Advertisement

ಯೇಸು ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿಕೆ ವಿವಾದ: ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ

10:09 AM Dec 28, 2019 | sudhir |

ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿ ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ 10 ಎಕರೆ ಸರಕಾರಿ ಭೂಮಿ ಮಂಜೂರು ಮಾಡಿಸಿ ಅಲ್ಲಿ ಯೇಸುಕ್ರಿಸ್ತನ 114 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ಮುಂದಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ನಡೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌.ಅಶೋಕ್‌, ಟ್ರಸ್ಟ್‌ಗೆ ನೀಡಿರುವುದು ಸರಕಾರಿ ಗೋಮಾಳ ಜಾಗವೇ ಹೊರತು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸಂಬಂಧಪಟ್ಟ ಆಸ್ತಿಯಲ್ಲ. ಆದರೆ ಡಿ.ಕೆ.ಶಿವಕುಮಾರ್‌ ಅವರು ಯಾವ ಅರ್ಥದಲ್ಲಿ ಭೂಮಿ ಖರೀದಿಸಿ ನೀಡಿರುವುದಾಗಿ ಹೇಳುತ್ತಿದ್ದಾರೋ ಗೊತ್ತಿಲ್ಲ. ಗೋಮಾಳ ಭೂಮಿಯನ್ನು ಯಾರೊಬ್ಬರೂ ದಾನವಾಗಿ ನೀಡಲು ಸಾಧ್ಯವಿಲ್ಲ. ಸರಕಾರವಷ್ಟೇ ಕೊಡಬಹುದು. ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿಗಳಿಂದ ಮೂರ್‍ನಾಲ್ಕು ದಿನಗಳಲ್ಲಿ ಸಮಗ್ರ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಆದೇಶಗಳನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಡಿಕೆಶಿ ತಿರುಗೇಟು
ಬಿಜೆಪಿ ನಾಯಕರ ಟೀಕೆಗೆ ಪ್ರತ್ಯುತ್ತರ ನೀಡಿರುವ ಡಿ.ಕೆ.ಶಿವಕುಮಾರ್‌, ಯೇಸುಕ್ರಿಸ್ತನ ಪ್ರತಿಮೆಯನ್ನು ನಾನು ನಿರ್ಮಿಸುತ್ತಿಲ್ಲ. ಜಾಗವನ್ನಷ್ಟೇ ಖರೀದಿ ಮಾಡಿ ನೀಡಿದ್ದೇನೆ. ಸರಕಾರ ಆ ಜಾಗ ವಾಪಸ್‌ ಪಡೆಯುವುದೇ ಎಂದು ನೋಡೋಣ ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕರ ವಿರೋಧ
ಕ್ರಿಸ್‌ಮಸ್‌ ಹಬ್ಬದ ದಿನದಂದು ಡಿ.ಕೆ.ಶಿವಕುಮಾರ್‌ ಅವರು ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ 10 ಎಕರೆ ಭೂಮಿ ಮಂಜೂರು ಪತ್ರ ಹಸ್ತಾಂತರಿಸಿದ ಸುದ್ದಿ ಬಹಿರಂಗವಾಗುತ್ತಿದ್ದಂತೆ ವಿವಾದ ಸ್ವರೂಪ ಪಡೆದುಕೊಂಡಿದೆ. ಸಚಿವ ಎಸ್‌.ಸುರೇಶ್‌ ಕುಮಾರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತಿತರ ನಾಯಕರು ಡಿ.ಕೆ. ಶಿವಕುಮಾರ್‌ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಂಸದ ಅನಂತ ಕುಮಾರ್‌ ಹೆಗಡೆ ಅವರು ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ತೀವ್ರವಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.
***
ವಿಧಾನಸೌಧದಲ್ಲಿ ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌.ಅಶೋಕ್‌, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ನಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್‌ 283ರಲ್ಲಿ 231.35 ಎಕರೆ ಸಕಾರಿ ಗೋಮಾಳವಿದೆ. ಸುತ್ತಮುತ್ತಲ ಪ್ರದೇಶದಲ್ಲಿ 2,000 ಜಾನುವಾರುಗಳಿದ್ದು, ಅದರ ಸಂಖ್ಯೆ ಆಧರಿಸಿ 548 ಎಕರೆ ಗೋಮಾಳ ಜಾಗವಿರಬೇಕಿತ್ತು. ಆದರೆ 231 ಎಕರೆ ಭೂಮಿ ಮಾತ್ರ ಇದೆ. ಈ ಪೈಕಿ 10 ಎಕರೆ ಭೂಮಿಯನ್ನು ಟ್ರಸ್ಟ್‌ಗೆ ಮಂಜೂರು ಮಾಡಿದಂತಿದೆ ಎಂದು ಹೇಳಿದರು.

2018ರಲ್ಲಿ 10 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಬಳಿಕ ಮಾರ್ಗಸೂಚಿ ದರ ಹೊರತುಪಡಿಸಿ ಭೂಪರಿವರ್ತನೆ ಶುಲ್ಕಕ್ಕೆ ಹಿಂದಿನ ಸರಕಾರ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಇದಕ್ಕೆ ಸಚಿವ ಸಂಪುಟದ ನಿರ್ಣಯ ಅಗತ್ಯವಾಗಿದ್ದು, ಹಿಂದಿನ ಸರಕಾರ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಇದನ್ನು ಪುರಾತನ ಕಾಲದಿಂದಲೂ ಕಪಾಲಿ ಬೆಟ್ಟ ಎಂದು ಕರೆಯಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಹೆಸರು ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಕಪಾಲಿ ಬೆಟ್ಟದ ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಪಡೆದು ಬೇರೆ ಚಟುವಟಿಕೆ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Advertisement

ಡಿ.ಕೆ.ಶಿವಕುಮಾರ್‌ ಅವರು ದಾನ ನೀಡುತ್ತಿರುವುದಾಗಿ ಹೇಳಿದಾಗ ಅವರು ಖಾಸಗಿ ಭೂಮಿ ಖರೀದಿಸಿ ನೀಡುತ್ತಿದ್ದಾರೇನೋ ಎಂದುಕೊಂಡಿದ್ದೆ. ಆದರೆ ಅದು ಅವರು ದಾನವಾಗಿ ನೀಡಿರುವ ಜಾಗವಲ್ಲ. ಬದಲಿಗೆ ಸರಕಾರಿ ಗೋಮಾಳ ಜಾಗ. ಈ ಬಗ್ಗೆ ಸಮಗ್ರ ವರದಿಯನ್ನು ಮೂರ್‍ನಾಲ್ಕು ದಿನಗಳಲ್ಲಿ ಸಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈ ವಿಚಾರದ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಆಂದೋಲನ ನಡೆಯುತ್ತಿದೆ. ಟ್ರಸ್ಟ್‌ಗೆ ನೀಡಿರುವ ಜಾಗ ಸರಕಾರಿ ಗೋಮಾಳವಾಗಿದ್ದು, ಜಾನುವಾರುಗಳಿಗೆ ಮೀಸಲಿಟ್ಟಿದ್ದ ಜಾಗವಾಗಿದೆ. ಇದು ಅಲ್ಲಿನ ಶಾಸಕರು, ಸಂಸದರು ಸಹಿತ ಯಾರೊಬ್ಬರ ಸ್ವತ್ತಲ್ಲ. ಬದಲಿಗೆ ಸರಕಾರಿ ಗೋಮಾಳ ಎಂದು ಪುನರುಚ್ಚರಿಸಿದರು.

ವಾಪಸ್‌ ಪಡೆಯುವುದೇ ನೋಡೋಣ
ಬೃಹತ್‌ ಯೇಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿರುವ ವಿಚಾರ ವಿವಾದ ಸೃಷ್ಟಿಸುತ್ತಿದ್ದಂತೆ ಸದಾಶಿವನಗರದ ನಿವಾಸದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಯೇಸುಕ್ರಿಸ್ತನ ಪ್ರತಿಮೆಯನ್ನು ನಾನು ನಿರ್ಮಿಸುತ್ತಿಲ್ಲ. ನಾನು ಆ ಜಾಗವನ್ನಷ್ಟೇ ಖರೀದಿಸಿ ನೀಡಿದ್ದೇನೆ. ಜನರೇ ಹಣ ಕೂಡಿಸಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ಸರಕಾರ ಜಾಗವನ್ನು ವಾಪಸ್‌ ಪಡೆಯುವುದೇ ನೋಡೋಣ ಎಂದು ಹೇಳಿದರು.

ನಾನು ರಾಮ ಮಂದಿರವನ್ನೂ ಕಟ್ಟಿದ್ದೀನಿ, ಮಾರಮ್ಮ ದೇವಸ್ಥಾನವನ್ನೂ ಕಟ್ಟಿಸಿದ್ದೇನೆ. ಆಂಜನೇಯನ ಮಂದಿರ ಸಹಿತ ಹತ್ತಾರು ಮಂದಿರಗಳನ್ನು ಕಟ್ಟಿಸಿದ್ದೇನೆ. ಬಿಜೆಪಿ ಮುಖಂಡರು ನನ್ನ ಬಗ್ಗೆ ಮಾತನಾಡದೆ ಇನ್ನು ಯಾರ ಬಗ್ಗೆ ಮಾತನಾಡುತ್ತಾರೆ. ಇಂಥ ಕಾರ್ಯಗಳಿಗೆ ಸರಕಾರ ನೂರಾರು ಎಕರೆ ಭೂಮಿ ನೀಡಿದೆ. ಸದಾಶಿವನಗರದಲ್ಲೇ ಬಿಜೆಪಿಯವರು ಜಾಗ ಕೊಟ್ಟಿಲ್ಲವೇ ಎಂದು ಪ್ರಶ್ನಿಸಿದರು.

ನಮ್ಮ ತಂದೆಯ ತಂದೆ, ನಾನು ಸಹಿತ ಎಲ್ಲರೂ ಜಮೀನುಗಳನ್ನು ನೀಡಿದ್ದೇವೆ. ತಮಟೆ ಹೊಡೆದುಕೊಂಡು ಯಾರನ್ನೋ ಓಲೈಸಿಕೊಳ್ಳಲು ಇದನ್ನು ಮಾಡುತ್ತಿಲ್ಲ. ನನ್ನ ವೈಯಕ್ತಿಕ ಹಣ ನೀಡಿ ಗುಡ್ಡದ ಮೇಲೆ ಜಾಗ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನೇ ಹೇಳಿ ಕೆಂಪೇಗೌಡ ಜಯಂತಿ ಆಚರಣೆ ಆರಂಭಿಸಿದೆ. ನಿರ್ಗತಿಕರ ಪುನರ್ವಸತಿ ಕೇಂದ್ರದ ಜಾಗದಲ್ಲಿ ಕ್ರೈಸ್ತರ ಅಧೀನದಲ್ಲಿದ್ದ ಜಾಗವನ್ನು ಬಿಡಿಸಿ ಕೇಂಪೇಗೌಡ ಪ್ರಾಧಿಕಾರಕ್ಕೆ ನೀಡಲಾಗಿದೆ. ಇದರಲ್ಲಿ ಯಾವ ರಾಜಕಾರಣ ಇಲ್ಲ. ರಾಜಕಾರಣ ಮಾಡಲು ಈಗ ಚುನಾವಣೆ ಇದೆಯೇ ಎಂದು ಹೇಳಿದರು.

ಒಟ್ಟು 36 ಪಾದ್ರಿಗಳನ್ನು ಕೊಟ್ಟ ಭಾಗವದು. ಯೇಸುಕ್ರಿಸ್ತನ ಏಕಶಿಲಾ ಪ್ರತಿಮೆ ಮಾಡಬೇಕು ಎಂದು ಯೋಚಿಸಲಾಗಿತ್ತು. ಇದೊಂದಕ್ಕೆ ಮಾಡಿಲ್ಲ. ನೂರಾರು ದೇವಸ್ಥಾನಗಳನ್ನು ಕಟ್ಟಿಸಿದ್ದೇನೆ. ದೊಡ್ಡಆಲಹಳ್ಳಿಯಲ್ಲಿ ಮಸೀದಿಗಳಿಗೂ ಸಹಾಯ ಮಾಡಿದ್ದೇನೆ. ಬಿಜೆಪಿಯವರು ಇದನ್ನು ಅಸ್ತ್ರವಾಗಿಯಾದರೂ ಬಳಸಿಕೊಳ್ಳಲಿ, ಬಾಣ, ಗದೆಯನ್ನಾಗಿಯಾದರೂ ಮಾಡಿಕೊಳ್ಳಲಿ. ಅವರು ನನ್ನನ್ನು ನೆನಪಿಸಿಕೊಳ್ಳಬೇಕು. ಹಾಗಾಗಿ ನೆಪಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next