Advertisement

ಪಂಜಾಬ್ ಸಿಎಂ ಮಾನ್ ಕಚೇರಿ: ಭಗತ್ ಸಿಂಗ್  ಫೋಟೋ V/s ಹಳದಿ ಬಣ್ಣದ ಬಗ್ಗೆ ವಿವಾದವೇಕೆ?

03:42 PM Mar 19, 2022 | Team Udayavani |

ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ದಿನಗಳ ನಂತರ, ಸಿಎಂ ಕಚೇರಿಯಲ್ಲಿ ಗೋಡೆಗೆ ತೂಗು ಹಾಕಲಾಗಿರುವ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಫೋಟೊ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಭಗತ್ ಸಿಂಗ್ ಅವರು ಪೂರ್ವಜರ ಹುಟ್ಟೂರಾದ ಖಟ್ಕರ್ ಕಲನ್ ನಲ್ಲಿ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಪಂಜಾಬ್ ಅನ್ನು ಸ್ವಾತಂತ್ರ್ಯ ಹೋರಾಟಗಾರರ ದೇಶವನ್ನಾಗಿ ಮಾಡಬೇಕೆಂಬ ಕನಸನ್ನು ಹೊಂದಿರುವುದಾಗಿ ಸಮಾರಂಭದಲ್ಲಿ ಮಾನ್ ಹೇಳಿದ್ದರು. ಭಗವಂತ್ ಮಾನ್ ತಲೆಗೆ ಹಸಿರು ಬಣ್ಣದ ಟರ್ಬನ್ ಸುತ್ತಿಕೊಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಸಿಎಂ ಕಚೇರಿಯಲ್ಲಿರುವ ಭಗತ್ ಸಿಂಗ್ ಫೋಟೊದಲ್ಲಿ ತಲೆಗೆ ಹಳದಿ ಬಣ್ಣದ ಟರ್ಬನ್ ಇದ್ದಿರುವುದು ವಿವಾದಕ್ಕೆ ಕಾರಣವಾಗಿದೆ.

ಭಗತ್ ಸಿಂಗ್ ಪೋಟೋ ಸಿಎಂ ಕಚೇರಿಯಲ್ಲಿ ಹಾಕಿರುವುದಕ್ಕೆ ಆಕ್ಷೇಪವೇಕೆ?

ಸಂಶೋಧಕರ ಅಭಿಪ್ರಾಯದ ಪ್ರಕಾರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಚೇರಿಯಲ್ಲಿ ಅಳವಡಿಸಿರುವ ಫೋಟೋ ಅಧಿಕೃತ ಭಾವಚಿತ್ರವಲ್ಲ, ಇದೊಂದು ಕಾಲ್ಪನಿಕ ಫೋಟೊ. ದೆಹಲಿಯ ಭಗತ್ ಸಿಂಗ್ ರಿಸೋರ್ಸ್ ಸೆಂಟರ್ ನ ಗೌರವ ಸಲಹೆಗಾರರಾದ ಚಮನ್ ಲಾಲ್ ಅವರ ಪ್ರಕಾರ, ನಾವು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಭಗತ್ ಸಿಂಗ್ ಯಾವತ್ತೂ ಹಳದಿ ಅಥವಾ ಕೇಸರಿ ಬಣ್ಣದ ಟರ್ಬನ್ ಉಪಯೋಗಿಸಿಲ್ಲ. ನಮಗೆ ಭಗತ್ ಸಿಂಗ್ ಅವರ ಕೇವಲ ನಾಲ್ಕು ಒರಿಜಿನಲ್ ಫೋಟೋಗ್ರಾಪ್ಸ್ ಮಾತ್ರ ಲಭ್ಯವಿರುವುದು.

Advertisement

ಒಂದು ಭಗತ್ ಸಿಂಗ್ ಜೈಲಿನಲ್ಲಿ ಕುಳಿತಿರುವುದು, ಮತ್ತೊಂದು ತಲೆಗೆ ಟೋಪಿ ಹಾಕಿಕೊಂಡಿರುವುದು, ಉಳಿದ ಎರಡು ಫೋಟೋಗಳಲ್ಲಿ ತಲೆಗೆ ಬಿಳಿ ಬಣ್ಣದ ಟರ್ಬನ್ ಸುತ್ತಿಕೊಂಡಿರುವುದು. ಇನ್ನುಳಿದಂತೆ ಭಗತ್ ಸಿಂಗ್ ಹಳದಿ, ಕೇಸರಿ ಬಣ್ಣದ ಟರ್ಬನ್ ಧರಿಸಿರುವ ಫೋಟೊಗಳು, ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದಿರುವುದು ಇವೆಲ್ಲಾ ಕಾಲ್ಪನಿಕ ಫೋಟೊಗಳಾಗಿವೆ ಎಂದು ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳು ಭಗತ್ ಸಿಂಗ್ ಅವರ ಹೆಸರನ್ನು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಬದಲು ಅವರ ಸಿದ್ದಾಂತಗಳ ಬಗ್ಗೆ ಯುವಕರ ಜೊತೆ ಚರ್ಚಿಸಬೇಕು. ರಾಜಕೀಯ ಉದ್ದೇಶಕ್ಕಾಗಿ ಕಾಲ್ಪನಿಕ ಫೋಟೋಗಳನ್ನು ಬಳಸಿಕೊಳ್ಳಬಾರದು. ಕಾಲ್ಪನಿಕ ಭಾವಚಿತ್ರ ಹೊರತುಪಡಿಸಿ ಪಂಜಾಬ್ ಸರ್ಕಾರ ಭಗತ್ ಸಿಂಗ್ ಅವರ ನಾಲ್ಕು ಒರಿಜಿನಲ್ ಫೋಟೋಗಳಲ್ಲಿ ಒಂದನ್ನು ಕಚೇರಿಯಲ್ಲಿ ಬಳಸಿಕೊಳ್ಳಲಿ ಎಂದು ಪ್ರೊ.ಲಾಲ್ ಸಲಹೆ ನೀಡಿದ್ದಾರೆ.

ಭಗತ್ ಸಿಂಗ್ ಟರ್ಬನ್ V/s ಹಳದಿ ಬಣ್ಣ

ಈ ಹಳದಿ ಬಣ್ಣ ತಳುಕು ಹಾಕಿಕೊಂಡಿರುವುದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ರೈತರು ಹಳದಿ ಬಾವು ಮತ್ತು ಹಳದಿ ಟರ್ಬನ್ ಬಳಕೆ ಮಾಡಿದ್ದರು. ಭಗತ್ ಸಿಂಗ್ ಸಿನಿಮಾದಲ್ಲಿ ಭಗತ್ ಸಿಂಗ್ ಮತ್ತು ಇತರ ಕ್ರಾಂತಿಕಾರಿಗಳ ನಟನೆಯಲ್ಲಿ ಬೇರೆ ಬಣ್ಣದ ಟರ್ಬನ್ ಬಳಸಲಾಗಿದೆ. ಆದರೆ ಸತ್ಯಾಂಶ ಏನೆಂದರೆ ಕೇವಲ ಭಗತ್ ಸಿಂಗ್ ಮಾತ್ರವಲ್ಲ, ಯಾವುದೇ ಕ್ರಾಂತಿಕಾರಿ ಹಳದಿ ಬಣ್ಣದ ಟರ್ಬನ್ ಬಳಸಿರುವುದಕ್ಕೆ ಪುರಾವೆ ಇಲ್ಲ. ಮೇರಾ ರಂಗ ದೇ ಬಸಂತಿ ಚೋಲಾ ಹಾಡನ್ನು ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್ ರಚಿಸಿದ್ದು ಈ ಹಾಡು ತುಂಬಾ ಜನಪ್ರಿಯವಾಗಿದೆ. ರಾಮ್ ಪ್ರಸಾದ್ ಬಿಸ್ಮಿಲ್ಲಾ ಅವರನ್ನು 1927ರಲ್ಲಿ ಗೋರಖ್ ಪುರ್ ಜೈಲಿನಲ್ಲಿ ನೇಣಿಗೇರಿಸಲಾಗಿತ್ತು. ಭಗತ್ ಸಿಂಗ್ ಅವರನ್ನು 1931ರಲ್ಲಿ ಲಾಹೋರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಗಿತ್ತು. ಆದರೆ ಇವರಿಬ್ಬರು ಒಟ್ಟಿಗೆ ಒಂದೇ ಜೈಲಿನಲ್ಲಿ ಇರಲಿಲ್ಲವಾಗಿತ್ತು. ಕೇವಲ ಭಗತ್ ಸಿಂಗ್ ಸಿನಿಮಾದಲ್ಲಿ ಮಾತ್ರ ಮೇರಾ ರಂಗ ದೇ ಬಸಂತಿ ಚೋಲಾ ಹಾಡನ್ನು ಹಾಡಿರುವುದಾಗಿ ಚಿತ್ರೀಕರಿಸಲಾಗಿದೆ. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಲಾಲ್ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಭಗತ್ ಸಿಂಗ್ ಕುಟುಂಬ ಹೇಳುವುದೇನು?

ಭಗತ್ ಸಿಂಗ್ ಸಂಬಂಧಿ 77 ವರ್ಷದ ಜಗ್ ಮೋಹನ್ ಸಿಂಗ್ ಅವರ ಪ್ರಕಾರ, ಪಂಜಾಬ್ ಹಾಗೂ ಇಡೀ ದೇಶಾದ್ಯಂತ ಭಗತ್ ಸಿಂಗ್ ಅವರ ದೃಷ್ಟಿಕೋನವನ್ನು ಹೇಗೆ ಅನುಷ್ಠಾನಗೊಳಿಸುತ್ತೀರಿ ಎಂಬುದು ಮುಖ್ಯ ಎಂದು ತಿಳಿಸಿದ್ದಾರೆ. ನಿಜಕ್ಕೂ ಭಗತ್ ಸಿಂಗ್ ಅವರು ಕೇವಲ ನಾಲ್ಕು ಒರಿಜಿನಲ್ ಫೋಟೋಗಳು ಮಾತ್ರ ಇರುವುದು. ಭಗತ್ ಸಿಂಗ್ ಯಾವತ್ತೂ ಹಳದಿ ಬಣ್ಣದ ಟರ್ಬನ್ ಧರಿಸಿಲ್ಲ. ಆದರೆ ಹಳದಿ ಬಣ್ಣ ಕಲಾವಿದರ ಕಾಲ್ಪನಿಕ ದೃಷ್ಟಿಕೋನದ್ದಾಗಿದೆ. ಸಂವಿಧಾನದ ಆಶಯದ ಪ್ರಕಾರ ಸಾಮಾಜಿಕ ನ್ಯಾಯಕ್ಕಾಗಿ ಡಾ.ಬಿಆರ್ ಅಂಬೇಡ್ಕರ್ ಅವರ ದೃಷ್ಟಿಕೋನದ ಬಗ್ಗೆ ಚರ್ಚಿಸಬೇಕಾಗಿದೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಸರ್ಕಾರ ಈ ಇಬ್ಬರ ದೃಷ್ಟಿಕೋನವನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿರುವುದಾಗಿ ವರದಿ ತಿಳಿಸಿದೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next