ಜಗತ್ತಿನ ಅತೀದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ವೆಬ್‌ಸೈಟ್ ಬಿನಾನ್ಸ್ ಗೆ ಉಗ್ರ ನಂಟು ಸುತ್ತಿಕೊಂಡಿದೆ. ಹಮಾಸ್, ಅಲ್‌ಖಾಯಿದಾ, ಐಸಿಸ್, ಪ್ಯಾಲೆಸ್ತೀನ್ ಇಸ್ಲಾಮಿಕ್ ಜೆಹಾದ್ ಸೇರಿದಂತೆ ಪ್ರಮುಖ ಉಗ್ರ ಸಂಘಟನೆಗಳು ಬಿನಾನ್ಸ್ ಮೂಲಕವೇ ಹಣ ವಹಿವಾಟು ನಡೆಸಿವೆ. ಈ ಹಿನ್ನೆಲೆಯಲ್ಲಿ ಇದರ ಸಿಇಒ ಚಾಂಗ್‌ಪೆಂಗ್ ಝಾವೋ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಜತೆಗೆ ಚಾಂಗ್‌ಪೆಂಗ್ ಸಿಇಒ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ.
ಏನಿದು ವಿವಾದ?
ಬಿನಾನ್ಸ್ ಎಂಬುದು ಜಗತ್ತಿನ ಅತೀದೊಡ್ಡ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್ ವೇದಿಕೆ. ಇದನ್ನು ಹಮಾಸ್, ಅಲ್‌ಖಾಯಿದಾ, ಪ್ಯಾಲೆಸ್ತೀನ್ ಇಸ್ಲಾಮಿಕ್ ಸ್ಟೇಟ್, ಐಸಿಸ್‌ನಂಥ ಉಗ್ರ ಸಂಘಟನೆಗಳು ತಮ್ಮ ನಡುವಿನ ಹಣ ವಿನಿಮಯಕ್ಕೆ ಬಳಕೆ ಮಾಡಿಕೊಂಡಿವೆ. ಈ ಬಗ್ಗೆ ಅಮೆರಿಕ ಸರಕಾರ ಗಮನಹರಿಸಿದ್ದು, ಉಗ್ರರಿಗೆ ಮುಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕಾಗಿ ಬಿನಾನ್ಸ್ ಮೇಲೆ ಸಿಟ್ಟಾಗಿದೆ.
ಹೊರಬಿದ್ದಿದ್ದು ಹೇಗೆ?
2019ರಲ್ಲೇ ಕಂಪೆನಿಯ ಚೀಫ್ ಕಾಂಪ್ಲಾಯನ್ಸ್ ಆಫೀಸರ್ ಸ್ಯಾಮ್ಯೂಯಲ್ ಲಿಮ್ ಅವರು ಸಹೋದ್ಯೋಗಿ ಜತೆ ಚಾಟ್ ಮಾಡುವಾಗ ಉಗ್ರರು ಹಣ ವಿನಿಮಯ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಸ್ತಾವಿಸಿದ್ದರು. ಆಗ ಹಮಾಸ್ ಉಗ್ರರು 600 ಡಾಲರ್ ವಿನಿಮಯ ಮಾಡಿಕೊಂಡಿದ್ದರು. ಇದು ಸ್ವಲ್ಪ ಪ್ರಮಾಣವೇ ಆಗಿದ್ದರೂ, ಬೇರೆ ಬೇರೆ ಉಗ್ರ ಸಂಘಟನೆಗಳು ಹಣ ವಿನಿಮಯ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು.
ಅಮೆರಿಕದಿಂದ ಭಾರೀ ದಂಡ
ಉಗ್ರರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕಾಗಿ ಅಮೆರಿಕ ಸರಕಾರವು ಬಿನಾನ್ಸ್ ಮೇಲೆ 4.3 ಬಿಲಿಯನ್ ಡಾಲರ್‌ನಷ್ಟು ಬೃಹತ್ ಪ್ರಮಾಣದ ದಂಡ ಹಾಕಿದೆ. ಅಲ್ಲದೆ ಕಂಪೆನಿಯ ಸಿಇಒ ಚಾಂಗ್‌ಪೆಂಗ್ ವಿರುದ್ಧವೂ ಕ್ರಿಮಿನಲ್ ಕೇಸ್ ಹಾಕಲಾಗಿದೆ. ಇದಕ್ಕೆ ಪೂರಕವಾಗಿ ಚಾಂಗ್‌ಪೆಂಗ್ ಕೂಡ ತಮ್ಮಿಂದ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.