Advertisement

ಪ್ರತ್ಯೇಕತಾವಾದಿಗಳ ಕುಕೃತ್ಯ ನಿಯಂತ್ರಿಸಿ

07:30 AM Sep 07, 2017 | Team Udayavani |

ನೇಪಿತಾವ್‌: ಮ್ಯಾನ್ಮಾರ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ರಾಖೀನೇ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಪರಸ್ಪರ ಕುಳಿತು ಮಾತುಕತೆ ನಡೆಸುವ ಮೂಲಕ ಹಿಂಸಾಚಾರ ಕೊನೆಗಾಣಿಸಬೇಕು ಎಂದು ಸಲಹೆ ನೀಡಿದ್ದಾರೆ. 

Advertisement

ಈ ಪ್ರದೇಶದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಒಂದೂಕಾಲು ಲಕ್ಷ ಮಂದಿ ರೋಹಿಂಗ್ಯಾ ಮುಸಲ್ಮಾನರು ನೆರೆಯ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ. ಉಗ್ರರ ಉಪಟಳ ನಿಯಂತ್ರಣಕ್ಕಾಗಿ ಮ್ಯಾನ್ಮಾರ್‌ ಸೇನೆ ಕಾರ್ಯಾಚರಣೆ ಶುರು ಮಾಡಿದ ಮೇಲೆ ಇವರೆಲ್ಲಾ ವಲಸೆ ಹೋಗಿದ್ದಾರೆ. ಈ ಸಂಬಂಧ ಬುಧವಾರ ಅಲ್ಲಿನ ಕೌನ್ಸೆಲರ್‌ ಆಂಗ್‌ ಸಾನ್‌ ಸೂಕಿ ಜತೆ ಮಾತುಕತೆ ನಡೆಸಿ, ಬಳಿಕ ಜಂಟಿ ಪತ್ರಿಕಾಗೋಷ್ಠಿ ಇಬ್ಬರೂ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. 
ಮಂಗಳವಾರವಷ್ಟೇ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಕಿರಣ್‌ ರಿಜಿಜು ಅವರು, ಭಾರತದಲ್ಲಿರುವ ರೋಹಿಂಗ್ಯಾ ಮುಸಲ್ಮಾನರು ತಾತ್ಕಾಲಿಕ ವಲಸಿಗರಷ್ಟೇ. ಇವರು ತಮ್ಮ ದೇಶಕ್ಕೆ ವಾಪಸ್‌ ಹೋಗಲೇಬೇಕು ಎಂದು ಹೇಳಿದ್ದರು.

ಅಲ್ಲದೆ ಭಾರತದ ಈ ನೀತಿ ಬಗ್ಗೆ ಟೀಕಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ಜಗತ್ತಿನಲ್ಲೇ ಅತಿಹೆಚ್ಚು ವಲಸಿಗರನ್ನು ಪೋಷಿಸುತ್ತಿರುವ ಭಾರತಕ್ಕೆ ಈ ಬಗ್ಗೆ ಪಾಠ ಹೇಳಬೇಕಾಗಿಲ್ಲ ಎಂದಿದ್ದರು. ಇದಾದ ಮಾರನೇ ದಿನವೇ ಮೋದಿ ಅವರು ಮ್ಯಾನ್ಮಾರ್‌ನಲ್ಲೇ ಮಾತನಾಡಿದ್ದು, ಶಾಂತಿ ಸ್ಥಾಪನೆಗಾಗಿ ಎಲ್ಲರೂ ಕುಳಿತು ಮಾತನಾಡಿ, ಸಮಸ್ಯೆಗೊಂದು ಪರಿಹಾರ ಹುಡು ಕಬೇಕು. ಈ ಮೂಲಕ ಮ್ಯಾನ್ಮಾರ್‌ನ ಸಮಗ್ರತೆ ಕಾಯ್ದುಕೊಳ್ಳಬೇಕು ಎಂದರು. ಅಲ್ಲದೆ ಯಾವುದೇ ಕಾರಣಕ್ಕೂ ಉಗ್ರವಾದ ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಭಾರತವೂ ಮ್ಯಾನ್ಮಾರ್‌ ಜತೆಯಲ್ಲಿದೆ ಎಂದು ಭರವಸೆ ನೀಡಿದರು. 

ಇವರಿಬ್ಬರ ಮಾತುಕತೆ ವೇಳೆ 11 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರಲ್ಲಿ ಮ್ಯಾನ್ಮಾರ್‌ಗೆ ಡೀಸೆಲ್‌ ಪೂರೈಕೆ ಮಾಡುವುದೂ ಸೇರಿದೆ. ಭಾರತ ಮತ್ತು ಮ್ಯಾನ್ಮಾರ್‌ ನೆರೆ ಹೊರೆಯ ದೇಶಗಳಾಗಿದ್ದು 1640 ಕಿ.ಮೀ. ಗಡಿಯನ್ನು ಹಂಚಿಕೊಂಡಿವೆ. 

ಇದಾದ ಬಳಿಕ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next