆಗೆ ನಾವೆಲ್ಲ ಸನ್ನದ್ಧರಾಗಬೇಕಾಗಿದೆ. –
ರಘುನಂದನ, ಪ್ರಜ್ಞಾ ಪ್ರವಾಹದ ಪ್ರಮುಖ
ಮುಚ್ಚಿಟ್ಟ ದಲಿತ ಚರಿತ್ರೆ ಕೃತಿಯನ್ನು ಉಹಾಪೋಹದಡಿ ಬರೆದಿಲ್ಲ. ಅನೇಕದಾಖಲೆಗಳನ್ನು ಇರಿಸಿಕೊಂಡೇ ಬರೆದಿದ್ದೇನೆ. ಡಾ| ಅಂಬೇಡ್ಕರ್ ಅವರಂತೆ ಮಹಾ ಪ್ರಾಣ ಜೋಗೇಂದ್ರನಾಥ ಮಂಡಲ ದಲಿತ ಪರ ಕಾಳಜಿ ಹೊಂದಿದ್ದರೂ ತಪ್ಪು ನಡೆಗಳಿಂದ ರಾಜಕೀಯವಾಗಿ ದುರಂತ ನಾಯಕರಾಗಬೇಕಾಯಿತು.
-ರಾಕೇಶ ಶೆಟ್ಟಿ, ಲೇಖಕ