ಅಮೀನಗಡ: ಸಂಸ್ಕಾರ, ಸಂಸ್ಕೃತಿ, ದಾಸೋಹ ಸತ್ಸಂಗದಂತಹ ಕಾರ್ಯಕ್ರಮಗಳ ಮೂಲಕ ಮಠಮಾನ್ಯಗಳು ನಾಡಿನ ಸೇವೆಯಲ್ಲಿ ತೊಡಗಿಸಿಕೊಂಡಿವೆ. ನಾಡಿನ ಪ್ರಗತಿ ಮತ್ತು ಏಳ್ಗೆಯಲ್ಲಿ ಮಠಮಾನ್ಯಗಳ ಪಾತ್ರ ಅಪಾರವಾಗಿದೆ ಎಂದು ಘನಮಠೇಶ್ವರ ಮಠದ ದತ್ತಾತ್ರೇಯ ಅವಧೂತ ಸ್ವಾಮೀಜಿ ಹೇಳಿದರು.
ಹುಲಗಿನಾಳ ಗ್ರಾಮದ ಕೃಷಿಋಷಿ ಜ್ಞಾನ ವೈರಾಗ್ಯ ಚಕ್ರವರ್ತಿ ಶ್ರೀ ಘನಮಠೇಶ್ವರ ಮತ್ತು ಗ್ರಾಮದ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹುಲಗಿನಾಳ ಘನಮಠೇಶ್ವರ ಮಠ ಸರ್ವಧರ್ಮಿಯರ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಒಳ್ಳೆಯ ಸಮಾಜವನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯ ಎಂದರು.
ಘನಮಠೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಉದ್ದೇಶ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಳಿಗೆ ವರದಾನವಾಗಿದೆ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಸಮಾಜದಲ್ಲಿ ಸಾಮರಸ್ಯದ ವಾತಾವರಣ ಮೂಡಿಸುತ್ತವೆ ಎಂದರು.
ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕೇವಲ ಒಂಬತ್ತು ತಿಂಗಳಲ್ಲಿಯೇ ಹುಲಗಿನಾಳ ಗ್ರಾಮದ ಘನಮಠೇಶ್ವರ ಮಠವನ್ನು ದತ್ತಾತ್ರೇಯ ಅವಧೂತ ಸ್ವಾಮೀಜಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡುವುದರ ಜೊತೆಗೆ ಈ ಭಾಗದ ಸಾವಿರಾರು ಭಕ್ತರಿಗೆ ಆಧ್ಯಾತ್ಮದ ಮೌಲ್ಯವನ್ನು ತಿಳಿಸುತ್ತಿದ್ದಾರೆ ಎಂದರು.
ಭೀಮನಗಡ ಕಲ್ಲಿನಾಥ ಸ್ವಾಮೀಜಿ, ನೀಲಕಂಠೇಶ್ವರ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ, ಗದಗದ ಶಿವಾನಂದೇಶ್ವರ ಶಾಸ್ತ್ರಿಗಳು, ಸಿದ್ದನಕೊಳ್ಳದ ಬಸಯ್ಯ ಹಿರೇಮಠ ಅಜ್ಜನವರು, ಹಾಲುಮತ ಸಮಾಜದ ಗುರುಗಳಾದ ಗುರುಮಹಾಂತ ಸ್ವಾಮೀಜಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 21 ನವಜೋಡಿಗಳ ವಿವಾಹ ನೆರವೇರಿತು. ದಾನಿಗಳು ಮತ್ತು ಯೋಧರನ್ನು ಸನ್ಮಾನಿಸಲಾಯಿತು. ಘನಮಠೇಶ್ವರ ಟ್ರಸ್ಟ್ ಅಧ್ಯಕ್ಷ ಸಂಗಣ್ಣ ದೇಸಾಯಿ,ಸಂಗಯ್ಯ ಗುರುವಿನಮಠ,ಪರಸಪ್ಪ ಚಿತ್ತರಗಿ, ಹನಮಂತಪ್ಪ ಹಗೇದಾಳ, ಕಸಾಪ ಅಧ್ಯಕ್ಷ ಆರ್. ನರಸಿಂಹಮೂರ್ತಿ, ಮಲ್ಲನಗೌಡ ಪಾಟೀಲ, ಚನ್ನಪ್ಪ ಬಸರಕೋಡ, ವೀರಭದ್ರಯ್ಯ ಹಿರೇಮಠ, ಸಿದ್ದಪ್ಪ ಕರಿಯಣ್ಣನವರ, ಯಮನೂರಿ ಮಾದರ, ಜ್ಯೂನಿಯರ್ ಉಪೇಂದ್ರ ಆರ್.ಡಿ. ಬಾಬು, ಪ್ರಭು ಮಾಲಗಿತ್ತಿಮಠ ಸೇರಿದಂತೆ ಇನ್ನಿತರರು ಇದ್ದರು.