Advertisement

ಸಮಾವೇಶಗಳಿಂದ ಸಮಾಜಕ್ಕೆ ಬಲ: ಕನ್ಹೇರಿಯ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ

09:57 PM Nov 20, 2022 | Team Udayavani |

ರಬಕವಿ-ಬನಹಟ್ಟಿ: ಕರ್ನಾಟಕ ಲಿಂಗಾಯತ ನೀಲಗಾರ ಸಮಾಜವು ಚಿಕ್ಕ ಸಮಾಜವಾಗಿದೆ. ಇದು ಎಲ್ಲ ಸಮಾಜದ ಜೊತೆಗೆ ಹೊಂದಿಕೊಂಡು ಹೋಗವು ಸಮಾಜವಾಗಿದೆ. ಸಮಾಜದ ಸಮಾವೇಶಗಳಿಂದ ಸಮಾಜಕ್ಕೆ ಬಲ ಬರುತ್ತದೆ ಎಂದು ಕೊಲ್ಲಾಪುರ ಕನ್ಹೇರಿಯ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನುಡಿದರು.

Advertisement

ಅವರು ಭಾನುವಾರ ಸಮೀಪದ ರಾಮಪುರದ ದಾನೇಶ್ವರಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಮಟ್ಟದ ೭ನೇ ಲಿಂಗಾಯತ ನೀಲಗಾರ ಸಮಾವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾಜದ ಒಳಿತಾಗಿ ಸಮಾವೇಶಗಳನ್ನು ನಡೆಸಬೇಕು. ನಮ್ಮ ಸಮಾಜದ ಸ್ಥಿತಿ ಗತಿಗಳನ್ನು ಅರಿತುಕೊಳ್ಳಲು ಸಮಾವೇಶಗಳ ಅಗತ್ಯವಿದೆ. ಸಮಾಜದ ಅಭಿವೃದ್ಧಿಗಾಗಿ, ಯುವ ಪೀಳಿಗೆಯನ್ನು ಚೆನ್ನಾಗಿ ಬೆಳೆಸುವ ನಿಟ್ಟಿನಲ್ಲಿ, ಸಮಾಜದ ಮೇಲೆ ನಡೆಯುವ ದೌರ್ಜನ್ಯ, ಆಕ್ರಮಣ, ದಬ್ಬಾಳಕೆಗಳನ್ನು ತಡೆಗಟ್ಟಲು, ಸಮಾಜದಲ್ಲಿರುವ ಜನರ ತೊಂದರೆಗಳಿಗೆ ಆಸರೆಯಾಗಲು, ನಮ್ಮ ಪರಸ್ಪರ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳಲು, ಉದ್ಯೋಗ, ವ್ಯವಹಾರ ಕುರಿತು ಚರ್ಚೆ, ಚಿಂತನ ಮಂಥನ ಮಾಡಲು ಸಮಾವೇಶಗಳ ಅಗತ್ಯವಿದೆ ಎಂದು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಸಂಘಟಿತವಾದ ಸಮಾಜ ಅಭಿವೃದ್ಧಿಯಾಗುತ್ತದೆ. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವದರಿಂದ ಸಮಾಜ ಬಲಾಢ್ಯಗೊಳ್ಳುತ್ತದೆ. ಸಂಘಟನೆಯನ್ನು ಸಮಾಜದ ಅಭಿವೃದ್ಧಿಗಾಗಿ ಮಾತ್ರ ಬಳಸಿಕೊಳ್ಳಬೇಕು. ಸಮಾಜವನ್ನು ದರ್ಬಳಕೆ ಮಾಡಿಕೊಳ್ಳಬಾರದು ಎಂದರು.

ಲಿಂಗಾಯತ ನೀಲಗಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ವಿಶ್ವನಾಥ ಸೋರಗಾವಿ ಮಾತನಾಡಿ, ಲಿಂಗಾಯತ ನೀಲಗಾರ ಸಮಾಜವು ಅತ್ಯಂತ ಚಿಕ್ಕ ಸಮುದಾಯವಾಗಿದೆ. ನಾವು ನಿಜವಾದ ಅಲ್ಪ ಸಂಖ್ಯಾತರಾಗಿದ್ದೇವೆ. ನಾವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಲಿಂಗಾಯತ ನೀಲಗಾರ ಸಮಾಜ ಪ್ರಾಧಿಕಾರ ರಚನೆಯನ್ನು ಮಾಡಬೇಕು. ರಬಕವಿ ಬನಹಟ್ಟಿಯಲ್ಲಿ ಲಿಂಗಾಯತ ನೀಲಗಾರ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Advertisement

ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ, ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು, ಚಿಕ್ಕಾಲಗುಂಡಿಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ, ಅಂಬಾದಾಸ ಕಾಮೂರ್ತಿ ಮಾತನಾಡಿದರು. ವೇದಿಕೆಯ ಮೇಲೆ ಅಶೋಕ ವಿಜಾಪುರ, ರಮೇಶ ನೀಲವಾಣಿ, ಶಿವಾನಂದ ಶಿರೋಳ, ಚಿದಾನಂದ ಕಟಗೇರಿ, ಕಲ್ಲಪ್ಪ ನೀಲವಾಣಿ, ಬಸವರಾಜ ಹನಗಂಡಿ, ಅಶೋಕ ಹೊಸೂರ, ಬಸಲಿಂಗಪ್ಪ ಜಡಿ, ಸಿದ್ದಲಿಂಗೇಶ್ವರ ಬುದ್ನಿ ಇದ್ದರು.

ರಮೇಶ ಮುಂಡಗನೂರ ಸ್ವಾಗತಿಸಿದರು. ಚಂದ್ರಕಾಂತ ಹೊಸೂರ ಮತ್ತು ಶಂಭು ಮಮದಾಪುರ ನಿರೂಪಿಸಿದರು. ಸಿದ್ದು ಜಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುರೇಶ ನೀಲವಾಣಿ, ಗುರುರಾಜ ಮಮದಾಪುರ, ಅನಿಲ ಹೊಸೂರ, ಬಸವರಾಜ ಸಿದ್ದಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕರ್ನಾಟಕ ಲಿಂಗಾಯತ ನೀಲಗಾರ ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next