ಕುಂದಾಪುರ: ಗ್ರಾಮೀಣ ಭಾಗಗಳಲ್ಲಿ ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಹಾಗೂ ಉತ್ತಮ ಫಸಲನ್ನು ಕಂಡುಕೊಳ್ಳಲು ಈ ಭಾಗದ ಜನರು ಅನೇಕ ಮಾರ್ಗೋಪಾಯಗಳನ್ನು ಅನುಸರಿಸುತ್ತಿದ್ದರು ಎನ್ನುವುದಕ್ಕೆ ಗದ್ದೆಯ ಮಧ್ಯೆದಲ್ಲಿ ಇರುವ ಹಳ್ಳಿಮನೆಗಳೇ ಸಾಕ್ಷಿಯಾಗಿವೆ. ಆಧುನಿಕತೆಯ ಭರಾಟೆಯಲ್ಲಿ ಕೃಷಿ ಭೂಮಿಗಳು ಮರೆಯಾಗುತ್ತಿದ್ದು, ಈ ಹಳ್ಳಿ ಮನೆಗಳು ಕೇವಲ ಚಿತ್ರಪಟದ ಸುದ್ದಿಯಾಗುತ್ತಿದೆ. ಕಾಡಿನ ಬಳಿಯ ಭತ್ತದ ಗದ್ದೆಗಳ ಮಧ್ಯದಲ್ಲಿರುವ ಪುಟ್ಟ ಮನೆಯಾಕೃತಿಯ ಗುಡಿಸಲನ್ನು ಕಟ್ಟಿಕೊಂಡು ಕೃಷಿ ಪ್ರದೇಶಕ್ಕೆ ನುಗ್ಗುವ ಕಾಡು ಪ್ರಾಣಿಗಳನ್ನು ಓಡಿಸುವ ಈ ಹಳೇ ತಂತ್ರಗಾರಿಕೆಯೇ ಅಂದಿನ ರೈತರ ಕಾವಲಿನ ರಕ್ಷಣಾ ಕೊಠಡಿ ಅಥವಾ ಕಂಟ್ರೋಲ್ ರೂಂ ಆಗಿದೆ.
Advertisement
ಗ್ರಾಮೀಣ ಪ್ರದೇಶದ ರೈತರು ತಮ್ಮ ಭೂಮಿಯಲ್ಲಿ ಮೂರು ಭತ್ತದ ಬೆಳೆಯನ್ನು ತೆಗೆಯುತ್ತಿದ್ದ ಕಾಲ ಇತ್ತು. ಆದ್ದರಿಂದ ಈ ಸಮಯದಲ್ಲಿ ರೈತ ಪ್ರತಿದಿನ ತಮ್ಮ ಫಸಲು ರಕ್ಷಣೆಗಾಗಿ ರಾತ್ರಿ ಹೊತ್ತು ಈ ಹಳ್ಳಿಮನೆಯಲ್ಲಿಯೇ ತಂಗಬೇಕಾದ ಆವಶ್ಯಕತೆ ಇತ್ತು.
ಮೂರು ನಾಲ್ಕು ಗದ್ದೆಗಳ ಮಧ್ಯೆದಲ್ಲಿ ಈ ಪುಟ್ಟ ಹಳ್ಳಿ ಮನೆ ನಿರ್ಮಾಣ ಆಗುತ್ತದೆ. ಇದಕ್ಕೆ ನಾಲ್ಕು ದೊಡ್ಡ ಗಾತ್ರದ ಭೋಗಿ ಮರದ ಕಂಬ, ಅಡಿಕೆ ಮರದ ರೀಪು ಹಾಗೂ ಮೇಲ್ಗಡೆ ಬಿಸಿಲು ಮಳೆ ಗಾಳಿ ರಕ್ಷಣೆಗೆ ಅಡಿಕೆ ಸೋಗೆಯ ಹೊದಿಕೆಗಳಾದ್ದರೆ ಹಳ್ಳಿಮನೆ ಸಿದ್ಧವಾಗುತ್ತದೆ. ನೆಲಮಟ್ಟದಿಂದ ಸುಮಾರು ಆರು ಅಡಿ ಎತ್ತರದಲ್ಲಿ ಅಡಿಕೆ ಮರದ ರೀಪುಗಳನ್ನು ಹಲಗೆ ಆಕಾರದಲ್ಲಿ ಜೋಡಿಸಿ ಅದಕ್ಕೆ ಗೋಣಿ ಚೀಲ ಹಾಸಿ, ಓಲೆಯ ಚಾಪೆಯನ್ನು ಮಲಗಲು ಇಡಲಾಗುವುದು. ಅಲ್ಲದೇ ಹಳ್ಳಿ ಮನೆಯ ಕಾವಲುಗಾರನಿಗೆ ನಾಲ್ಕು ದಿಕ್ಕುಗಳನ್ನು ನೋಡಲು ನಾಲ್ಕು ಕಂಡಿಯನ್ನು ಇಡಲಾಗುತ್ತದೆ. ಈ ಹಳ್ಳಿಮನೆಯಲ್ಲಿ ನಿಲ್ಲುವ ಕಾವಲುಗಾರ ಯಾವುದಾದರೂ ಪ್ರಾಣಿಗಳು ಗದ್ದೆಗೆ ಇಳಿದಾಗ ತತ್‌ಕ್ಷಣ ಹಳ್ಳಿಮನೆಯಿಂದ ನಾಲ್ಕು ಕಡೆ ಹಗ್ಗದ ಮೂಲಕ ಡಬ್ಬವನ್ನು ಕಟ್ಟಿ ಶಬ್ದ ಮಾಡಿ ಪ್ರಾಣಿಗಳು ಗದ್ದೆಗೆ ಇಳಿಯದಂತೆ ಕೂಗಾಡುತ್ತಾನೆ. ಒಟ್ಟಾರೆ ಇದು ವರ್ಷ ಇಡೀ ಕಾರ್ಯಾಚರಣೆ.
Related Articles
ಕಾಲ ಬದಲಾದಂತೆ ಭತ್ತದ ಗದ್ದೆಗಳು ವಿನಾಶದ ಅಂಚಿಗೆ ಹೋಗಿದ್ದು, ಹಳ್ಳಿಮನೆಗಳು ಅಲ್ಲೊಂದು ಇಲ್ಲೊಂದು ನೋಡಲು ಸಿಗುವುದೇ ಇಲ್ಲ. ಅಲ್ಲಿ ಇಲ್ಲಿ ನೋಡಲು ಸಿಕ್ಕಿದರೂ ಆ ಹಳೇ ಕಾಲದ ಹಳ್ಳಿಮನೆಗಳು ಸಾಕಷ್ಟು ಸುಧಾರಿಸಿ ತಗಡು ಅಥವಾ ಹಂಚಿನ ಮಾಡನ್ನು ಹೊಂದಿ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತವೆ.
Advertisement
ಈ ಕಾಲ ಘಟ್ಟದಲ್ಲಿ ಶಂಕರನಾರಾಯಣದ ಕಾರೇಬೈಲು ರಾಜ್ಯ ರಸ್ತೆಯ ಬಳಿಯಲ್ಲಿ ಅಪರೂಪಕ್ಕೆ ಎಂಬಂತೆ ಇರುವ ಹಳ್ಳಿಮನೆ ಎಲ್ಲರನ್ನು ಆಕರ್ಷಿಸುತ್ತಿದೆ.
ಕಾಡು ಪ್ರಾಣಿಗಳಿಂದ ರೈತರ ಬೆಳೆ ನಷ್ಟವಾದರೆ ಹಿಂದೆ ಅರಣ್ಯ ಇಲಾಖೆ ಕಡಿಮೆ ಮೊತ್ತದ ಹಣ ನೀಡುತ್ತಿತ್ತು. ಬಂದ ಹಣಕ್ಕೆ ಹೋಲಿಸಿದ್ದಲ್ಲಿ ರೈತ ದಾಖಲೆ ನೀಡಿ ಅರಣ್ಯ ಇಲಾಖೆಗೆ ತಿರುಗಾಡಲು ಸಾಕಾಗುವುದಿಲ್ಲ . ಈಗ ಇಲಾಖೆಯು ಮೀಸಲು ಅರಣ್ಯದ ತಪ್ಪಲಿನಲ್ಲಿರುವ ಕೃಷಿಭೂಮಿಗಳಿಗೆ ಬೆಳೆ ನಷ್ಟದ ಬಗ್ಗೆ ಸೂಕ್ತ ದಾಖಲೆ ನೀಡಿದರೆ ಪರಿಹಾರವನ್ನು ಹೆಚ್ಚಳ ಮಾಡಿದೆ. ಜತೆಗೆ ವಿದ್ಯುತ್ ಚಾಲಿತ ತಂತಿ ಬೇಲಿಗೆ ಶೇ. 50ರ ಸಬ್ಸಿಡಿಯನ್ನು ಅನುದಾನವನ್ನು ನೀಡುದಾಗಿ ತಿಳಿಸಿದೆ.– ಚಿಟ್ಟೆ ರಾಜಗೋಪಾಲ ಹೆಗ್ಡೆ, ಕಾರ್ಯನಿರ್ವಹಣಾ ಸದಸ್ಯ ಗ್ರಾಮ ಅರಣ್ಯ ಸಮಿತಿ ಉಳ್ಳೂರು-74 – ಉದಯ ಆಚಾರ್ ಸಾಸ್ತಾನ