Advertisement

ಪರಿಸರ ಸ್ವಚ್ಛವಾಗಿದ್ದರೆ ರೋಗಗಳ ನಿಯಂತ್ರಣ

09:23 PM Jul 20, 2019 | Team Udayavani |

ದೇವನಹಳ್ಳಿ: ಪರಿಸರ ಸ್ವಚ್ಛವಾಗಿದ್ದರೆ ಮಲೇರಿಯಾ, ಡೆಂಘೀ, ಚಿಕನ್‌ ಗೂನ್ಯಾದಂತಹ ರೋಗಗಳನ್ನು ನಿಯಂತ್ರಿಸಬಹುದು. ಇಲಾಖೆ ಸೊಳ್ಳೆಗಳ ನಿಯಂತ್ರಣ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ ತಿಳಿಸಿದರು.

Advertisement

ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೀದರಳ್ಳಿ ಗ್ರಾಮದ ಈಸ್ಟ್‌ ಪಾಯಿಂಟ್‌ ನರ್ಸಿಂಗ್‌ ಕಾಲೇಜು ಹಾಗೂ ಆಶಾ ಕಾರ್ಯಕರ್ತೆಯರಿಂದ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೀ ವಿರೋಧಿ ಮಾಸಾಚರಣೆ-2019 ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂನಿಂದ ಸೊಳ್ಳೆ ನಿಯಂತ್ರಣದ ಬಗ್ಗೆ ಅಗತ್ಯ ನಿರ್ದೇಶನ ನೀಡಲಾಗಿದೆ. ಜಾಗೃತಿ ಮೂಡಿಸಲು ಮನೆ ಮನೆಗೆ ತೆರಳುವ ತಂಡಗಳು, ಕುಟುಂಬದ ಆರೋಗ್ಯ ರಕ್ಷಣೆಗಾದರೂ ಸೊಳ್ಳೆಗಳ ನಿಯಂತ್ರಣ ಕ್ರಮಗಳಿಗೆ ಮುಂದಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತ ಸಂಸ್ಥೆಗಳಷ್ಟೇ ಹೊಣಗಾರರಲ್ಲ. ಪ್ರತಿಯೊಬ್ಬರೂ ತಮ್ಮ ಹಾಗೂ ನೆರೆಹೊರೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮುಂಜಾಗ್ರತೆ ಕ್ರಮಅನುಸರಿಸಬೇಕು. ಸೊಳ್ಳೆಗಳ ನಿಯಂತ್ರಣದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಮುತುವರ್ಜಿ ವಹಿಸಬೇಕು. ವಾಸಿಸುವ ಮನೆ ಮತ್ತು ಪರಿಸರಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಇರುವ ಅವಕಾಶ ನಾಶಪಡಿಸಬೇಕು ಎಂದರು.

ಬೂದಿಗೆರೆ ಆಸ್ಪತ್ರೆಯ ವೈದ್ಯೆ ಡಾ.ಖಲೀದಾ ಮಾತನಾಡಿ, ರೋಗ ಬರುವುದಕ್ಕಿಂತ ಮುಂಚೆ ಮುಂಜಾಗ್ರತೆ ವಹಿಸಬೇಕು. ಪ್ರತಿ ಮನೆಯ ನೀರು ಶೇಖರಣೆ ತೊಟ್ಟಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಮನೆಯೊಳಗಿನ ಸೊಳ್ಳೆಯಿಂದ ಡೆಂಘೀ ಹರಡುತ್ತದೆ. ಮನೆಯೊಳಗೂ ಶೇಖರಿಸಿಟ್ಟಿರುವ ನೀರನ್ನು ಮುಚ್ಚಿಡಬೇಕು. ರೋಗ ಅಥವಾ ಸಮಸ್ಯಾತ್ಮಕ ಕೀಟಗಳ ನಿಯಂತ್ರಣಕ್ಕೆ ಸಮುದಾಯದ ಪಾಲ್ಗೊಳ್ಳುವಿಕೆ ಸಹಕಾರ ಅಗತ್ಯ ಎಂದು ಹೇಳಿದರು.

Advertisement

ವಿದ್ಯಾರ್ಥಿಗಳು ಡೆಂಘೀ ಜ್ವರ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಮಾಹಿತಿಯುಳ್ಳ ಫ‌ಲಕಗಳನ್ನು ಹಿಡಿದು ಬೂದಿಗೆರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಮಮತಾ, ಸೀಮಾ, ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next